ವಿಶ್ವದ ಬೃಹತ್ ಆರೋಗ್ಯ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು, ಇನ್ನಿಲ್ಲ ಆಪತ್ತು!
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಹಾಗೆ. ಅದು ಯಾವುದೇ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಿ, ಕೂಡಲೇ ಅದನ್ನು ಜಾರಿಗೆ ತರುತ್ತದೆ. 2017ರಲ್ಲಿ ಬಜೆಟ್ಟಿನಲ್ಲಿ ಘೋಷಿಸಿದ ರೈಲು ನಿಲ್ದಾಣಗಳ ಆಧುನೀಕರಣ ಯೋಜನೆಯೇ ಸಾಕ್ಷಿ. ಬಜೆಟ್ಟಿನಲ್ಲಿ ಘೊಷಿಸಿದ ಬಳಿಕ ಕೂಡಲೇ ಯೋಜನೆ ಜಾರಿಗೊಳಿಸಿ, ರೈಲು ನಿಲ್ದಾಣಗಳ ಆಧುನೀಕರಣಗೊಳಿಸಲು ಮುಂದಾಯಿತು ಕೇಂದ್ರ ಸರ್ಕಾರ.
ಈಗ ಮೋದಿ ಸರ್ಕಾರ ಅಂತಹದ್ದೇ ಮತ್ತೊಂದು ನಿರ್ಧಾರ ಕೈಗೊಂಡಿದ್ದು, ಕಳೆದ ಬಜೆಟ್ಟಿನಲ್ಲಿ ಘೋಷಿಸಿದ್ದ, ವಿಶ್ವದ ಬೃಹತ್ ಆರೋಗ್ಯ ಯೋಜನೆಯೆಂದೇ ಖ್ಯಾತಿಯಾಗಿರುವ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಯೋಜನೆ ಜಾರಿಗೆ ಬರಲಿದೆ.
ಯೋಜನೆಯಿಂದ ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಈ ಯೋಜನೆ ಅನುಕೂಲವಾಗಲಿದ್ದು, ಬಡತನ ರೇಖೆಗಿಂತ ಕೆಳಗಿರುವವರು ಕೆಳ ಹಾಗೂ ಮಧ್ಯಮ ಹಂತದ ಆಸ್ಪತ್ರೆಯಲ್ಲಿ ಪಡೆಯುವ ಚಿಕಿತ್ಸೆಗೆ ಕೇಂದ್ರ ಸರ್ಕಾರ 5 ಲಕ್ಷ ರೂ. ಆರೋಗ್ಯ ವಿಮೆ ನೀಡಲಿದೆ. ಇದರಿಂದ ಕೋಟ್ಯಂತರ ಜನ ಆರೋಗ್ಯ ಭದ್ರತೆ ಪಡೆಯಲಿದ್ದಾರೆ.
ಈ ಕುರಿತು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಪ್ರತಿಕ್ರಿಯಿಸಿದ್ದು, ಆಯುಷ್ಮಾನ್ ಭಾರತ್ ಯೋಜನೆಗೆ ಒಪ್ಪಿಗೆ ಸೂಚಿಸಿರುವುದಕ್ಕೆ ಸಂಸತ್ತು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಸಾರ್ವಜನಿಕರ ಆರೋಗ್ಯ ಭದ್ರತೆಗೆ ಈ ಯೋಜನೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.
ಯೋಜನೆ ಅನ್ವಯ ದೇಶದ ಜಿಲ್ಲಾ ಕೇಂದ್ರಗಳಲ್ಲಿ ಮೆಡಿಕಲ್ ಕಾಲೇಜು ಸಹ ಸ್ಥಾಪಿಸಿ, ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವುದು ಸಹ ಯೋಜನೆಯ ಭಾಗವಾಗಿದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಮಹತ್ತರ ಯೋಜನೆ ಕೋಟ್ಯಂತರ ಜನರಿಗೆ ಉಪಯೋಗವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
Leave A Reply