ತಾಲಿಬಾನಿ ಉಗ್ರರ ವಿರುದ್ಧ ಮಾತಲ್ಲಿ ಅಲ್ಲದೆ, ನಿಜವಾಗಿ ಕ್ರಮ ಕೈಗೊಳ್ಳಿ ಎಂದು ಪಾಕಿಸ್ತಾನಕ್ಕೆ ಅಮೆರಿಕ ಮತ್ತೆ ತಪರಾಕಿ!
ವಾಷಿಂಗ್ಟನ್: ಅಮೆರಿಕದಲ್ಲಿ ಯಾವಾಗ ಟ್ರಂಪ್ ಅಧಿಕಾರಕ್ಕೆ ಬಂದರೋ ಅಲ್ಲಿಂದ ಪಾಕಿಸ್ತಾನದ ನಸೀಬೇ ಚೆನ್ನಾಗಿಲ್ಲ. ಮೊದಲಿಗೆ ಉಗ್ರರ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಉಗ್ರ ಪೋಷಕ ರಾಷ್ಟ್ರ ಎಂಬ ಭಾರತದ ಪ್ರತಿಪಾದನೆಗೆ ಟ್ರಂಪ್ ನೀರೆರೆದರು.
ಅಷ್ಟೇ ಅಲ್ಲ, ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಗೃಹಬಂಧನದಿಂದ ಬಿಡುಗಡೆ ಮಾಡಿದ್ದಕ್ಕೆ, ಪಾಕಿಸ್ತಾನದ ವಿರುದ್ಧ ಕೆಂಡಾಮಂಡಲರಾದ ಟ್ರಂಪ್, ಆ ಉಗ್ರನನ್ನು ಮತ್ತೆ ಗೃಹಬಂಧನದಲ್ಲಿಡುವಂತೆ ಆಗ್ರಹಿಸಿದರು. ಜತೆಗೆ ಉಗ್ರರ ಪಟ್ಟಿ ನೀಡುವಂತೆ ಪಾಕಿಸ್ತಾನಕ್ಕೆ ಒತ್ತಾಯಿಸಿ, ಉಗ್ರ ಪೋಷಕ ರಾಷ್ಟ್ರವನ್ನು ಪೇಚಿಗೆ ಸಿಲುಕಿಸಿದರು.
ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಅಮೆರಿಕ, ಅಫ್ಘಾನಿಸ್ತಾನದ ತಾಲಿಬಾನಿ ಹಾಗೂ ಹಕ್ಕಾನಿ ನೆಟ್ ವರ್ಕ್ ವಿರುದ್ಧ ಬರೀ ಬಾಯಿಮಾತಿನಲ್ಲಿ ಅಲ್ಲದೆ, ನಿಜವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನಕ್ಕೆ ಸೂಚನೆ ನೀಡಿದೆ.
ಇದುವರೆಗೆ ಪಾಕಿಸ್ತಾನಕ್ಕೆ ಹಲವು ಬಾರಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆದರೆ ಇದುವರೆಗೆ ಪಾಕಿಸ್ತಾನ ಕನಿಷ್ಠ ಕ್ರಮ ಕೈಗೊಂಡಿದೆ. ಆದರೆ ಇನ್ನುಮುಂದೆ, ಕ್ರಮ ಕೈಗೊಳ್ಳದೆ ಇರುವ ಹಾಗಿಲ್ಲ. ತಾಲಿಬಾನಿ ಹಾಗೂ ಹಕ್ಕಾನಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವರನ್ನು ಮಟ್ಟಹಾಕಬೇಕು ಎಂದು ಅಮೆರಿಕ ಸೂಚಿಸಿದೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಯೂ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ, ಉಗ್ರ ಪೋಷಣೆ ಕಾರ್ಯವನ್ನು ಪಾಕಿಸ್ತಾನ ಮುಂದುವರಿಸಿದ್ದ ಕಾರಣ, ಆಕ್ರೋಶಗೊಂಡಿದ್ದ ಡೊನಾಲ್ಡ್ ಟ್ರಂಪ್ ಕಳೆದ ಜನವರಿಯಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ 2 ಶತಕೋಟಿ ಡಾಲರ್ ಮೊತ್ತದ ಭದ್ರತಾ ಸಹಾಯಧನವನ್ನು ಸ್ಥಗಿತಗೊಳಿಸಿದ್ದರು.
Leave A Reply