ರಾಜಸ್ಥಾನದ ಗಡಿಯಲ್ಲಿ ವೈರಿಗಳ ನಿಗ್ರಹಕ್ಕೆ ಭಾರತ ಉಪಯೋಗಿಸುತ್ತಿರುವ ತಂತ್ರಜ್ಞಾನ ಯಾವುದು ಗೊತ್ತಾ?
ದೆಹಲಿ: ಶತಾಯ-ಗತಾಯ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಪಾಠ ಕಲಿಸಲೇಬೇಕು ಎಂದು ನಿರ್ಧರಿಸಿದಂತಿರುವ ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ದಿನೇದಿನೆ ನೂತನ ತಂತ್ರಗಳನ್ನು ಹೆಣೆಯುತ್ತಲೇ ಇದೆ.
ಇದಕ್ಕೆ ಮುನ್ನುಡಿಯಾಗಿ ಈಗ ರಾಜಸ್ಥಾನದ ಹಿಂದುಮಲ್ಕೋಟ್ ಇಂಡೋ-ಪಾಕ್ ಗಡಿಯಲ್ಲಿ ವೈರಿಗಳ ರಕ್ಷಣೆಗಾಗಿ ಭಾರತೀಯ ಸೇನೆ ನೂತನ ತಂತ್ರಜ್ಞಾನ ಅಳವಡಿಸಿಕೊಂಡಿದೆ.
ವಿಶ್ವದಲ್ಲೇ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು ಎಂದು ಖ್ಯಾತಿಯಾಗಿರುವ ರಾಜಸ್ಥಾನದ ಗಡಿಯಲ್ಲಿ ಭಾರತೀಯ ಸೇನೆ ಕೋಬ್ರಾ ಎಂಬ ವೈರ್ ಅಳವಡಿಸಿದ್ದು, ಇದು ವೈರಿಗಳ ದಾಳಿಯನ್ನು ಪತ್ತೆಹಚ್ಚಲು ಸಹಕಾರಿಯಾಗಿದೆ ಎಂದು ತಿಳಿದುಬಂದಿದೆ.
ಗಡಿಯ ಬೇಲಿಗೆ ವೈರ್ ಅಳವಡಿಸಲಾಗಿದ್ದು, ವೈರಿಗಳು ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿ ಕಾಣಿಸಿಕೊಂಡರೆ ತಂತ್ರಜ್ಞಾನದ ಮೂಲಕ ಮಾಹಿತಿ ರವಾನಿಸುತ್ತದೆ. ಅಷ್ಟೇ ಅಲ್ಲ, ಈ ವೈರನ್ನು ಮುಟ್ಟಿದರೆ ಭಾರಿ ಶಾರ್ಟ್ ಸರ್ಕ್ಯೂಟ್ ಹೊಡೆಯಲಿದ್ದು, ವೈರಿಗಳಿಗೆ ನಡುಕ ಹುಟ್ಟಿಸುತ್ತದೆ ಎಂದೇ ಹೇಳಲಾಗುತ್ತಿದೆ.
ಇದಲ್ಲದೆ ಎಚ್ಎಚ್ ಟಿಐ (ಹ್ಯಾಂಡ್ ಹೆಲ್ಡ್ ಥರ್ಮಲ್ ಇಮೇಜರ್) ಎಂಬ ಗ್ಯಾಜೆಟ್ಅನ್ನು ಸಹ ಭಾರತೀಯ ಸೇನೆ ಅಳವಡಿಸಿಕೊಂಡಿದ್ದು, ಇದು ಸಹ ಮುರ್ನಾಲ್ಕು ಕಿ.ಮೀ. ದೂರದಲ್ಲಿ ಪಾಕಿಸ್ತಾನಿ ಸೈನಿಕರು, ಉಗ್ರರು ಸುಳಿದಾಡುವುದು ಕಂಡು ಬಂದರೆ ಅದರ ಸಂಪೂರ್ಣ ಚಿತ್ರ ನೀಡುತ್ತದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ, ಗಡಿಯಲ್ಲಿ ಯಾವಾಗಲೂ ದಾಳಿ, ಕದನ ವಿರಾಮ ಉಲ್ಲಂಘನೆ, ಒಳನುಸುಳುವಿಕೆ ಮೂಲಕ ಉದ್ಧಟತನ ಮೆರೆಯುವ ಪಾಕಸ್ತಾನಕ್ಕೆ ಭಾರತೀಯ ಸೇನೆ ಅಳವಡಿಸಿಕೊಂಡಿರುವ ಈ ತಂತ್ರಜ್ಞಾನ ಸಿಂಹಸ್ವಪ್ನವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
Leave A Reply