ಮತ್ತೆ ಬಯಲಾಯ್ತು ಹುರ್ರಿಯತ್ ಸಂಘಟನೆ ಬಂಡವಾಳ, ಹಿಜ್ಬುಲ್ ಸೇರಿದನೇ ಸಂಘಟನೆ ಮುಖ್ಯಸ್ಥನ ಮಗ?
ಶ್ರೀನಗರ: ಆಜಾದ್ ಕಾಶ್ಮೀರ್, ಗೋ ಇಂಡಿಯಾ ಗೋಬ್ಯಾಕ್… ಹೀಗಂತ ಹುರ್ರಿಯತ್ ಸಂಘಟನೆ ಮಾಜಿ ಮುಖ್ಯಸ್ಥ ಸೈಯದ್ ಶಾ ಗೀಲಾನಿ ಹೇಳಿಕೆ ನೀಡಿದಾಗಲೇ, ಗೋಡೆ ಮೇಲೆ ಬರೆದಾಗಲೇ, ಹುರ್ರಿಯತ್ ಸಂಘಟನೆಯ ನಿಷ್ಠೆ, ಬದ್ಧತೆ, ಪ್ರಾಮುಖ್ಯತೆ ಯಾರಿಗೆ ಎಂಬುದು ಗೊತ್ತಾಗಿತ್ತು.
ಈಗ ಈ ಹುರ್ರಿಯತ್ ಸಂಘಟನೆಯ ಮತ್ತೊಂದು ಮುಖವಾಡ ಬಯಲಾಗಿದ್ದು, ಹುರ್ರಿಯತ್ ಮುಖ್ಯಸ್ಥ ಅಶ್ರಾಫ್ ಸೆಹ್ರಾಯಿ ಎಂಬಾತನ ಮಗ ಜುನೈದ್ ಅಶ್ರಫ್ ಖಾನ್ (28) ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸೇರಿದ್ದಾನೆ ಎಂದು ತಿಳಿದುಬಂದಿದೆ.
ಹೌದು, ಇದೇ ಜುನೈದ್ ಅಶ್ರಫ್ ಖಾನ್ ಎ.ಕೆ.47 ಗನ್ ಹಿಡಿದಿರುವ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಶ್ರಪ್ ಖಾನ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯನ್ನೇ ಸೇರಿದ್ದಾನೆ ಎಂದು ಹೇಳಲಾಗುತ್ತಿದೆ.
ಶುಕ್ರವಾರ ಅಶ್ರಫ್ ಖಾನ್ ಕಾಣೆಯಾಗಿದ್ದಾನೆ ಎಂದು ಆತನ ಕುಟುಂಬಸ್ಥರು ಶನಿವಾರವಷ್ಟೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದರ ಬೆನ್ನಲ್ಲೇ ಅಶ್ರಫ್ ಹಿಜ್ಬುಲ್ ಮುಜಾಹಿದ್ದೀನ್ ಸೇರಿದ್ದಾನೆ ಎಂದು ತಿಳಿದುಬಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿರುವ ಈತ ಶ್ರೀನಗರದ ಭಗತ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಈತನ ತಂದೆ ಅಶ್ರಾಫ್ ಸೆಹ್ರಾಯಿ ಹುರ್ರಿಯತ್ ಸಂಘಟನೆಯ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದ. ಆದಾಗ್ಯೂ, ಹುರ್ರಿಯತ್ ಮಾಜಿ ಮುಖ್ಯಸ್ಥ ಸೈಯದ್ ಶಾ ಗೀಲಾನಿ ಭಯೋತ್ಪಾದನೆಗೆ ಪ್ರಚೋದನೆ ನೀಡಲು ಪಾಕಿಸ್ತಾನದಿಂದ ಹಣ ಪಡೆದ ಆರೋಪದಲ್ಲಿ ಎನ್ಐಎ ತನಿಖೆ ಎದುರಿಸುತ್ತಿದ್ದಾರೆ.
Leave A Reply