ಯೋಗಿ ಸರ್ಕಾರದಿಂದ ಮತ್ತೊಂದು ದಿಟ್ಟ ನಿರ್ಧಾರ, ಜನರ ಆರೋಗ್ಯಕ್ಕಾಗಿ ಗೋಮೂತ್ರ ಸರಬರಾಜಿಗೆ ಚಿಂತನೆ
ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಅಧಿಕಾರಕ್ಕೆ ಬಂದ ಮೇಲೆ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡು ದೇಶವೇ ಉತ್ತರ ಪ್ರದೇಶದತ್ತ ನೋಡುವಹಾಗೆ ಮಾಡಿದ್ದಾರೆ. ಅದರಲ್ಲೂ ಅಪರಾಧ ನಿಗ್ರಹ ವಿಷಯದಲ್ಲಿ ಅವರು ದೇಶಕ್ಕೇ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.
ಇಂತಹ ಯೋಗಿ ಆದಿತ್ಯನಾಥರು ಈಗ ಮತ್ತೊಂದು ದಿಟ್ಟ ನಿರ್ಧಾರ ಕೈಗೊಂಡಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ಕಡಿಮೆ ಬೆಲೆಗೆ ಬಾಟಲ್ ಗಳಲ್ಲಿ ಸಂಗ್ರಹಿಸಿ ಗೋಮೂತ್ರ ಸರಬರಾಜು ಮಾಡಲು ಚಿಂತನೆ ನಡೆಸಿದ್ದಾರೆ.
ಸರ್ಕಾರಿ ಆಯುರ್ವೇದಿಕ್ ಫಾರ್ಮಸಿ ಈ ಜವಾಬ್ದಾರಿ ಹೊತ್ತಿದ್ದು, ಗೋಮೂತ್ರ ಸಂಗ್ರಹಿಸಿ, ಪರಿಷ್ಕರಿಸಿ, ಮಾರಾಟ ಮಾಡುವ ಕುರಿತು ಸರ್ಕಾರದ ಎದುರು ಪ್ರಸ್ತಾಪವಿಟ್ಟಿದ್ದು, ಕೂಡಲೇ ಅನುಮೋದನೆ ಸಿಕ್ಕು, ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಕುರಿತು ಪಿಲಿಬಿಟ್ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಧಾನ ಮೇಲ್ವಿಚಾರಕರಾಗಿರುವ ಡಾ.ಪ್ರಕಾಶ್ ಚಂದ್ರ ಸಕ್ಸೇನಾ ಮಾತನಾಡಿದ್ದು, ಇದು ಕೇವಲ ವೈದ್ಯಕೀಯ ದೃಷ್ಟಿಯಿಂದ ಅಲ್ಲ, ಜನರ ಆರೋಗ್ಯದ ದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿದಿನ 10ರಿಂದ 20 ಮಿಲಿ ಲೀಟರ್ ಗೋಮೂತ್ರ ಸೇವನೆ ಮಾಡುವುದರಿಂದ ಆಯಾ ಕಾಲಮಾನಕ್ಕೆ ಬರುವ ನೆಗಡಿ, ಕೆಮ್ಮು, ಜ್ವರ ಹಾಗೂ ಹೊಟ್ಟೆಗೆ ಸಂಬಂಧಿಸಿದಂತಹ ರೋಗ ತಡೆಯಬಹುದಾಗಿದೆ. ಹಾಗಾಗಿಯೇ ಸರ್ಕಾರ ಗೋಮೂತ್ರ ಸರಬರಾಜಿಗೆ ಮುಂದಾಗಿದೆ ಎಂದು ವಿವರಿಸಿದ್ದಾರೆ.
ಆದಾಗ್ಯೂ ಪ್ರಸ್ತುತ ಯೋಗಿ ಆದಿತ್ಯನಾಥರ ಸರ್ಕಾರ 7 ಜಿಲ್ಲೆಗಳು ಹಾಗೂ 16 ನಗರಗಳಲ್ಲಿ 1000 ಗೋವುಗಳನ್ನು ಸಾಕಬಹುದಾದಂತ ಗೋಶಾಲೆ ತೆರೆಯಲು ಒಪ್ಪಿಗೆ ಸೂಚಿಸಿದೆ. ಇವುಗಳಿಂದ ರಾಜ್ಯದ ಜನರಿಗೆ ಅಗತ್ಯವಾಗುವ ಗೋಮೂತ್ರ ಸಂಗ್ರಹಿಸಲಾಗುತ್ತದೆ. ಅಲ್ಲದೆ, ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿರುವ ಗೋಶಾಲೆಗಳಿಂದಲೂ ಗೋಮೂತ್ರ ಸಂಗ್ರಹಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
Leave A Reply