ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲ, ಶಾಸಕರದ್ದು ಮಾತ್ರ ನೂರು ಪುಟದ ಸಾಧನೆಯ ಪುಸ್ತಕ!!
ಯಾವ ಕೆಲಸ ಮಾಡಿದರೆ ನೂರಾರು ಜನರಿಗೆ ನಿತ್ಯ ಉಪಯೋಗ ಆಗುತ್ತದೆಯೋ ಅದನ್ನು ನಮ್ಮ ಶಾಸಕರು ಮಾಡುತ್ತಿಲ್ಲ. ಅದು ಬಿಟ್ಟು ಈಗ ಏನಿದ್ದರೂ ಫೋಟೋ, ವಿಡಿಯೋಗೆ ಎದ್ದು ಕಾಣುವ ಕೆಲಸಗಳು ಮಾತ್ರ ಅವರಿಗೆ ಹೊಳೆಯೋದು. ಅಂದರೆ ಅದರಿಂದ ಜನರಿಗೆ ಪ್ರಯೋಜನ ಎಷ್ಟಾಗುತ್ತದೆಯೋ ದೇವರೇ ಬಲ್ಲ. ಆದರೆ ತಮ್ಮ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಇವರು ಜನರಿಗೆ ಉಪಯೋಗವಾಗುವುದಕ್ಕಿಂತ ಜನಪ್ರಿಯ ಕಾರ್ಯಕ್ರಮ ಮಾಡುವುದರಲ್ಲಿಯೇ ಇಡೀ ಜೀವವನ್ನು ಸವೆಸುತ್ತಿದ್ದಾರೆ. ಇವರ ಯಾವ ಕೆಲಸದಿಂದ ಪ್ರಯೋಜನವಿಲ್ಲ ಮತ್ತು ಯಾವ ಕೆಲಸ ಕರೆಕ್ಟಾಗಿ ಮಾಡಿದರೆ ದಿನಕ್ಕೆ ನೂರಾರು ಜನರಿಗೆ ಉಪಯೋಗವಾಗುತ್ತದೆ ಎನ್ನುವುದನ್ನು ಈಗ ವಿವರಿಸುತ್ತೇನೆ.
ಮೊದಲನೇಯದಾಗಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಐವತ್ತು ಶೇಕಡಾ ಸ್ಟಾಫ್ ಕಡಿಮೆ ಇದ್ದಾರೆ. ನೂರು ಜನ ಇರಬೇಕಾದ ಕಡೆ ಐವತ್ತೇ ಜನ ಇದ್ದರೆ ಜನರ ಕೆಲಸ ಎಷ್ಟು ಬೇಗವಾಗಿ ಆಗುತ್ತೆ ನೀವೆ ಹೇಳಿ. ನಮ್ಮ ಪಾಲಿಕೆಯಲ್ಲಿ ಎರಡು ಸಹಾಯಕ ಆಯುಕ್ತ ಮತ್ತು ಸೂಪರಿಟೆಂಡೆಟ್ ಇಂಜಿನಿಯರ್ ಪೋಸ್ಟ್ ಖಾಲಿ ಇದೆ. ಇದು ನಮ್ಮ ಮಂಗಳೂರು ನಗರ ದಕ್ಷಿಣ ಶಾಸಕ ಜೆ ಆರ್ ಲೋಬೋ ಅವರಿಗೆ ಗೊತ್ತಾಗುವುದಿಲ್ಲವೇ. ಶಾಸಕ ಮೊಯ್ದೀನ್ ಬಾವ ಅವರಾದರೆ ಬಿಡಿ, ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಯ ಸಂಗೀತಕ್ಕೆ ತಮ್ಮನ್ನು ಹೊಗಳುವ ಸಾಹಿತ್ಯ ಹಾಕಿ ಊರೂರು ಸುತ್ತಿ ಪ್ರಚಾರ ಮಾಡುವುದರಲ್ಲಿಯೇ ಬ್ಯುಸಿ ಇರುವುದರಿಂದ ಅವರಿಗೆ ಇದು ಬಿದ್ದು ಹೋಗಿಲ್ಲ. ಆದರೆ ಶಾಸಕ ಜೆ ಆರ್ ಲೋಬೋ ಅಧಿಕಾರಿಯಾಗಿ ನಂತರ ರಾಜಕೀಯ ಪ್ರವೇಶಿಸಿದವರು. ಪಾಲಿಕೆಯಲ್ಲಿ ಕೆಲಸ ಬೇಗ ಆಗಬೇಕಾದರೆ ಏನು ಮಾಡಬೇಕು ಎನ್ನುವುದು ಅವರಿಗೆ ಗೊತ್ತಿರಬೇಕಿತ್ತು. ಕಳೆದ ಬಾರಿ ಮೇಯರ್ ಆಗಿದ್ದಾಗ ಕವಿತಾ ಸನಿಲ್ ಸುದ್ದಿಗೋಷ್ಟಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಕೆಲಸಗಳು ಶೀಘ್ರವಾಗಿ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಲೋಬೋ ಅವರು ಈ ಬಗ್ಗೆ ಏನು ಮಾಡಿಲ್ಲವೆಂದರೆ ಅದಕ್ಕಿಂತ ನಿರ್ಲಕ್ಷ್ಯ ಬೇರೆ ಇದೆಯಾ? ಹಾಗಂತ ಅದು ಲೋಬೋ ಅವರಿಗೆ ಗೊತ್ತಿಲ್ಲವೆಂದಲ್ಲ. ಆದರೂ ಆ ಬಗ್ಗೆ ಗಮನ ಹರಿಸಿಲ್ಲ.
ಆರ್ ಟಿಒ ಇಲ್ಲದೆ ಎಷ್ಟು ತಿಂಗಳಾಯಿತು…
ಇನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿಯ ಅವ್ಯವಸ್ಥೆ. ಮಂಗಳೂರಿನ ಆರ್ ಟಿಒ ಕಚೇರಿ ಎಷ್ಟು ಬ್ಯುಸಿ ಇರುವ ಸರಕಾರಿ ವ್ಯವಸ್ಥೆ ಎನ್ನುವುದು ಲೋಬೋ ಅವರಿಗೆ ಗೊತ್ತಿಲ್ಲದೆ ಇದ್ದರೆ ಅವರು ಶಾಸಕರಾಗಿರುವುದೇ ವೇಸ್ಟ್. ಅಲ್ಲಿ ನೋಡಿದರೆ ಕಳೆದ ಎರಡು ವರ್ಷಗಳಳ್ಲಿ ಒಬ್ಬನೇ ಒಬ್ಬ ಪೂರ್ಣಾವಧಿಯ ಆರ್ ಟಿಒ ಬಂದು ಅಧಿಕಾರ ನಡೆಸಿಲ್ಲ. ಮಧ್ಯದಲ್ಲಿ ಮೂರು ತಿಂಗಳು ಒಬ್ಬರು ಇದ್ದರು ಬಿಟ್ಟರೆ ಇಲ್ಲಿಯ ತನಕ ಯಾರನ್ನು ಕೂಡ ಪೂರ್ಣಕಾಲಿಕವಾಗಿ ತಂದು ಕೂರಿಸಲು ನಮ್ಮ ಶಾಸಕರಿಗೆ ಆಗಿಲ್ಲ. ಅದೇ ಒಂದು ರಸ್ತೆಯಲ್ಲಿ ಗುದ್ದಲಿ ಪೂಜೆ ಇದೆ ಎಂದಾದರೆ ನಾಳೆನೆ ಹೋಗೋಣ ಎಂದು ಹೇಳುವ ಶಾಸಕ ಲೋಬೋ ಅವರು ಎರಡು ವರ್ಷಗಳಿಂದ ಒಬ್ಬ ಆರ್ ಟಿಒ ಅವರನ್ನು ಅಲ್ಲಿ ತರಲಿಲ್ಲ ಎಂದಾದರೆ ಇವರು ಮಾಡಿದ್ದು ಬರಿ ಗುದ್ದಲಿ ಪೂಜೆನಾ?
ನಮ್ಮ ಮಂಗಳೂರಿನ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ರಾಜ್ಯದಲ್ಲಿಯೇ ಎರಡನೇ ಅತೀ ಹೆಚ್ಚು ಆದಾಯವುಳ್ಳ ಇಲಾಖೆ. ಇಲ್ಲಿ 87 ಜನ ಉದ್ಯೋಗಿಗಳು ಇರಬೇಕಾದ ಕಡೆ 40 ಜನ ಮಾತ್ರ ಇದ್ದಾರೆ. ಅಂದರೆ ಇಬ್ಬರ ಕೆಲಸವನ್ನು ಒಬ್ಬರು ಇಲ್ಲಿ ಕೂಡ ಮಾಡುತ್ತಿದ್ದಾರೆ. ಇನ್ನು ಇತ್ತೀಚಿನ ಕೆಲವು ಸಮಯದಿಂದ ಪರಿಸ್ಥಿತಿ ಇನ್ನೂ ಕೂಡ ಹಾಳಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ್ ರೈ ಅವರು ಬಂಟ್ವಾಳದಲ್ಲಿ ಆರ್ ಟಿಒ ಉಪಕಚೇರಿ ತೆರೆಯುವಾಗ ಇಲ್ಲಿಂದ ಒಂಭತ್ತು ಜನ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಿದ್ದಾರೆ. ಇನ್ನು ಪುಣ್ಯಕ್ಕೆ ಸುರತ್ಕಲ್ ನಲ್ಲಿ ಸಿಬ್ಬಂದಿಗಳು ಇಲ್ಲದೆ ಉಪ ಆರ್ ಟಿಒ ಕಚೇರಿ ತೆರೆಯಲಾಗಿಲ್ಲ. ಇಲ್ಲದೆ ಹೋದರೆ ಇಲ್ಲಿಂದ ಹತ್ತು ಸಿಬ್ಬಂದಿ ಅಲ್ಲಿಗೆ ಹೋಗಲಿ ಎಂದು ಸೂಚನೆ ಬಂದಿದ್ದರೆ ಮಂಗಳೂರಿನ ಆರ್ ಟಿಒ ಕಚೇರಿಯ ಅರ್ಧ ಶಟರ್ ಎಳೆಯಬೇಕಿತ್ತು. ಕಳೆದ ಬಜೆಟಿನಲ್ಲಿಯೇ ಸಿದ್ಧರಾಮಯ್ಯ ಸುರತ್ಕಲ್ ಉಪಕಚೇರಿ ಘೋಷಿಸಿ ಸುರತ್ಕಲ್ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಆದರೆ ಒಂದೂವರೆ ವರ್ಷದ ಮೇಲಾದರೂ ಅದಕ್ಕೆ ಮುಹೂರ್ತ ಕೂಡಿ ಬಂದಿಲ್ಲ. ಆ ಬಗ್ಗೆ ಮೊಯ್ದೀನ್ ಬಾವ ಅವರಿಗೂ ಟೆನ್ಷನ್ ಇದ್ದಂತಿಲ್ಲ. ಅವರು ಓವೈಸಿ, ಝಾಕೀರ್ ನೈಕ್ ಅವರನ್ನು ಹುಡುಕಿಕೊಂಡು ಹೋಗಿ ಫೋಟೋ ತೆಗೆಸಿಕೊಂಡು ಮುಸ್ಲಿಮರನ್ನು ಸಂತುಷ್ಟರನ್ನಾಗಿ ಮಾಡುವುದರಲ್ಲಿ ತಮ್ಮ ತನು,ಮನ,ಧನವನ್ನು ಸುರಿಯುತ್ತಿದ್ದಾರೆ. ಹೀಗೆ ಆದರೆ ನಮ್ಮ ಸರಕಾರಿ ಕಚೇರಿಗಳ ಗತಿ ಹೇಗಾಗಬೇಡಾ?
ಸಾಧನೆ ಪುಸ್ತಕ ಹಂಚಿದರೆ ಆಯಿತಾ ಶಾಸಕರೇ…
ಮೊಯ್ದೀನ್ ಬಾವಾ ಅದೇನೋ ರಥದ ತರಹ ಕಟ್ಟಿಕೊಂಡು ಅದಕ್ಕೆ ಎಲ್ ಇಡಿ ಸ್ಕ್ರೀನ್ ಫಿಕ್ಸ್ ಮಾಡಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಪ್ರಾಯೋಜಕತ್ವದ ಹೆಸರುಗಳನ್ನು ಹಾಕಿ ಸುತ್ತಾಡುತ್ತಾ ಇದ್ದಾರೆ. ಹೋದ ಕಡೆಯೆಲ್ಲೆಲ್ಲ ತಾವು ಮಂಗಳೂರು ನಗರ ಉತ್ತರಕ್ಕೆ ಅಷ್ಟು ತಂದಿದ್ದೇನೆ, ಇಷ್ಟು ತಂದಿದ್ದೇನೆ ಎಂದು ಡಂಗುರಾ ಸಾರುತ್ತಾ ಇದ್ದಾರೆ. ಆದರೆ ತಮ್ಮ ಕ್ಷೇತ್ರದ ಉಪ ಆರ್ ಟಿಒ ಕಚೇರಿಗೆ ನಾಲ್ಕು ಜನ ಸಿಬ್ಬಂದಿಗಳನ್ನು ತಂದಿದ್ದೀರಾ ಎಂದು ಯಾರೂ ಕೇಳದೆ ಇರುವುದರಿಂದ ಅವರು ಬಚಾವ್.
ಇನ್ನು ಜೆ ಆರ್ ಲೋಬೋ ಅವರು ನೂರು ಪೇಜಿನ ಒಂದು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ತಮ್ಮ ಕಳೆದ ಐದು ವರ್ಷದ ಸಾಧನೆಗಳನ್ನು ಬರೆದುಕೊಂಡಿದ್ದಾರೆ. ಆದರೆ ಪಾಲಿಕೆಯಲ್ಲಿ, ಆರ್ ಟಿಒದಲ್ಲಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಆ ಬಗ್ಗೆ ಉಸಿರೆತ್ತದ ಲೋಬೋ ಅವರು ಎಷ್ಟು ಯೋಜನೆಗಳಿಗೆ ಶಿಲಾನ್ಯಾಸ ಮಾಡಿದ್ದೇನೆ ಎಂದು ಬರೆದುಕೊಂಡರೆ ಏನು ಪ್ರಯೋಜನ?
ಈಗ ಏನಿದ್ದರೂ ಯಾರದ್ದೋ ಕೆಲಸವನ್ನು ತನ್ನದು ಎನ್ನುವುದು, ಅರ್ಧ ಮುಗಿದ ಕಾಮಗಾರಿಯನ್ನು ಉದ್ಘಾಟನೆ ಮಾಡಿ ಫೋಸ್ ಕೊಡುವುದು, ಎಲ್ಲಿಯೋ ಕಾಮಗಾರಿಗೆ ಇನ್ನೆಲ್ಲಿಯೋ ಶಿಲಾನ್ಯಾಸ ಮಾಡುವುದು, ರಾಜ್ಯಪಾಲರ ಮರ್ಜಿಯಿಂದ ಜಾರಿಗೆ ಬಂದ ಹಕ್ಕುಪತ್ರಗಳನ್ನು ಹಂಚುವುದು, ಬಿಪಿಎಲ್ ಕಾರ್ಡ್ ಮೊಬೈಲ್ ಸಿಮ್ ತರಹ ಅಲ್ಲಲ್ಲಿ ಟೇಬಲ್ ಇಟ್ಟು ಹಂಚುವುದು ಇದೇ ಮಾಡುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಎಂದ ಕೂಡಲೇ ನೆನಪಾಯಿತು. ಅದೇ ಇನ್ನೊಂದು ದೊಡ್ಡ ಕಥೆ. ಆ ಬಗ್ಗೆ ಹೇಳ್ಬೇಕು. ನಾಳೆ ಸಿಗೋಣ
Leave A Reply