ಜ್ಯೋತಿ ಸರ್ಕಲ್ ನಲ್ಲಿ ಒಂದೆರಡು ದಿನ ಸಿಗ್ನಲ್ ಫ್ರೀ? ಇದು ರಾಹುಲ್ “ಭಾಗ್ಯ”ವೇ?
ಮಂಗಳೂರಿನ ಜ್ಯೋತಿ ವೃತ್ತದ ಅಂಬೇಡ್ಕರ್ ಸರ್ಕಲ್ ಬಳಿ ಇರುವ ಸಿಗ್ನಲ್ ಒಂದೆರಡು ದಿನಗಳ ಕಾಲ ಕಾಂಗ್ರೆಸ್ ಬಂಟಿಂಗ್ಸ್ ನಿಂದ ಮುಚ್ಚಿ ಹೋಗಿದೆ. ಹಾಗಾಗಿ ವಾಹನ ಸವಾರರು ತಮ್ಮ ವಾಹನಗಳನ್ನು ಯರ್ರಾಬಿರ್ರಿಯಾಗಿ ಚಲಾಯಿಸಿದರೂ ಹೇಳೋರಿಲ್ಲ-ಕೇಳೋರಿಲ್ಲ. ಅಕಸ್ಮಾತ್ ಟ್ರಾಫಿಕ್ ಪೊಲೀಸ್ ಕೇಳಿದರೆ ಸಿಗ್ನಲ್ ಕಾಣಿಸ್ತಾ ಇಲ್ವಲಾ ನಾನೇನ್ ಮಾಡ್ಲಿ ಅಂತ ಹೇಳಿದರೆ ಪೊಲೀಸರತ್ರನೂ ಉತ್ತರ ಇರ್ಲಿಕ್ಕಿಲ್ಲ.
ಅಲ್ಲ ಮಾರಾಯ್ರೆ, ರಾಹುಲ್ ಗಾಂಧಿ ಬರುವುದಾದ್ರೆ ಊರಿಡೀ ಸಿಂಗಾರ ಮಾಡಿಕೊಳ್ಳಲಿ. ಯಾರೂ ಏನೂ ಕೇಳುವುದಿಲ್ಲ. ಆದರೆ ಹೋಗಿ ಹೋಗಿ ಪ್ರಮುಖ ರಸ್ತೆಗಳಲ್ಲಿರುವ ಸಿಗ್ನಲ್ ವ್ಯವಸ್ಥೆಗೆ ಅಡ್ಡವಾಗಿ ಸಿಂಗಾರ ಮಾಡೋದಾ?
ಅಷ್ಟಕ್ಕೂ ಅಂಬೇಡ್ಕರ್ ಸರ್ಕಲ್ ಸಿಗ್ನಲ್ ಎಷ್ಟು ಮುಖ್ಯವಾಗಿದೆ ಗೊತ್ತಾ?
ವಾಹನಗಳು, ಬಂಟ್ಸ್ ಹಾಸ್ಟೆಲ್ ಕಡೆಯಿಂದ ಬಂದು ಹಂಪನಕಟ್ಟೆ ಅಥವಾ ಕಂಕನಾಡಿ ಕಡೆ ಹೋಗುತ್ತವೆ. ವಾಹನಗಳು ಕಂಕನಾಡಿ ಕಡೆಯಿಂದ ಬಂದು ಸ್ಟೇಟ್ ಬ್ಯಾಂಕ್ ಅಥವಾ ಬಂಟ್ಸ್ ಹಾಸ್ಟೆಲ್ ಕಡೆ ಹೋಗುತ್ತವೆ. ವಾಹನಗಳು ಬಾವುಟ ಗುಡ್ಡೆಯಿಂದ ಬಂದು ಬಂಟ್ಸ್ ಹಾಸ್ಟೆಲ್ ಅಥವಾ ಕಂಕನಾಡಿ ಕಡೆ ಹೋಗುತ್ತವೆ.ಇಂತಹ ವಾಹನ ದಟ್ಟಣೆ ಇರುವ ವೃತ್ತ ಅಂಬೇಡ್ಕರ್ ಸರ್ಕಲ್, ಇದೇ ಸರ್ಕಲ್ ಪಕ್ಕದಲ್ಲಿ ಕೆ.ಎಂ.ಸಿ ಆಸ್ಪತ್ರೆಯೂ ಇದೆ. ಹೆಣ್ಣು ಮಕ್ಕಳ ಕಾಲೇಜೂ ಇದೆ. ಹಾಗಾಗಿ ವಾಹನಗಳ ಹೊರತಾಗಿ ಪಾದಚಾರಿಗಳ ಸಂಖ್ಯೆಯೂ ಹೆಚ್ಚಿದೆ.
ಇಂತಹ ಪ್ರಮುಖ ರಸ್ತೆಯಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾಗಿರುವುದರಿಂದ ಅದನ್ನು ತಡೆಗಟ್ಟಲು ಸಿಗ್ನಲ್ ವ್ಯವಸ್ಥೆ ಮಾಡಲಾಗಿದೆ. ಸಿಗ್ನಲ್ ಬ್ರೇಕ್ ಮಾಡುವವರನ್ನು ಪತ್ತೆ ಹಚ್ಚಲು ಸಿ.ಸಿ. ಕ್ಯಾಮರಾ ಹಾಗೂ ಒಬ್ಬ ಪೊಲೀಸ್ ಪೇದೆಯನ್ನು ನೇಮಿಸಲಾಗಿದೆ. ಇಷ್ಟೆಲ್ಲಾ ಇದ್ದು ಸರಿಯಾಗಿ ಸಿಗ್ನಲ್ ಕಾಣಿಸದಂತೆ ಅದರ ಮುಂದೆ-ಹಿಂದೆ ಮೇಲೆ-ಕೆಳಗೆ ಕಾಂಗ್ರೆಸ್ ಪಕ್ಷ ತನ್ನ ಬಂಟಿಂಗ್ಸ್ ಹಾಕಿಕೊಂಡು ಸಾರ್ವಜನಿಕರನ್ನು ಅಣಕಿಸುತ್ತಿದೆ.
ನಾಳೆ ಈ ಸರ್ಕಲ್ ನಲ್ಲಿ ಅನಿವಾರ್ಯವಾಗಿ ಸಿಗ್ನಲ್ ರೂಲ್ಸ್ ಬ್ರೇಕ್ ಆಗಿ ಯಾವುದಾದರೂ ಅವಘಡ ಸಂಭವಿಸಿದರೆ ಅದರ ಜವಾಬ್ದಾರಿಯನ್ನು ರಾಹುಲ್ ಗಾಂಧಿ ಹೊರುತ್ತಾರಾ? ಜಿಲ್ಲಾ ಸಚಿವರು ಹೊರುತ್ತಾರಾ? ಅಥವಾ ಶಾಸಕರು ಹೊರುತ್ತಾರಾ?ಯಾರೂ ಹೊರುವುದಿಲ್ಲ. ಅವರು ಹೊರುವುದು ನಮ್ಮ ಶವ ಮಾತ್ರ. ಅದೂ ಕೂಡಾ ಧರ್ಮ ಆಧಾರಿತವಾಗಿ!
Leave A Reply