ಮಂಗಳೂರು ಪಬ್ ಮೇಲೆ ದಾಳಿ ಪ್ರಕರಣ: 30 ಹಿಂದೂ ಕಾರ್ಯಕರ್ತರು ನಿರ್ದೋಷಿ ಎಂದ ನ್ಯಾಯಾಲಯ
ಮಂಗಳೂರು: ಮಂಗಳೂರಿನ ಪಬ್ ಒಂದರ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ ಹಿಂದೂ ಕಾರ್ಯಕರ್ತರಿಗೆ ಕೊನೆಗೂ ಮುನ್ನಡೆ ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 30 ಜನರ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
2009ರ ಪ್ರೇಮಿಗಳ ದಿನಾಚರಣೆಯಂದು ಪಬ್ ವೊಂದರಲ್ಲಿ ಮಹಿಳೆಯರು ಅಶ್ಲೀಲ ಉಡುಪು ತೊಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಶ್ರೀರಾಮಸೇನೆ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ಮಾಡಿ, ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈಗ ಪ್ರಕರಣದ ಆರೋಪಿಗಳ ವಿಚಾರಣೆ ನಡೆಸಿದ ಮಂಗಳೂರು ನ್ಯಾಯಾಲಯ, ಸಾಕ್ಷ್ಯಾಧಾರಗಳ ಕೊರತೆ ಇರುವ ಕಾರಣದಿಂದ ಹಿಂದೂ ಕಾರ್ಯಕರ್ತರ ವಿರುದ್ಧದ ಪ್ರಕರಣ ಖುಲಾಸೆಗೊಳಿಸಿದೆ.
ಆದಾಗ್ಯೂ, ನ್ಯಾಯಾಲಯದ ತೀರ್ಪಿನಿಂದ ಶ್ರೀರಾಮಸೇನೆ ಸಂಘಟನೆಯ ಮುಖಂಡ ಪ್ರಮೋದ್ ಮುತಾಲಿಕ್ ಸಂತಸ ವ್ಯಕ್ತಪಡಿಸಿದ್ದು, ಇದು ಸತ್ಯಕ್ಕೆ ಸಿಕ್ಕ ಜಯ ಎಂದು ವರ್ಣಿಸಿದ್ದಾರೆ.
ಪಬ್ ಮೇಲೆ ದಾಳಿ ಪ್ರಕರಣ ಇಡೀ ದೇಶದ ಗಮನ ಸೆಳೆದಿದ್ದು, ವ್ಯಕ್ತಿ ಸ್ವಾತಂತ್ರ್ಯದ ಹರಣ, ಹಿಂದೂ ಗೂಂಡಾಗಿರಿ ಎಂದೆಲ್ಲ ಸಂಘಟನೆಯ ಕಾರ್ಯಕರ್ತರ ವಿರುದ್ಧ ಆರೋಪ ಮಾಡಲಾಗಿತ್ತು. ಆದರೆ ಕೊನೆಗೂ 30 ಜನರ ವಿರುದ್ಧದ ಪ್ರಕರಣ ಖುಲಾಸೆಗೊಳಿಸುವ ಮೂಲಕ ಹಿಂದೂ ಕಾರ್ಯಕರ್ತರ ಕೈವಾಡ ಅಲ್ಲಗಳೆದಂತಾಗಿದೆ.
Leave A Reply