ತನ್ನ ಮಗು ಎರಡು ತಿಂಗಳಲ್ಲಿ ಕಣ್ಣು ಬಿಡುವ ಮೊದಲೇ ಹುತಾತ್ಮನಾದ ಹಾಸನದ ಯೋಧ!
ಹಾಸನ: ಒಂದು ವರ್ಷದ ಹಿಂದೆ ಆ ಯೋಧನ ಮದುವೆಯಾಗಿತ್ತು. ವರ್ಷ ತುಂಬುವ ಮೊದಲೇ ಆ ಯೋಧನಿಗೆ ಸಿಹಿ ಸುದ್ದಿ ಕಾದಿತ್ತು. ಇನ್ನೆರಡು ತಿಂಗಳು ಕಳೆದಿದ್ದರೆ ತಮ್ಮ ದಾಂಪತ್ಯದ ಕುರುಹಾಗಿ ಮನೆ ಹಾಗೂ ಮನಕ್ಕೊಂದು ಕಂದಮ್ಮನ ಪ್ರವೇಶವಾಗುವುದಿತ್ತು. ಆ ಯೋಧನಿಗೂ ಗಡಿಯಲ್ಲಿ ಮಗ ಹುಟ್ಟಿದರೆ ಹೇಗಿರಬಹುದು, ಮಗಳು ಹುಟ್ಟಿದರೆ ಏನು ಹೆಸರಿಡುವುದು ಎಂದು ನೆನಪು ಬರುತ್ತಿತ್ತೇನೋ?
ಆದರೆ ವಿಧಿಯಾಟವೇ ಬೇರೆ ಇತ್ತು. ಅದರ ಲೆಕ್ಕಾಚಾರವೇ ಬೇರೆಯಾಗಿತ್ತು. ಹೊಸ ಚಿಗುರು ಹೊರಬರುವ ಮುನ್ನವೇ ಅಪ್ಪ ಎಂಬ ಆಲದ ಮರವೇ ಇಲ್ಲ ಎಂಬ ಮಾತೇ ಕರಳು ಚುರುಕ್ ಎನಿಸುತ್ತದೆ. ಅಂತಹ ದುರದೃಷ್ಟ ಶತ್ರುವಿನದ್ದೂ ಆಗಬಾರದು ಎನಿಸುತ್ತದೆ.
ಆದರೆ ಹಾಸನದ ಯೋಧರೊಬ್ಬರ ಬಾಳಲ್ಲಿ ವಿಧಿ ಇಂತಹ ಕ್ರೂರ ಆಟವೊಂದು ಆಡಿಬಿಟ್ಟಿದೆ. ಹೌದು, ಛತ್ತೀಸ್ ಗಡದ ಸುಕ್ಮಾದಲ್ಲಿ ನಕ್ಸಲರು ಮಾಡಿದ ಅಟ್ಟಹಾಸದಲ್ಲಿ ಹಾಸನದ ಹರದೂರು ಗ್ರಾಮದ ಯೋಧ, 29 ವರ್ಷದ ಚಂದ್ರು ಹುತಾತ್ಮರಾಗಿದ್ದಾರೆ. ದಾಳಿ ವೇಳೆ ಭಾರತದ ಒಂಬತ್ತು ಯೋಧರು ಹುತಾತ್ಮರಾಗಿದ್ದು, ಹಾಸನದ ಈ ವೀರಯೋಧನೂ ಸೇರಿದ್ದಾನೆ ಎಂಬುದೇ ರಾಜ್ಯವನ್ನು ದುಃಖತಪ್ತರನ್ನಾಗಿಸಿದೆ. ಇನ್ನು ಆ ಕುಟುಂಬದ ಪರಿಸ್ಥಿತಿ ಹೇಗಾಗಿರಬೇಡ?
ಸ್ವಾಮಿ ಗೌಡ ಎಂಬುವವರ ಪುತ್ರನಾಗಿರುವ ಚಂದ್ರು ಐದು ವರ್ಷಗಳ ಹಿಂದೆ ಸೈನ್ಯ ಸೇರಿದ್ದರು. ಕಳೆದ ವರ್ಷವಷ್ಟೇ ಅಕ್ಕನ ಮಗಳ ಜತೆ ಮದುವೆಯಾಗಿದ್ದ ಚಂದ್ರು ಇನ್ನೆರಡು ತಿಂಗಳಲ್ಲಿ ಮಗು ಎತ್ತಿ ಮುದ್ದಾಡುವ ತವಕದಲ್ಲಿದ್ದ. ಆದರೆ ವಿಧಿಯ ಆಟಕ್ಕೆ ಆ ವೀರ ಯೋಧ ಹುತಾತ್ಮನಾಗಿ ಹೋದನಲ್ಲ ಎಂಬ ಬೇಸರ ಎಲ್ಲರಲ್ಲೂ ಕಾಡುತ್ತಿದೆ. ಛೇ!
Leave A Reply