ಬೆಂಗಳೂರು ವಿವಿ ಆವರಣದ ಶ್ರೀಗಂಧ ಕಳ್ಳತನವಾದರೂ ಮಲಗಿದೆಯಾ ಅರಣ್ಯ ಇಲಾಖೆ, ವಿವಿ ಆಡಳಿತ?
ಬೆಂಗಳೂರು: ಕಸ ವಿಲೇವಾರಿ ಮಾಡದೆ, ರಸ್ತೆಯ ಗುಂಡಿ ಮುಚ್ಚದೆ ಸಿಲಿಕಾನ್ ಸಿಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಬೆನ್ನಲ್ಲೇ, ಈಗ ಬೆಂಗಳೂರಿನಲ್ಲಿ ಮತ್ತೊಂದು ಪ್ರಮಾದ ನಡೆದಿದ್ದು, ಸರ್ಕಾರ, ವಿವಿ ಆಡಳಿತ ಮಂಡಳಿ ಏನು ಮಾಡುತ್ತಿದೆ ಎಂಬ ಮಾತುಕೇಳಿಬಂದಿವೆ.
ಹೌದು, ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಜೈವಿಕ ಉದ್ಯಾನದಲ್ಲಿ ಹೇರಳವಾಗಿ ಶ್ರೀಗಂಧದ ಮರ ಬೆಳೆದಿದ್ದು, ಕಳೆದ ಒಂದು ವರ್ಷದಲ್ಲಿ ಸುಮಾರು 36ಕ್ಕೂ ಅಧಿಕ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮಾಹಿತಿ ಹಕ್ಕು ಕಾಯಿದೆ (ಆರ್ ಟಿಇ) ಅನ್ವಯ ವಿಶ್ವವಿದ್ಯಾಲಯವೇ ಈ ಕುರಿತು ಮಾಹಿತಿ ನೀಡಿದ್ದು, ಕಳೆದ ವರ್ಷದ ಡಿಸೆಂಬರ್ ತಿಂಗಳೊಂದರಲ್ಲೇ ಸುಮಾರು 26 ಶ್ರೀಗಂಧದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಣೆ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಆದಾಗ್ಯೂ, ಒಂದು ಸಾವಿರ ಎಕರೆಯಲ್ಲಿ ವಿವಿ ಕ್ಯಾಂಪಸ್ ವ್ಯಾಪಿಸಿದ್ದು, ಹೇರಳವಾಗಿ ಶ್ರೀಗಂಧದ ಮರಗಳು ಬೆಳೆದಿವೆ. ಆದರೆ ಕೆಲವು ಕಾಳಧನಿಕರು, ದಂಧೆಕೋರರು ಮರಗಳನ್ನು ಕಡಿಯಲು ಮುಂದಾಗಿದ್ದು, ಇಷ್ಟಾದರೂ ವಿವಿ ಆಡಳಿತವಾಗಲಿ, ಅರಣ್ಯ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಆದಾಗ್ಯೂ, ಈ ಕುರಿತು ಹಲವು ಆರ್ಟಿಇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ನಾವು ಪ್ರತಿ ಬಾರಿ ದೂರು ನೀಡಿದಾಗಲೂ ವಿವಿ ಆಡಳಿತ ಮಂಡಳಿ ಗಸ್ತುಪಡೆ ನಿಯೋಜಿಸುತ್ತದೆ. ಆದರೆ ಆ ಗಸ್ತು ಪಡೆ ಕೆಲವೇ ದಿನಗಳಿಗೆ ಸೀಮಿತವಾಗಲಿದ್ದು, ಮತ್ತೆ ಎಂದಿನ ಚಾಳಿ ಮುಂದುವರಿಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯ ಖಂಡಿಸದ ಅರಣ್ಯ ಇಲಾಖೆ, ಸರ್ಕಾರವೇನು ಮಲಗಿದೆಯಾ ಎಂಬುದು ಸಿಲಿಕಾನ್ ಸಿಟಿ ಜನರ ಆಕ್ರೋಶಭರಿತ ಪ್ರಶ್ನೆಯಾಗಿದೆ.
Leave A Reply