ಉಡುಪಿ ರಾಜಕೀಯಕ್ಕೆ ಶೀರೂರು ಶ್ರೀಗಳ ಎಂಟ್ರಿಯ ಮೊದಲೇ ಏನಿದೆಲ್ಲಾ…!
ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಅತ್ಯಂತ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ. ಒಂದು ಕಡೆ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಭಾರತೀಯ ಜನತಾ ಪಾರ್ಟಿಗೆ ಬರುತ್ತಾರೆ ಎನ್ನುವ ಮಾತು ಇವತ್ತು ಮತ್ತೆ ಸುದ್ದಿಯಾಗಿದೆ. ಈ ವಾರದ ಅಂತ್ಯಕ್ಕೆ ಅದು ಮತ್ತೆ ಕಾವು ಪಡೆಯುವ ಸಾಧ್ಯತೆಗಳಿವೆ. ಮತ್ತೊಂದೆಡೆ ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಶೀರೂರು ಮಠದ ಸ್ವಾಮಿ ಶ್ರೀ ಶ್ರೀ ಲಕ್ಷ್ಮೀವರ ತೀರ್ಥರು ಬಿಜೆಪಿಯಿಂದ ಸ್ಪರ್ಧಿಸಲು ಬಯಸಿರುವುದು ಮತ್ತು ಒಂದೊಮ್ಮೆ ಬಿಜೆಪಿಯವರು ಟಿಕೆಟ್ ಕೊಡದಿದ್ದರೆ ಪಕ್ಷೇತರರಾಗಿ ಕಣಕ್ಕೆ ಇಳಿದೇ ಇಳಿಯುತ್ತೇವೆ ಎಂದು ಬಹಿರಂಗವಾಗಿ ಸುದ್ದಿಗೋಷ್ಟಿ ಮಾಡಿ ಘೋಷಿಸಿರುವುದು ಉಡುಪಿ ರಾಜಕೀಯದ ಸದ್ಯದ ಹೈಲೈಟ್ಸ್.
ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಬಿಡುತ್ತಾರಾ, ಬಿಜೆಪಿ ಸೇರುತ್ತಾರಾ ಎನ್ನುವುದು ಇನ್ನೂ ಫೈನಲ್ ಆಗಿಲ್ಲ. ಸ್ಥಳೀಯ ಬಿಜೆಪಿ ನಾಯಕರ ವಿರೋಧ ಇದೆ ಎಂದು ಅವರೇ ಹೇಳಿದ್ದಾರೆ. ಆದ್ದರಿಂದ ಇವತ್ತು ಆ ವಿಷಯ ಅನಗತ್ಯ. ಆದರೆ ಶೀರೂರು ಶೀಗಳು ಖಡಾಖಂಡಿತವಾಗಿ ರಾಜಕೀಯಕ್ಕೆ ಬರುವುದಾಗಿ ಹೇಳಿರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ತಮ್ಮ ಮತಗಳಿಕೆಯ ಲೆಕ್ಕಾಚಾರದಲ್ಲಿ ನಿರತವಾಗಿವೆ. ಒಂದು ವೇಳೆ ಜನರಿಗೆ ಬಿಜೆಪಿಗೆನೆ ವೋಟ್ ಹಾಕಬೇಕು ಎಂದು ಅನಿಸಿದರೆ ಅವರು ಬಿಜೆಪಿಯಿಂದ ಯಾರು ನಿಂತರೂ ಅವರಿಗೆ ಹಾಕುತ್ತಾರೆ. ಪ್ರಮೋದ್ ಅವರಿಗೆನೆ ಮತ ಹಾಕಬೇಕು ಎಂದು ನಿರ್ಧರಿಸಿದರೆ ಅವರು ಕಾಂಗ್ರೆಸ್ಸಿನಲ್ಲಿದ್ದರೂ ಹಾಕುತ್ತಾರೆ. ಆದ್ದರಿಂದ ರಾಜಕೀಯ ಪಕ್ಷದವರು ಇಲ್ಲಿ ಆತಂಕ ಪಡುವ ಅಗತ್ಯ ಇಲ್ಲ. ಆದರೆ ಅದು ಬಿಟ್ಟು ಸ್ವಾಮೀಜಿಯವರ ಮೇಲೆ ವೈಯಕ್ತಿಕವಾಗಿ ಆಪಾದನೆ ಬರುವ ವಾತಾವರಣ ಸೃಷ್ಟಿಸಿದರೆ ಅದರಿಂದ ನಷ್ಟವಾಗುವುದು ಸನಾತನ ಧರ್ಮದ ತಳಹದಿಯ ಮೇಲೆ ನಿಂತಿರುವ ಹಿಂದೂ ಆಚಾರ, ವಿಚಾರ ಮತ್ತು ಸಂಸ್ಕೃತಿಗೆ.
ಚಿಕ್ಕವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆ…
ಇತ್ತೀಚೆಗೆ ಚಾನೆಲ್ ಒಂದರಲ್ಲಿ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಹೇಳಿದ್ದಾರೆ ಎನ್ನಲಾದ ಒಂದು ವಿಡಿಯೋ ಕ್ಲಿಪ್ಪಿಂಗ್ ಪ್ರಸಾರವಾಗುತ್ತಿತ್ತು. ಅದರಲ್ಲಿ “ನಮಗೆ ಎಂಟು ವರ್ಷದ ಪ್ರಾಯದಲ್ಲಿಯೇ ಸನ್ಯಾಸ ದೀಕ್ಷೆಯನ್ನು ಕೊಡುತ್ತಾರೆ. ನಾವು ಯೌವನಾವಸ್ಥೆಗೆ ಬರುವಾಗ ಹದಿಹರೆಯದ ಆಸೆ, ಆಕಾಂಕ್ಷೆಗಳು ನಮ್ಮಲ್ಲಿ ಮೂಡುತ್ತವೆ” ಎನ್ನುವ ಅರ್ಥದ ಮಾತುಗಳು ಮತ್ತು ಅದನ್ನು ಮುಂದುವರೆಸಿ ಕೆಲವು ವಿಷಯಗಳನ್ನು ಸ್ವಾಮೀಜಿಗಳು ಹೇಳಿದ್ದಾರೆ ಎಂದು ಸುದ್ದಿಯಾಗಿತ್ತು. ಅದು ತಮ್ಮ ತೇಜೋವಧೆ ಮಾಡಲು ನಡೆಸಿದ ಷಡ್ಯಂತ್ರ ಎಂದು ಶ್ರೀ ಶ್ರೀ ಲಕ್ಷ್ಮೀವರ ತೀರ್ಥರು ಹೇಳಿದ್ದಾರೆ. ಅದು ಡಬ್ಬಿಂಗ್ ಮಾಡಿರುವ ವಾಯ್ಸ್ ಎಂದು ಕೂಡ ಅವರು ಹೇಳಿದ್ದಾರೆ. ಆದರೆ ಈ ನ್ಯೂಸ್ ಹಲವರಿಗೆ ಮಾತನಾಡಲು ಒಂದು ಅವಕಾಶ ಕೊಟ್ಟಂತೆ ಆಗಿದೆ.
ಸ್ವಾಮಿಗಳು ಎಂದರೆ ಅರಿಷಡ್ ವರ್ಗಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಸರ್ವಸಂಗ ಪರಿತ್ಯಾಗಿಗಳಂತೆ ಕೇವಲ ದೇವರ ಧ್ಯಾನದಲ್ಲಿ ಇರುವುದರಿಂದ ಜನ ಅವರಿಗೆ ಗೌರವ ಕೊಡುತ್ತಾರೆ. ಜನರ ಅಪರಿಮಿತ ವಿಶ್ವಾಸ, ಭಕ್ತಿ, ಪೂಜೆ ಸ್ವಾಮಿಜಿಗಳು ಪೀಠಾಸೀನರಾಗಿರುವ ಆ ಪೀಠಕ್ಕೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಒಂದು ವೇಳೆ ಸಂತರಿಗೆ ತಮ್ಮ ಮನೋವಾಂಛೆಗಳನ್ನು ತೀರಿಸಲು ಆಗದೇ ಹೋದರೆ ಅವರು ಆ ಪೀಠದಲ್ಲಿ ಕುಳಿತುಕೊಳ್ಳಬಾರದು ಎಂದು ಹಿರಿಯರು ನಿಶ್ಚಯಿಸಿದ್ದಾರೆ. ಆ ನಿಟ್ಟಿನಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟವರು ಹಿಂದಿನ ಸುಬ್ರಮಣ್ಯ ಶ್ರೀಗಳು. ವಿದ್ಯಾಭೂಷಣ ಶ್ರೀಗಳು ಸುಬ್ರಹ್ಮಣ್ಯ ಮಠಾಧಿಪತಿಗಳಾಗಿದ್ದಾಗ ಅವರಿಗೆ ಸನ್ಯಾಸ ಜೀವನದಲ್ಲಿ ಅವರ ಭಕ್ತೆಯಾಗಿದ್ದ ವೈದ್ಯೆಯೊಂದಿಗೆ ಪ್ರೀತಿಯ ಸೆಳೆತವಾದಾಗ ಇಬ್ಬರೂ ಮದುವೆಯಾಗಲು ನಿರ್ಧರಿಸಿದಾಗ ವಿದ್ಯಾಭೂಷಣ ಶ್ರೀಗಳು ತಮ್ಮ ಸನ್ಯಾಸ ಬದುಕನ್ನು ತೊರೆದು ಲೌಕಿಕ ಬದುಕಿಗೆ ಮರಳಿದ್ದರು.
ಈಗ ಶೀರೂರು ಶ್ರೀಗಳು ತಾವು ರಾಜಕೀಯಕ್ಕೆ ಧುಮುಕಿ ಶಾಸಕನಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಶೀರೂರು ಶ್ರೀಗಳು ಎಲ್ಲಿಯೋ ಒಂದು ಕಡೆ ಮಾತನಾಡುವಾಗ ಬೇರೆ ಅಷ್ಟಮಠಗಳ ಸ್ವಾಮೀಜಿಗಳಿಗೂ ಮಕ್ಕಳಿವೆ ಎಂದು ಹೇಳಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿವೆ. ಅವರು ಹಾಗೆ ಹೇಳಿದ್ದಾರೋ, ಇಲ್ವೋ, ಆದರೆ ಹೀಗೆ ಸುದ್ದಿಯಾಗುವುದರಿಂದ ನಮ್ಮ ಪೀಠಗಳ ಮೇಲೆನೆ ಹಲವರಿಗೆ ಗೊಂದಲಗಳು ಏರ್ಪಡುತ್ತವೆ. ಯುವ ವೃಂದ ಭ್ರಮನಿರಸನಗೊಳ್ಳುತ್ತದೆ. ಆಸ್ತಿಕರಿಗೆ ಬೇಸರವಾಗುತ್ತದೆ. ಹಿರಿಯರಿಗೆ ಅಸಮಾಧಾನವಾಗುತ್ತದೆ.
ಪೇಜಾವರ ಶ್ರೀಗಳ ನಡೆ ಎಲ್ಲರಿಗೂ ಮಾದರಿ…
ಅಷ್ಟಮಠಗಳಿಗೆ ಅಸಂಖ್ಯಾತ ಭಕ್ತರಿದ್ದಾರೆ. ಪೇಜಾವರ ಹಿರಿಯ ಶ್ರೀಗಳನ್ನು ನಡೆದಾಡುವ ದೇವರು ಎಂದು ಆರಾಧಿಸುವವರಿದ್ದಾರೆ. ಅಷ್ಟಮಠಗಳಿಂದ ಅನೇಕ ಸತ್ಕಾರ್ಯಗಳು ಜನರ ಏಳಿಗೆಗಾಗಿ ಹಿಂದೆನೂ ನಡೆದಿವೆ, ಮುಂದೆನೂ ನಡೆಯಲಿವೆ. ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಹಿಂದೂ ಧರ್ಮದಲ್ಲಿ ಸಮಾನತೆ ತರಬೇಕು ಎನ್ನುವ ಉದ್ದೇಶದಿಂದ ದಲಿತರ ಕೇರಿಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಅವರ ಕ್ರಾಂತಿಕಾರಿ ಹೆಜ್ಜೆಗಳಿಂದ ಜನರಿಗೆ ಅವರ ಮೇಲಿದ್ದ ಗೌರವ ಇಮ್ಮಡಿಯಾಗಿತ್ತು. ಸ್ವಾಮೀಜಿಗಳು ಹೀಗೂ ಇರುತ್ತಾರಾ ಎಂದು ಜನ ಮೂಗಿನ ಮೇಲೆ ಬೆರಳಿಡುವ ಹಾಗೆ ದಲಿತರ ಕೇರಿಯ ನಾಗರಿಕರು ಆಶ್ಚರ್ಯಪಟ್ಟಿದ್ದರು. ಪತ್ರಿಕೆಗಳು ಪೇಜಾವರ ಶ್ರೀಗಳ ನಡೆಯನ್ನು ಸ್ವಾಗತಿಸಿ ಬರೆದಿದ್ದವು.
ಶೀರೂರು ಶ್ರೀಗಳ ಬಗ್ಗೆನೂ ಹಿಂದೆ ಟ್ಯಾಬ್ಲಾಯಿಡ್ ಪತ್ರಿಕೆಗಳಲ್ಲಿ ವಿವಿಧ ರೀತಿಯ ಕಥೆಗಳು ಬಂದಿವೆ. ಬಹುಶ: ಆ ಸಮಯದಲ್ಲಿ ಶೀರೂರು ಶ್ರೀಗಳು ತಮ್ಮ ಆಪ್ತರಲ್ಲಿಯೋ ಅಥವಾ ಬೇರೆ ಎಲ್ಲೋ ಹೇಳಿದ ಹೇಳಿಕೆ ಈಗ ಯಾರೋ ಬಹಿರಂಗ ಮಾಡಿದ್ದಾರೆ ಅಥವಾ ಸ್ವಾಮಿಗಳೇ ಹೇಳುವಂತೆ ಡಬ್ಬಿಂಗ್ ಮಾಡಿ ಬಿಟ್ಟಿದ್ದಾರೆ. ಒಟ್ಟಿನಲ್ಲಿ ಸ್ವಾಮಿಗಳು ನಿಜಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ, ಗೆದ್ದು ಶಾಸಕರಾಗುತ್ತಾರಾ ಎನ್ನುವುದಕ್ಕಿಂತ ಶೀರೂರು ಶ್ರೀ ಲಕ್ಷ್ಮೀವರ ತೀರ್ಥರ ಬಗ್ಗೆ ಹಳೆ ಕಥೆಗಳು ಹೊಸ ರೂಪದಲ್ಲಿ ಬಯಲಿಗೆ ಬಂದು ಒಂದಿಷ್ಟು ಚರ್ಚೆಯಾಗಿರುವುದು ನಿಜ!
Leave A Reply