ಪಾಕಿಸ್ತಾನ ಗಡಿಯಲ್ಲಿ ವಾಯುನೆಲೆ ಸ್ಥಾಪನೆಗೆ ಕೇಂದ್ರದ ಗ್ರೀನ್ ಸಿಗ್ನಲ್
ದೆಹಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತೀಯ ಸೈನ್ಯಕ್ಕೆ ಹೊಸ ಚೈತನ್ಯ ತುಂಬುವ ಕಾರ್ಯ ಮಾಡುತ್ತಿದ್ದು, ಇದೀಗ ಪಾಕಿಸ್ತಾನದ ಗಡಿಯಲ್ಲಿ ವಾಯುನೆಲೆ ಸ್ಥಾಪಿಸುವ ಮಹತ್ವದ ತೀರ್ಮಾವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಮೂಲಕ ಪಾಕಿಸ್ತಾನದ ಗಡಿಯಲ್ಲಿ ಸೈನ್ಯಕ್ಕೆ ಮತ್ತಷ್ಟು ಬಲ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಗುಜರಾತ್ನ ಪಾಕ್ ಗಡಿಯಲ್ಲಿ ಭಾರತೀಯ ವಾಯುಪಡೆಯ ವಾಯುನೆಲೆ ಸ್ಥಾಪಿಸಲು ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯುರಿಟಿ (ಸಿಸಿಎಸ್) ಒಪ್ಪಿಗೆ ಸೂಚಿಸಿದೆ.
ಪ್ರಸ್ತುತ 1000 ಮೀಟರ್ ರನ್ ವೇ ಇರುವ ವಿಮಾನ ನಿಲ್ದಾಣವನ್ನು ಹೆಲಿಕ್ಯಾಪ್ಟರ್ ಇಳಿಸಲು ಮತ್ತು ವಿವಿಐಪಿಗಳ ಓಡಾಡಕ್ಕೆ ಮಾತ್ರ ಬಳಸಲಾಗುತ್ತಿತ್ತು. ಆದ್ದರಿಂದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಮಾನ ನಿಲ್ದಾಣವನ್ನು ವಾಯುನೆಲೆಯಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ಧಾರೆ.
ಗುಜರಾತ್ನ ಬನಸ್ಕಾಂತಾ ಜಿಲ್ಲೆಯ ದೀಸಾದಲ್ಲಿರುವ ಚಿಕ್ಕ ವಿಮಾನ ನಿಲ್ದಾಣವನ್ನು ಸುಮಾರು 1000 ಕೋಟಿ ರೂ. ವೆಚ್ಚದಲ್ಲಿ ವಾಯುನೆಲೆಯಾಗಿ ಮಾರ್ಪಡಿಸಲು ಒಪ್ಪಿಗೆ ಸೂಚಿಸಲಾಗಿದೆ. ಬರ್ಮೀರ್ ಮತ್ತು ಭುಜ್ ವಾಯು ನೆಲೆಗಳಗಳ ನಡುವೆ ಇರುವ ದೀಸಾ ವಿಮಾನ ನಿಲ್ದಾಣ ಗಡಿ ರಕ್ಷಣೆಯ ದೃಷ್ಟಿಯಿಂದ ಪ್ರಮುಖ ಸ್ಥಾನ ಹೊಂದಿದೆ. ಭಾರತೀಯ ವಾಯುಪಡೆ ಹಲವು ವರ್ಷದಿಂದ ದೀಸಾ ವಾಯುನೆಲೆಗಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ನಿವೃತ್ತ ಏರ್ ಮಾರ್ಷಲ್ ವಿನೋದ್ ಪಟ್ನಿ ಸ್ವಾಗತಿಸಿದ್ದಾರೆ.
Leave A Reply