ಕಾಂಗ್ರೆಸ್ಸಿನ ಹಾಲಿ 30 ಶಾಸಕರು ಚುನಾವಣೆಯಲ್ಲಿ ಸೋಲುತ್ತಾರೆ ಎಂಬ ಭೀತಿ ಕಾಂಗ್ರೆಸ್ಸಿಗೆ ಹೇಗೆ ಕಾಡುತ್ತಿದೆ ಗೊತ್ತಾ?
ಬೆಂಗಳೂರು: ಕರ್ನಾಟಕದಲ್ಲಿ ಶತಾಯ-ಗತಾಯ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ರಾಹುಲ್ ಗಾಂಧಿಯವರಿಗೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ರಾಹುಲ್ ಗಾಂಧಿಯವರೇನೋ ಚುನಾವಣೆ ಹಿನ್ನೆಲೆಯಲ್ಲಿ ಹಿಂದುತ್ವದ ವೇಷ ತೊಟ್ಟು ಮಠ ಮಾನ್ಯಗಳಿಗೆ ತೆರಳುತ್ತಿದ್ದಾರೆ. ಇದರ ಭಾಗವಾಗಿ ಶನಿವಾರ ಸಹ ಅವರು ಚಾಮರಾಜನಗರ, ಮಂಡ್ಯದಲ್ಲಿ ಪ್ರವಾಸ ಕೈಗೊಂಡು ಪ್ರಚಾರ ಮಾಡಲಿದ್ದಾರೆ. ಆದರೆ ಇದರ ಬೆನ್ನಲ್ಲೇ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗುವ ಎಲ್ಲ ಲಕ್ಷಣಗಳು ಗೋಚರಿಸಿವೆ.
ಹಾಗಂತ ಯಾವುದೇ ಟಿವಿ ಚಾನೆಲ್ಲಿನ ಅಥವಾ ಪತ್ರಿಕೆ, ಆನ್ ಲೈನ್ ಸಮೀಕ್ಷೆಯ ವರದಿಗಳು ಹೀಗೆ ಹೇಳುತ್ತಿಲ್ಲ. ಸ್ವತಃ ಕಾಂಗ್ರೆಸ್ ಪಕ್ಷವೇ, ಒಂದಲ್ಲ ಎರಡು ಆಂತರಿಕ ಸಮೀಕ್ಷೆಯನ್ನು ಕೈಗೊಂಡಿದ್ದು, ಅದರ ಫಲಿತಾಂಶ ಮಾತ್ರ ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಹೌದು, ಕಾಂಗ್ರೆಸ್ ರಾಜ್ಯಾದ್ಯಂತ ಚುನಾವಣಾ ಪೂರ್ವವಾಗಿ ಎರಡು ಆಂತರಿಕ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಬರೋಬ್ಬರಿ 30 ಹಾಲಿ ಶಾಸಕರು ಈ ಬಾರಿಯ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ತಿಳಿದುಬಂದಿದೆ. ಇದರಿಂದ ಧೃತಿಗೆಟ್ಟಿರುವ ಕಾಂಗ್ರೆಸ್ ನಾಯಕರು ಈಗ ಪರಿಹಾರ ಹುಡುಕುವಲ್ಲಿ ಮಗ್ನರಾಗಿದ್ದಾರೆ.
30 ಹಾಲಿ ಶಾಸಕರು ಗೆಲ್ಲುವ ಲಕ್ಷಣಗಳು ತುಂಬ ಕಡಿಮೆ ಇರುವುದರಿಂದ ಇವರಿಗೆ ಟಿಕೆಟ್ ಕೊಡುವುದಾ? ಬೇಡವಾ? ಕೊಟ್ಟ ಬಳಿಕ ಸೋತರೆ ಏನು ಮಾಡುವುದು? ಬೇರೆಯವರಿಗೆ ಕೊಟ್ಟರೆ ಪಕ್ಷದಲ್ಲಿ ಭಿನ್ನಮತ ಭುಗಿಲೇಳುವುದಾ? ಎಂಬ ಚಿಂತೆ ನಾಯಕರನ್ನು ಕಾಡುತ್ತಿದೆ. ಅದಕ್ಕಾಗಿಯೇ ಮಾರ್ಚ್ 28 ಮತ್ತು 29ರಂದು ಸಭೆ ಕರೆದಿದ್ದು, ಇವರ ಭವಿಷ್ಯ ಸಹ ನಿರ್ಧಾರವಾಗಲಿದೆ ಎಂದು ತಿಳಿದುಬಂದಿದೆ.
ಆದರೆ ಕಾಂಗ್ರೆಸ್ಸಿನದ್ದೇ ಆಂತರಿಕ ಸಮೀಕ್ಷೆ ಪ್ರಕಾರ ಈಗಿರುವ 30 ಶಾಸಕರು ಚುನಾವಣೆಯಲ್ಲಿ ಸೋಲುತ್ತಾರೆ ಎಂದು ತಿಳಿದುಬಂದಿರುವುದು ರಾಜ್ಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಎಂತಹ ಅಲೆ ಇರಬಹುದು, ಯೋಚಿಸಿ.
Leave A Reply