ಶೋಭಾ ಕರಂದ್ಲಾಜೆಯ ಸುಳ್ಳು ಪ್ರಚಾರದಿಂದ ಕೇಂದ್ರ ನಾಯಕರು ಗರಂ!
ಅದರ ಬದಲು ಮೋದಿ ಅಭಿವೃದ್ಧಿ ಪುಸ್ತಕ ಹಿಡಿದು ಹೊರಡಿ ಎಂದು ತಾಕೀತು!
ಇದೇ ಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ನಾನೇ ಮುಖ್ಯಮಂತ್ರಿ ಎಂದು ಗರಿಗರಿ ಕೋಟು ಹೊಲೆಸಿ ತಯಾರಾಗುತ್ತಿರುವ ಯಡಿಯೂರಪ್ಪನವರಿಗೆ ಮೂಲೆಯಲ್ಲೆಲ್ಲೋ ಒಂದು ಸಣ್ಣ ಆತಂಕ ಇದೆ. ಅದೇನೆಂದರೆ ಇಲೆಕ್ಷನ್ ನಡೆದು ಫಲಿತಾಂಶ ಬರುವ ಹೊತ್ತಿಗೆ ತಮಗೆ 75 ಆಗಿರುತ್ತದೆ. ಅದರ ನಂತರ ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದರೂ ಅದಕ್ಕೆ ವಾರಂಟಿ ಪಿರೀಡ್ ಎಂದು ಇರುತ್ತದೆ. ಆದ್ದರಿಂದ ಒಂದು ಸಣ್ಣ ಪ್ರಮಾದ ನಡೆದರೂ ತಮ್ಮನ್ನು ವಿಧಾನಸೌಧದ ಮೂರನೇ ಮಹಡಿಯಿಂದ ಮುನ್ನೂರು ಕಿಲೋ ಮೀಟರ್ ಆಚೆ ಬಿಸಾಡಲು ಈ ಗುಜರಾತಿಗಳು ಹಿಂಜರಿಯುವುದಿಲ್ಲ, ಆದ್ದರಿಂದ ತಾನು ಇಳಿಯುವ ಹೊತ್ತಿಗೆ ತನ್ನ ಸ್ಥಾನದಲ್ಲಿ ಕುಳಿತುಕೊಳ್ಳಲು ರಾಜ್ಯದಲ್ಲಿ ಹೈಕಮಾಂಡ್ ಸಮೀಕ್ಷೆ ನಡೆಸಿ ಯಾರಾದರೂ ಬೇರೆ ನಾಯಕರು ಸಿಕ್ಕಿದರೆ ಅದರ ನಂತರ ಈ ವಿಧಾನಸೌಧದ ಮೂರನೇ ಮಹಡಿ ತಮಗೆ ಆಷಾಢಕ್ಕೋ, ಶ್ರಾವಣಕ್ಕೋ ತವರು ಮನೆಯವರು ಕರೆದರೆ ಹೋಗುವುದಕ್ಕೆ ಮಾತ್ರ ಸೀಮಿತವಾಗುತ್ತೆ ಎಂದು ತಿಳಿದಿದೆ.
ಅದಕ್ಕಾಗಿ ತಾನು ಸಿಎಂ ಖುರ್ಚಿ ಬಿಟ್ಟು ಹೋಗುವಾಗ ಅದಕ್ಕೆ ಟವೆಲ್ ಹಾಕಿ ಹೋಗಲು ಅವರು ತಮ್ಮದೇ ಪಾಳಯದ ಸೇನಾಧಿಪತಿಯನ್ನು ಹುಡುಕುತ್ತಿದ್ದಾರೆ. ಅದು ಯಾರು ಗೊತ್ತಾ? ಸಂಶಯವೇ ಇಲ್ಲ. ಶೋಭಾ ಕರಂದ್ಲಾಜೆ. ಶೋಭಾಳನ್ನು ತಾವು ಹೋದಲ್ಲೆಲ್ಲ ಕರೆದುಕೊಂಡು ಹೋಗುತ್ತಿರುವ ಬಿಎಸ್ ವೈ ತಮ್ಮ ಭಾಷಣಕ್ಕಿಂತಲೂ ಆಕೆಯ ಮಾತಿಗೆ ಮಾಧ್ಯಮಗಳಲ್ಲಿ ಹೆಚ್ಚು ಜಾಗ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಏನಾದರೂ ಹೊಡಿ ಬಡಿ ಮಾತನಾಡು, ಪೊಲೀಸರ ಧಮ್ಮಿನ ವಿಷಯ ತೆಗಿ, ಯುವಕರಿಗೆ ಖುಷಿಯಾಗುತ್ತೆ ಎಂದು ಯಡಿಯೂರಪ್ಪ, ಶೋಭಾಳಿಗೆ ಹೇಳಿದಂತಿದೆ. ಅದಕ್ಕೆ ಅವಸರಕ್ಕೆ ಬಿದ್ದಿರುವ ಶೋಭಾ ” ಕಾಂಗ್ರೆಸ್ ಅಧಿಕಾರದಲ್ಲಿದ್ದ ಹತ್ಯೆಯಾದ ಸಂಘ ಪರಿವಾರದ ಯುವಕರ ಪಟ್ಟಿ” ಹಿಡಿದುಕೊಂಡು ಸಂಸತ್ತಿನಲ್ಲಿ ತಿರುಗುತ್ತಿದ್ದಾರೆ. ಬಹುಶ: ನೂರರಲ್ಲಿ 20 ಜನರಿಗೆ ಮಾತ್ರ ಖುಷಿಯಾಗುವ ಇಂತಹ ಹತ್ಯಾ ವಿಷಯಗಳನ್ನು ಪಕ್ಕಕ್ಕೆ ಇಟ್ಟು ಮೋದಿ ಮಾಡಿರುವ ಸಾವಿರಾರು ಯೋಜನೆಗಳನ್ನು ಜನರಿಗೆ ತಿಳಿಸಿದ್ದರೆ ಇಷ್ಟೊತ್ತಿಗೆ ನೂರರಲ್ಲಿ 80 ಜನರಿಗೆ ಖುಷಿಯಾಗುತ್ತಿತ್ತು. ಅದರ ಬದಲು ಈ ಅಂತೆ ಕಂತೆ ಸುದ್ದಿಗಳಿಗೆ ಸಮಯ ವ್ಯರ್ಥ ಮಾಡುವುದರಿಂದ ಆಗುವುದೇನೂ ಇಲ್ಲ ಎಂದು ಕೇಂದ್ರದ ಮುಖಂಡರು ಶೋಭಾಗೆ ಹೇಳಿ ಕಳುಹಿಸಿದ್ದಾರೆ ಎಂದು ಬಿಜೆಪಿಯ ವಿಶ್ವಾಸಾರ್ಹನಿಯ ಮೂಲಗಳು ತಿಳಿಸಿವೆ. ಇನ್ನು ಶೋಭಾ ಪಟ್ಟಿಯನ್ನು ಸರಿಯಾಗಿ ನೋಡಿದರೆ ಅದರಲ್ಲಿ ಕಾಂಗ್ರೆಸ್ಸಿಗೆ ಸಂಬಂಧವೇ ಇಲ್ಲದಂತಹ ಕೊಲೆಗಳು ಕೂಡ ಇವೆ. ಇದಕ್ಕೆ ಭರ್ಜರಿ ಪ್ರಚಾರ ಕೊಡುವ ಬದಲು ಶೋಭಾ ಮೋದಿಯವರ ಸಾಧನೆಯ ಪುಸ್ತಕವನ್ನು ಒಂದು ಗಂಟೆ ಓದಿದರೆ ಜನ ಏನೂ ನಿರೀಕ್ಷಿಸುತ್ತಿದ್ದಾರೆ ಎಂದು ಶೋಭಾಳಿಗೆ ಗೊತ್ತಾಗುತ್ತಿತ್ತು ಎಂದು ಬಿಜೆಪಿಯ ದೆಹಲಿ ನಾಯಕರು ತಮ್ಮೊಳಗೆ ಮಾತನಾಡಿಕೊಂಡಿದ್ದು ಯಡಿಯೂರಪ್ಪನವರ ಕಿವಿಗೂ ಬಿದ್ದಿದೆ.
Leave A Reply