ಕಾಲೇಜಿನಲ್ಲಿ ಭಗತ್ ಸಿಂಗ್ ಕುರಿತ ಕಾರ್ಯಕ್ರಮ ಆಯೋಜಿಸಲು ಅನುಮತಿ ಕೊಡಿ ಎಂದಿದ್ದೇ ಆಕೆಯ ತಪ್ಪಾಯಿತೇ?
ಭೋಪಾಲ್: ಭಗತ್ ಸಿಂಗ್, ರಾಜ್ ಗುರು, ಸುಖದೇವ್. ಈ ಮೂವರು ಬಿಸಿ ರಕ್ತದ ಯುವಕರು ದೇಶಕ್ಕಾಗಿ ಪ್ರಾಣಬಿಟ್ಟಿದ್ದು ಎಲ್ಲಿರಗೂ ಗೊತ್ತು. ಆದರೆ ಇಂತಹ ವೀರರ ಕುರಿತು ಕಾರ್ಯಕ್ರಮ ಆಯೋಜಿಸುತ್ತೇನೆ ಎಂದಿದ್ದೇ ಈಗ ಆ ಯುವತಿಯ ಭವಿಷ್ಯಕ್ಕೇ ಕುತ್ತಾಗಿದೆ.
ಹೌದು, ಮಧ್ಯಪ್ರದೇಶದ ಭೋಪಾಲ್ ನ ಮೋತಿಲಾಲ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಎರಡನೇ ವರ್ಷದ ಬಿಎಸ್ಸಿ ಓದುತ್ತಿರುವ ಆಸ್ಮಾ ಖಾನ್ ಎಂಬ ವಿದ್ಯಾರ್ಥಿನಿ ಭಗತ್ ಸಿಂಗ್ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮಾರ್ಚ್ 23ರಂದು ಕಾರ್ಯಕ್ರಮ ಆಯೋಜಿಸಲು ಕಾಲೇಜು ಆಡಳಿತ ಮಂಡಳಿಗೆ ಅನುಮತಿ ಕೇಳಿದ್ದಳು. ಆದರೆ ಕಾಲೇಜು ಆಡಳಿತ ಮಂಡಳಿ ಅನುಮತಿ ನೀಡಿರಲಿಲ್ಲ.
ಇದರಿಂದ ಕುಪಿತಳಾಗಿದ್ದ ಆಸ್ಮಾ ಫೇಸ್ ಬುಕ್ ನಲ್ಲಿ ತನ್ನ ಬೋಧಕ ವೃಂದ ಭಗತ್ ಸಿಂಗ್ ಪುಣ್ಯಸ್ಮರಣೆ ದಿನ ಆಚರಿಸಲು ಅವಕಾಶ ನೀಡಿಲ್ಲ. ಇವರೆಲ್ಲ ದೇಶವಿರೋಧಿಗಳು ಎಂದು ಪೋಸ್ಟ್ ಹಾಕಿದ್ದಳು. ಆದರೆ ಇದರಿಂದ ಆಕ್ರೋಶಗೊಂಡಿರುವ ಕಾಲೇಜು ಆಡಳಿತ ಮಂಡಳಿ ಆಸ್ಮಾ ಖಾನ್ ಳನ್ನು ಒಂದು ವರ್ಷದವರೆಗೆ ಕಾಲೇಜಿನಿಂದಲೇ ಅಮಾನತು ಮಾಡಿದೆ.
ಆಸ್ಮಾ ಖಾನ್ ಭಗತ್ ಸಿಂಗ್ ಕ್ರಾಂತಿ ದಳ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯೆಯಾಗಿದ್ದು, ಇವರಿಗೆ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲು ಅನುಮತಿ ಏಕೆ ಕೊಟ್ಟಿಲ್ಲ? ಅಷ್ಟಕ್ಕೂ ಅವರು ಕೇಳಿದ್ದು ಭಗತ್ ಸಿಂಗ್ ಪುಣ್ಯಸ್ಮರಣೆ ಕಾರ್ಯಕ್ರಮವೇ ಹೊರತು, ಅಫ್ಜಲ್ ಗುರುವಿನದ್ದು ಅಲ್ಲವಲ್ಲ? ಎಂಬ ಪ್ರಶ್ನೆಗಳು ಎದ್ದಿವೆ.
Leave A Reply