ಕುದ್ರೋಳಿಯ ಅಲ್ ಅಮೀನ್ ರಸ್ತೆಗೆ ಹೋಗಿ ಬನ್ನಿ ಶಾಸಕರೇ
![](https://tulunadunews.com/wp-content/uploads/2018/03/kudroli.jpeg)
ಮಂಗಳೂರಿನಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಫ್ಲೆಕ್ಸ್ ಗಳನ್ನು ರಸ್ತೆಗಳಲ್ಲಿ ಎರಡೆರಡು ನಿಲ್ಲಿಸಿ ಪಬ್ಲಿಸಿಟಿ ಪಡೆದುಕೊಳ್ಳುತ್ತಿರುವ ಮಂಗಳೂರು ನಗರ ದಕ್ಷಿಣ ಶಾಸಕ ಜೆ ಆರ್ ಲೋಬೋ ಅವರು ಒಮ್ಮೆ ಕುದ್ರೋಳಿಗೆ ಬರಬೇಕು. ಅಲ್ಲಿನ ಅಲ್ ಅಮೀನ್ ರಸ್ತೆಯಲ್ಲಿರುವ ಅಂಗನವಾಡಿ ಎದುರಿನ ಜಾಗವನ್ನು ನೋಡಬೇಕು. ನರಕ ಎಂದರೆ ಏನು ಎನ್ನುವುದು ಅವರಿಗೆ ಅರ್ಥವಾಗುತ್ತದೆ. ಹತ್ತಾರು ಮನೆಯವರು ನಿತ್ಯ ನಡೆದಾಡುವ ರಸ್ತೆಯೊಂದು ಸಂಪೂರ್ಣ ಡ್ರೈನೇಜ್ ತ್ಯಾಜ್ಯದೊಂದಿಗೆ ಮುಚ್ಚಿ ಹೋಗಿದೆ. ಆ ಪ್ರದೇಶಕ್ಕೆ ಹೋದವರು ತಮ್ಮ ನೆಂಟರಿಷ್ಟರ ಮನೆಗೆ ಹೋಗಬೇಕಾದರೆ ರಸ್ತೆ ಎಲ್ಲಿ ಎಂದು ಕೇಳಿದಾಗ ಡ್ರೈನೇಜ್ ತ್ಯಾಜ್ಯ ಹೆಪ್ಪುಗಟ್ಟಿರುವ ರಸ್ತೆಯೊಂದನ್ನು ತೋರಿಸಿದ್ದಕ್ಕೆ ಅತಿಥಿಗಳು ಹಾಗೆ ಹಿಂದಕ್ಕೆ ಹೋಗಿದ್ದಾರೆ ಎಂದರೆ ಪರಿಸ್ಥಿತಿ ಹೇಗಿದೆ ಎಂದು ನೀವೆ ಅರ್ಥಮಾಡಿಕೊಳ್ಳಿ.
ತ್ಯಾಜ್ಯವೇ ಸುರಿದು ಮಾಡಿದಂತಿರುವ ಈ ರಸ್ತೆಯ ಎದುರು ಅಂಗನವಾಡಿ ಕೇಂದ್ರವಿದೆ. ಅನೇಕ ಪುಟಾಣಿಗಳು ಅಲ್ಲಿ ಬರುತ್ತಾರೆ. ಬಾಗಿಲು ಮುಚ್ಚಿಯೇ ನಾವು ಮಕ್ಕಳನ್ನು ನೋಡಿಕೊಳ್ಳಬೇಕಾಗಿದೆ ಎಂದು ಅಲ್ಲಿನ ಶಿಕ್ಷಕರು ಹೇಳುತ್ತಾರೆ. ಡ್ರೈನೇಜ್ ಹೆಪ್ಪುಗಟ್ಟಿ ನಿಂತಿರುವುದರಿಂದ ಸ್ಥಳೀಯರು ಅದರ ಮೇಲೆನೆ ಹಲಗೆಯನ್ನು ಇಟ್ಟು ಬ್ಯಾಲೆನ್ಸ್ ಮಾಡಿ ರಸ್ತೆಯ ಮೇಲೆ ಹೋಗುತ್ತಿದ್ದಾರೆ. ಶಾಲೆಗೆ ಹೋಗುವ ಮಕ್ಕಳು ಶುಭ್ರ ಸಮವಸ್ತ್ರ ಧರಿಸಿ ಹೋಗುವಾಗ ಕಾಲು ಜಾರಿದರೆ ಆವತ್ತು ಕ್ಲಾಸಿಗೆ ಹೋಗಲಾರದ ಪರಿಸ್ಥಿತಿ ಇದೆ. ಅಕ್ಕಪಕ್ಕದಲ್ಲಿ ಅನೇಕ ಮನೆಗಳು ಇದ್ದು ಜನ ಕಿಟಕಿ ಮುಚ್ಚಿದರೂ ವಾಸನೆ ತಡೆಯಲಾರದೆ ಊಟ ಮಾಡದ ಪರಿಸ್ಥಿತಿ ಇದೆ. ಅನೇಕ ಜನರಿಗೆ ಇಲ್ಲಿ ಮಲೇರಿಯಾ, ಡೆಂಗ್ಯೂ ಸಾಮಾನ್ಯವಾಗಿದೆ.
ಈ ಬಗ್ಗೆ ಇಲ್ಲಿನ ಕಾರ್ಪೋರೇಟರ್ ಅವರು ಮೌನವಾಗಿರುವುದರಿಂದ ಜನ ಏನು ಮಾಡಲು ತೋಚದೆ ನರಕದ ಬದುಕನ್ನು ಕಾಣುತ್ತಿದ್ದಾರೆ. ಡ್ರೈನೇಜ್ ಒಡೆದು ನಿತ್ಯ ತ್ಯಾಜ್ಯ ಹೊರಗೆ ಬರುವುದೇ ಮಂಗಳೂರು ಮಹಾನಗರ ಪಾಲಿಕೆಯ ಸ್ಥಳೀಯ ಸದಸ್ಯರ ಮತ್ತು ಶಾಸಕರ ಸಾಧನೆಯಾದರೆ ಅದನ್ನು ಕೂಡ ಫ್ಲೆಕ್ಸ್ ನಲ್ಲಿ ಬರೆದು ಹಾಕಬಹುದಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯ ನಾಗರಿಕರು.
Leave A Reply