ಪ್ರತಿ ರಾಜ್ಯ ಸೋಲುತ್ತಿರುವ ರಾಹುಲ್ ಗಾಂಧಿ ಅವರಿಗೆ ಕರಾವಳಿಗೆ ಸ್ವಾಗತ!!
ಕೊನೆಗೂ ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಹೇಳಲು ಒಂದು ವಿಷಯ ಸಿಕ್ಕಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರತಿಬಾರಿ ಕರ್ನಾಟಕಕ್ಕೆ ಕಾಲಿಟ್ಟಾಗೆಲ್ಲ ಕಳಾಹೀನವಾಗುತ್ತಾ ಬಂದ ಕಾಂಗ್ರೆಸ್ ಮೊನ್ನೆ ಗೋರಕ್ ಪುರ ಮತ್ತು ಫುಲ್ ಪುರ್ ಲೋಕಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಸೋತ ಕೂಡಲೇ ಖುಷಿಯಿಂದ ಎದ್ದುಬಿಟ್ಟಿತು.
ಇನ್ನು ಯುಪಿ ಸಿಎಂ ಯೋಗಿ ಅವರಿಗೆ ಕರ್ನಾಟಕಕ್ಕೆ ಬರಲು ನೈತಿಕತೆ ಇಲ್ಲ ಎಂದು ಖುಷಿಯಲ್ಲಿ ಹಾರಾಡಿದ್ದೇ ಹಾರಾಡಿದ್ದು. ಅಷ್ಟಕ್ಕೂ ಬಿಜೆಪಿ ಮಟ್ಟಿಗೆ ಅದರಲ್ಲಿಯೂ ಆದಿತ್ಯನಾಥ್ ಮಟ್ಟಿಗೆ ಇದು ಒಂದಿಷ್ಟು ಹಿನ್ನಡೆ ಹೌದು. ಆದರೆ ಕಾಂಗ್ರೆಸ್ ಅಂದುಕೊಂಡಷ್ಟು ಅಲ್ಲ. ಬೇಕಾದರೆ ಉತ್ತರ ಪ್ರದೇಶದ ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜವಾದಿ ಪಾರ್ಟಿ ತಮ್ಮ ರಾಜ್ಯದ ಸಿಎಂಗೆ ಆದ ಹಿನ್ನಡೆಯನ್ನು ಸಂಭ್ರಮಿಸಿಕೊಂಡರೆ ತಪ್ಪಿಲ್ಲ ಎನ್ನಬಹುದು. ಆದರೆ ಕಾಂಗ್ರೆಸ್ ಯಾವ ಆಧಾರದ ಮೇಲೆ ಭುಜ ಕುಣಿಸುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಯಾಕೆಂದರೆ ಮೊನ್ನೆ ಬಿಜೆಪಿ ಸೋತ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಠೇವಣಿ ಕೂಡ ಉಳಿದಿಲ್ಲ.
ಮೊದಲು ಠೇವಣಿ ಉಳಿಸಿಕೊಳ್ಳಿ..
ಎರಡು ಲೋಕಸಭಾ ಕ್ಷೇತ್ರಗಳನ್ನು ಸೋತ ಕೂಡಲೇ ಯೋಗಿ ಆದಿತ್ಯನಾಥ್ ಅವರು ಕರ್ನಾಟಕಕ್ಕೆ ಬರಬಾರದು ಎನ್ನುವ ಕಾಂಗ್ರೆಸ್ಸಿನವರ ಒಣ ಹೇಳಿಕೆಯೇ ಅಸಬಂದ್ಧ ಎನ್ನುವುದನ್ನು ಮೊದಲು ವಿವರಿಸುತ್ತೇನೆ. ಮೊದಲನೇಯದಾಗಿ ಯೋಗಿ ಆದಿತ್ಯನಾಥ್ ಅವರೇ ಹೇಳಿದ ಹಾಗೆ ಅಲ್ಲಿ ಇದ್ದದ್ದು ಅತಿಯಾದ ಆತ್ಮವಿಶ್ವಾಸ. ಐದು ಬಾರಿ ಗೆದ್ದಿದ್ದೇನೆ, ಅಲ್ಲಿ ಯಾರನ್ನು ನಿಲ್ಲಿಸಿದರೂ ಗೆಲ್ಲುತ್ತೇವೆ ಎಂದು ಆದಿತ್ಯನಾಥ್ ಅಂದುಕೊಂಡಿದ್ದರು. ಎಲ್ಲಿಯ ತನಕ ಅಂದರೆ ಕೇಂದ್ರದಿಂದ ಹಿಡಿದು ಉತ್ತರಪ್ರದೇಶದ ತನಕ ಬಿಜೆಪಿಯ ಪ್ರತಿ ನಾಯಕ ಮತ್ತು ಕಾರ್ಯಕರ್ತ ಕೂಡ ಹಾಗೆ ಅಂದುಕೊಂಡಿದ್ದ. ಪ್ರಧಾನಿ ನರೇಂದ್ರ ಮೋದಿ ಒಂದು ಘಳಿಗೆ ಕೂಡ ಆ ಕಡೆ ಕಣ್ಣು ಹಾಯಿಸಿಲ್ಲ. ಪರಿಣಾಮ ಮತದಾರನಿಗೆ ತನ್ನನ್ನು ಬಿಜೆಪಿ ಗ್ರಾಂಟೆಡ್ ಆಗಿ ತೆಗೆದುಕೊಂಡು ಬಿಟ್ಟಿದೆ ಎನಿಸಲು ಶುರುವಾಯಿತು. ಅದಕ್ಕೆ ಸರಿಯಾಗಿ ಯಾದವರು ಮತ್ತು ದಲಿತರನ್ನು ಎಸ್ ಪಿ ಮತ್ತು ಬಿಎಸ್ ಪಿ ಒಟ್ಟು ಮಾಡಿದ್ದು ಯೋಗಿಯವರಿಗೆ ಗೊತ್ತಾಗಲೇ ಇಲ್ಲ. ಅವರು ಲಾ ಅಂಡ್ ಆರ್ಡರ್ ಬಗ್ಗೆ ಲಕ್ನೋದಲ್ಲಿ ಮೇಲಿಂದ ಮೇಲೆ ಸಭೆ ಮಾಡುತ್ತಿದ್ದರೆ ಅತ್ತ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಅಖಿಲೇಶ್ ಮತ್ತು ಮಾಯಾವತಿ ಕುಚುಕು ಗೆಳೆಯರಂತೆ ಆಡುತ್ತಿದ್ದರು. ಕಾಂಗ್ರೆಸ್ ಗೆದ್ದರೆ ಆಡಲಿಕ್ಕೆ ಬಂದಿದ್ದೆ, ಸೋತರೆ ನೋಡ್ಲಿಕ್ಕೆ ಬಂದಿದ್ದೆ ಎಂದು ಹೇಳಲು ತಯಾರಿ ಮಾಡುತ್ತಿತ್ತು. ಆ ಮೂಲಕ ಒಂದು ಕಾಲದಲ್ಲಿ ನೆಹರೂ ಕಾಲಿಟ್ಟರೆ ಜನ ಅಡ್ಡಡ್ಡ ಬಿದ್ದು ಜೈ ಎನ್ನುತ್ತಿದ್ದ ಕ್ಷೇತ್ರಗಳು ಮೊನ್ನೆ ಕಾಂಗ್ರೆಸ್ಸಿಗೆ ಠೇವಣಿಯನ್ನು ಕೂಡ ಉಳಿಸದ ಮಟ್ಟಿಗೆ ಸೋತುಬಿಟ್ಟಿದ್ದವು. ಅತ್ತ ಅಖಿಲೇಶ್ ಜೊತೆಗೆ ಮೈತ್ರಿ ಮಾಡಿ ಒಂದೇ ಕಪ್ ಜ್ಯೂಸ್ ಗೆ ರಾಹುಲ್ ಸ್ಟ್ರಾ ಹಾಕಿ ಕುಡಿದಿದ್ದರೆ ಕನಿಷ್ಟ ಹೇಳುವುದಕ್ಕಾದರೂ ಒಂದು ಕಾರಣ ಇರುತ್ತಿತ್ತು. ಆದರೆ ಈಗ ಅಖಿಲೇಶ್ ಮತ್ತು ಮಾಯಾವತಿ ಕುಣಿದಾಡುತ್ತಿದ್ದರೆ ಇತ್ತ ರಾಹುಲ್ ನಾವ್ಯಾಕೆ ಪ್ರತ್ಯೇಕವಾಗಿ ಚುನಾವಣೆಗೆ ಹೋಗಿದ್ವಿ ಖರ್ಗೆಜೀ ಎಂದು ಕೇಳುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದ ನಂತರ ನಡೆದ ಎರಡು ಸೋಲುಗಳನ್ನೆ ಎತ್ತಿಹಿಡಿದು ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬರಬಾರದು ಎಂದಾದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಂತರ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ನಡೆದ ಅಷ್ಟೂ ಚುನಾವಣೆಗಳಲ್ಲಿ ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ಖಾತೆಯನ್ನೇ ತೆರೆದಿಲ್ಲ, ಇದಕ್ಕೆ ಏನು ಹೇಳುವುದು.
ಕಾಂಗ್ರೆಸ್ ಪಾಲಿಗೆ ಕೊನೆಯ ಎಟಿಎಂ ಕರ್ನಾಟಕ…
ಕೇವಲ ಎರಡು ಉಪಚುನಾವಣೆಗಳನ್ನು ಯೋಗಿ ಸೋತದ್ದೇ ಕರ್ನಾಟಕಕ್ಕೆ ಬರುವುದು ತಪ್ಪು ಎನ್ನುವುದಾದರೆ ರಾಹುಲ್ ಗಾಂಧಿ ಸೋತಿರುವ ದಾಖಲೆಗಳನ್ನೇ ನೋಡಿದರೆ ಅವರು ದೆಹಲಿಯ ತಮ್ಮ ಮನೆಯಿಂದಲೇ ಹೊರಗೆ ಬರಬಾರದು ಎನ್ನುವ ಪರಿಸ್ಥಿತಿ ಇದೆ. ಎರಡು ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿರುವುದರಿಂದ ಬಿಜೆಪಿ ಕೇಂದ್ರದಲ್ಲಿ ಅಧಿಕಾರವನ್ನೇನೂ ಕಳೆದುಕೊಳ್ಳುವುದಿಲ್ಲ. ಆದರೆ ಗೋವಾದಿಂದ ಹಿಡಿದು ತ್ರಿಪುರಾದ ತನಕ ಸುಭದ್ರವಾಗಿದ್ದ ಕಾಂಗ್ರೆಸ್ ಈಗ ಒಂದೊಂದು ವಿಧಾನಸಭಾ ಸೀಟಿಗೂ ಪರದಾಡುತ್ತಿರುವುದನ್ನು ನೋಡಿದಾಗ ಈ ಸಿಟಿ ಬಸ್ಸಿನಲ್ಲಿ ರಶ್ ಇರುವಾಗ ನಿಂತಿರುವ ಪ್ರಯಾಣಿಕ ಆಸೆಯಿಂದ ಯಾವುದಾದರೂ ಸ್ಟಾಪಿನಲ್ಲಿ ಯಾರಾದರೂ ಇಳಿದು ಕುಳಿತುಕೊಳ್ಳಲು ಸೀಟ್ ಸಿಗುತ್ತಾ ಎಂದು ಕಾಯುತ್ತಾನಲ್ಲ, ಆ ಪರಿಸ್ಥಿತಿ ಕಾಂಗ್ರೆಸ್ಸಿಗೆ ಬಂದಿದೆ. ಅಷ್ಟಕ್ಕೂ ಕಾಂಗ್ರೆಸ್ಸಿಗೆ ಸರಿಯಾಗಿ ಉಳಿದಿರುವುದು ಕರ್ನಾಟಕ ಒಂದೇ.
ಪಂಜಾಬ್ ನಲ್ಲಿ ಕಾಂಗ್ರೆಸ್ ಆಡಳಿತ ಇದೆಯಾದರೂ ಅದು ಕ್ಯಾಪ್ಟನ್ ಅಮರೀಂದ್ರರ್ ಸಿಂಗ್ ಅವರ ಭಿಕ್ಷೆ ಎನ್ನುವ ವಾತಾವರಣ ಇದೆ. ಹಾಗಿರುವಾಗ ಈ ರಾಜ್ಯ ಉಳಿದರೆ ಮುಂದಿನ ವರ್ಷ ಲೋಕಸಭಾ ಚುನಾವಣೆಗೆ ಹೋಗುವಾಗ ಎಟಿಎಂ ನ ಒಂದು ಬ್ರಾಂಚ್ ಆದರೂ ಉಳಿದಿದೆ ಎನ್ನುವ ಆತ್ಮವಿಶ್ವಾಸ ಕಾಂಗ್ರೆಸ್ಸಿಗೆ ಉಳಿಯುತ್ತದೆ. ಅದೇ ಸೋತರೆ ಸಾಲ ಎತ್ತಲು ಹೋದರೂ ಯಾರು ಮುಖ ತಿರುಗಿಸಿ ನೋಡಲಾರರು ಎನ್ನುವುದು ಗ್ಯಾರಂಟಿ. ಕೊನೆಗೆ ವಿಶ್ವದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಸೋನಿಯಾ ಗಾಂಧಿಯವರೇ ತಮ್ಮ ಗಂಟನ್ನು ಬಿಚ್ಚಬೇಕಾಗುತ್ತದೆ.
ಆದ್ದರಿಂದ ಬಿಜೆಪಿಯ ಭತ್ತಳಿಕೆಯಲ್ಲಿರುವ ಅಸ್ತ್ರಗಳನ್ನು ಅಲ್ಲಲ್ಲಿಯೇ ಹಿಮ್ಮೆಟ್ಟಿಸಬೇಕು ಎನ್ನುವ ತಂತ್ರದಲ್ಲಿರುವ ಕಾಂಗ್ರೆಸ್, ಬಿಜೆಪಿಯ ಪ್ರಬಲ ಅಸ್ತ್ರ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರದ ಸೋಲನ್ನೇ ಬಂಡವಾಳವನ್ನಾಗಿ ಮಾಡುತ್ತಿದೆ. ಹಾಗೇ ಹೇಳುತ್ತಲೇ ಕಾಂಗ್ರೆಸ್ಸಿನ ಹಿರಿ, ಮರಿ ನಾಯಕರು ಕರಾವಳಿಯಲ್ಲಿ ತಮ್ಮ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಸ್ವಾಗತಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಯಾರಾದರೂ ಮಾಧ್ಯಮದವರು ರಾಹುಲ್ ಗಾಂಧಿಯವರಿಗೆ “ರಾಹುಲ್ ಜಿ, ಆಪ್ ಕಹಾ ಗಯೇ ತೋ ವಹಾ ಕಾಂಗ್ರೆಸ್ ಕ್ಯೂಂ ಹಾರ್ತಾ ಹೇ” ಎಂದರೆ ಅವರು ಏನು ಉತ್ತರ ಕೊಡಬಲ್ಲರು!!
Leave A Reply