ತ್ರಿಪುರಾ ವಿಧಾನಸಭೆಯಲ್ಲಿ ಪ್ರಥಮ ಬಾರಿಗೆ ಮೊಳಗಿತು ರಾಷ್ಟ್ರಗೀತೆ
ಅಗರ್ತಲಾ: ಸುಮಾರು 25 ವರ್ಷ ಕಮ್ಯುನಿಸ್ಟರ್ ಆಡಳಿತದಿಂದ ಬೇಸತ್ತಿದ್ದ ತ್ರಿಪುರಾ ಜನರು ಬಿಜೆಪಿ ಭರ್ಜರಿ ಗೆಲುವು ದೊರಕಿಸಿಕೊಟ್ಟಿದ್ದಾರೆ. ಬಿಜೆಪಿಯ ವಿಜಯದ ಪರಿಣಾಮ ತ್ರಿಪುರಾದಲ್ಲಿ ಹೊಸ ಅಲೆ ಸೃಷ್ಟಿಯಾಗಿದ್ದು, ದೇಶದ ಐಕ್ಯತೆ, ಭಾವೈಕ್ಯತೆ, ಸಂಸ್ಕೃತಿಯ ಪ್ರತಿಬಿಂಬವಾಗಿರುವ ರಾಷ್ಟ್ರಗೀತೆಯನ್ನು ತ್ರಿಪುರಾದ ವಿಧಾನಸಭೆಯಲ್ಲಿ ಮೊಳಗಿಸುವ ಮೂಲಕ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿದೆ.
ಹೊಸದಾಗಿ ಆಯ್ಕೆಯಾಗಿರುವ ಹೊಸ ಸರ್ಕಾರದ ಪ್ರಥಮ ಅಧಿವೇಶನ ಶುಕ್ರವಾರ ಆರಂಭವಾಗಿದ್ದು, ಸಭಾಪತಿ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಗೆ ಮುಂಚೆ ರಾಷ್ಟ್ರಗೀತೆ ಮೊಳಗಿಸಲಾಗಿದೆ. ರಾಷ್ಟ್ರಗೀತೆಗೆ ಸದನದ ಎಲ್ಲ ಸಿಬ್ಬಂದಿ, ಶಾಸಕರು, ಅಧಿಕಾರಿಗಳು, ಪತ್ರಕರ್ತರು ಎದ್ದು ನಿಂತು ಗೌರವ ನೀಡಿದರು.
ಸಭಾಪತಿ ಚುನಾವಣೆ ನಡೆಸಲು ರತನ್ ಚಕ್ರವರ್ತಿ ಆಗಮಿಸುತ್ತಿದ್ದಂತೆ ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ಕಾರ್ಯದರ್ಶಿ ಬಂಬದೇಬ್ ಮುಜುಂದಾರ್ ‘ವಿಧಾನಸಭೆಯಲ್ಲಿ ನಿತ್ಯ ರಾಷ್ಟ್ರಗೀತೆಯನ್ನು ಮೊಳಗಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರಗೀತೆ ಹಾಡುವುದರಲ್ಲೂ ರಾಜಕೀಯ ಬೆರೆಸಿರುವ ಕಮ್ಯುನಿಸ್ಟ್ ಪಾರ್ಟಿ ಮುಖಂಡ ಬಾದಲ್ ಚೌದರಿ ‘ರಾಷ್ಟ್ರಗೀತೆ ಕುರಿತು ವಿಧಾನಸಭೆ ಅಧಿಕಾರಿಗಳು ಪ್ರತಿಪಕ್ಷಗಳ ಅಭಿಪ್ರಾಯ ಪಡೆದಿಲ್ಲ. ಇಂತಹ ಮಹತ್ವದ ತೀರ್ಮಾನ ಕೈಗೊಳ್ಳುವ ಮುನ್ನ ಪ್ರತಿಪಕ್ಷಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leave A Reply