ಮೇ 12, ಶನಿವಾರ ಆವತ್ತು ವೋಟ್ ಹಾಕುವುದೇ ಮೊದಲ ಆದ್ಯತೆಯಾಗಿರಲಿ!
ನನ್ನ ಒಂದು ವಿನಂತಿ ನಿಮ್ಮಲ್ಲಿ. ಚುನಾವಣೆಗಳು ಬರುವುದು ಐದು ವರ್ಷಗಳಿಗೊಮ್ಮೆ. ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಗಳಲ್ಲಿ ಗೆಲ್ಲುವ ಪಕ್ಷ ಮುಂದಿನ ಅಷ್ಟು ವರ್ಷಗಳ ತನಕ ನಮಗೆ ಬೇಕೋ, ಬೇಡವೋ ಸಹಿಸಿಕೊಳ್ಳಲೇಬೇಕು. ಆದ್ದರಿಂದ ನಾವೀಗ ಬದಲಾವಣೆಯ ಪರ್ವದಲ್ಲಿದ್ದೇವೆ. ಆದ್ದರಿಂದ ಈಗ ಇರುವ ಸರಕಾರ ನಿಮಗೆ ಬದಲಾಯಿಸಲೇಬೇಕು ಎಂದು ಮನಸ್ಸಿದ್ದಲ್ಲಿ ದಯವಿಟ್ಟು ನಿಮ್ಮ ವೋಟ್ ತಪ್ಪದೇ ಚಲಾಯಿಸಿ. ಪಕ್ಕದ ಮನೆಯವರು ಚಲಾಯಿಸುತ್ತಾರೆ, ಎದುರಿನ ಮನೆಯವರು ವೋಟ್ ಹಾಕಲು ಹೋಗುತ್ತಾರೆ ಎಂದು ಅಂದುಕೊಂಡು ನೀವು ಸುಮ್ಮನೆ ಒಂದು ಟೂರ್ ಹೋಗಿ ಬರೋಣ ಎಂದು ಆವತ್ತು ತಿರುಗಾಡಿ ಬರುವಷ್ಟರಲ್ಲಿ ಇಲ್ಲಿ ನಿಮ್ಮ ಮತ್ತು ನಿಮ್ಮ ಮನೆಯವರ ವೋಟ್ ಅರ್ಹ ಪಕ್ಷವೊಂದಕ್ಕೆ ಬೀಳದೆ ಆ ಪಕ್ಷ ಸೋತರೆ ಮತ್ತೆ ಐದು ವರ್ಷ ನೀವು ಅನುಭವಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಏಕೆಂದರೆ ನನ್ನ ಒಂದು ವೋಟ್ ನಿಂದ ಆಗುವುದು ಏನು ಎಂದು ಎಲ್ಲರೂ ಏನಿಸಿದ ಕಾರಣ ಮತದಾನದ ಪ್ರಮಾಣ 70% ದಾಟಿದರೆ ಅದೇ ದೊಡ್ಡ ಆಶ್ಚರ್ಯವೆನ್ನುವಂತಾಗಿದೆ. ಈ ಬಾರಿ ಕನಿಷ್ಟ 90% ಮತದಾನವನ್ನು ಮಾಡಲೇಬೇಕು ಎಂದು ಪ್ರತಿಯೊಬ್ಬರು ತೀರ್ಮಾನಿಸಿ ನಮ್ಮ ಶಕ್ತಿ ತೋರಿಸಲೇಬೇಕು.
ನಾನು ಈ ವಿಷಯವನ್ನು ಈಗ ಯಾಕೆ ಹೇಳುತ್ತಿದ್ದೇನೆ ಎಂದರೆ ವಿಧಾನಸಭೆಗೆ ಚುನಾವಣೆ ಈ ಬಾರಿ ಎರಡನೇ ಶನಿವಾರ ಬಂದಿದೆ. ಮೇ 12, 2018 ಶನಿವಾರ, ಅದರಲ್ಲಿಯೂ ಎರಡನೇ ಶನಿವಾರ. ಬ್ಯಾಂಕಿನವರಿಗಂತೂ ರಜೆ, ಐಟಿ ಬಿಟಿ ಕಂಪೆನಿಗಳಿಗೂ ರಜೆ, ಅನೇಕ ಕಡೆ ಇತ್ತೀಚಿನ ವರ್ಷಗಳಲ್ಲಿ ಶನಿವಾರ ರಜೆ ಕೊಟ್ಟು ಉದ್ಯೋಗಿಗಳಿಗೆ ರಿಲಾಕ್ಸ್ ಮಾಡಿಸಿ ಉಳಿದ ಐದು ದಿನ ಸರಿಯಾಗಿ ಕೆಲಸ ಮಾಡುವ ಪದ್ಧತಿ ಇದೆ. ಆದ್ದರಿಂದ ಆವತ್ತು ರಜೆ ಉಳ್ಳವರನ್ನೇ ಒಟ್ಟು ಸೇರಿಸಿದರೆ ಅವರದ್ದೇ ಗುರುತರವಾದ ಮೊತ್ತವಾಗುತ್ತದೆ. ಅದು ಚುನಾವಣೆಯ ಮೇಲೆ ಪರಿಣಾಮ ಬೀರಬಹುದು.
ಸುರೇಶ್ ಕುಮಾರ್ ಹೇಳಿದ್ದರಲ್ಲಿ ಸತ್ಯ ಇದೆ…
ಎಲ್ಲೋ ಒಂದು ಕಡೆ ಮಾಜಿ ಸಚಿವ, ಹಾಲಿ ಶಾಸಕ, ಬಿಜೆಪಿಯ ರಾಜ್ಯ ವಕ್ತಾರ ಸಜ್ಜನ ರಾಜಕಾರಣಿ ಸುರೇಶ್ ಕುಮಾರ್ ಹೇಳಿದ್ದರಲ್ಲಿ ಎಲ್ಲೋ ಸತ್ಯ ಅಡಗಿದೆ ಎಂದು ಅನಿಸುತ್ತದೆ. ಎರಡನೇ ಶನಿವಾರ ಚುನಾವಣೆ ಬಂದಿರುವುದರಿಂದ ನಗರ ಪ್ರದೇಶದ ಜನ ಮತ ಹಾಕಲು ಕಡಿಮೆ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಇನ್ನೊಂದೆಡೆ ಟಿವಿಯವರು ಬಿಜೆಪಿ ಮುಖಂಡರ ಅಭಿಪ್ರಾಯ ಕೇಳಿದಾಗ ಸಹಜವಾಗಿ ಚುನಾವಣೆಯನ್ನು ಎಲ್ಲ ನಾಯಕರು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೇ ಹಿಡಿದುಕೊಂಡು ಕೆಲವು ಚಾನೆಲ್ ಗಳು ಭಾರತೀಯ ಜನತಾ ಪಾರ್ಟಿಯಲ್ಲಿ ಅಪಸ್ವರ ಎನ್ನುವ ಕಾರ್ಯಕ್ರಮ ಮಾಡಿವೆ. ಆದರೆ ಸುರೇಶ್ ಕುಮಾರ್ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ನಮ್ಮಲ್ಲಿ ಪ್ರಬುದ್ಧರು, ಪ್ರಜ್ಞಾವಂತರು ಎಂದು ಕರೆಸಿಕೊಳ್ಳುವ ಎಷ್ಟು ಜನ ವೋಟ್ ಮಾಡಲು ಹೋಗುತ್ತಾರೆ ಎನ್ನುವುದನ್ನು ನಾವು ನೋಡಬೇಕು. ಆದರೆ ಸರಕಾರ ಏನಾದರೂ ತಪ್ಪು ಮಾಡಿದರೆ ಟಿವಿ ವಾಹಿನಿಗಳಲ್ಲಿ ಮೊದಲು ಬೊಬ್ಬೆ ಹೊಡೆಯುವವರೇ ಈ ಬುದ್ಧಿವಂತರು. ಅದರಲ್ಲಿಯೂ ಈ ಬಾರಿ ಶನಿವಾರ ಚುನಾವಣೆ ಬಂದಿರುವಾಗ ಶುಕ್ರವಾರ ರಾತ್ರಿಯೇ ಟೂರ್ ಗೆ ಹೋಗುವವರು ಇದ್ದಾರೆ. ಅದರಲ್ಲಿಯೂ ಚುನಾವಣೆ ನಡೆಯುವುದು ಭೂಮಿ ಕಾವಲಿಯ ಮೇಲೆ ಇಟ್ಟಷ್ಟು ಬಿಸಿಯಾಗಿರುವ ವಾತಾವರಣದಲ್ಲಿ. ಮೇ ಮಧ್ಯದ ಕಾಲ ಎಂದರೆ ಎಸಿ ಕೋಣೆಯಲ್ಲಿಯೂ ಒಂದು ಕ್ಷಣ ಬಾಗಿಲು ತೆರೆದರೆ ಬಿಸಿಗಾಳಿ ಕೋಣೆಯನ್ನು ಬಿಸಿ ಮಾಡಬಲ್ಲದು. ಆದ್ದರಿಂದ ಸುಮ್ಮನೆ ಮತಕೇಂದ್ರಕ್ಕೆ ಹೋಗಿ ಕ್ಯೂನಲ್ಲಿ ನಿಂತು ವೋಟ್ ಹಾಕುವುದು ಯಾಕೆ ಎಂದು ನೀವು ಅಂದುಕೊಂಡರೆ ಮುಗಿಯಿತು, ಮತ್ತೆಂದು ನಿಮಗೆ ಯಾವುದೇ ಸರಕಾರದ ವಿರುದ್ಧ ಮಾತನಾಡುವ ನೈತಿಕತೆ ಉಳಿಯುವುದಿಲ್ಲ. ಇನ್ನು ಮೇ 13 ಕ್ಕೆ ತುಂಬಾ ಕಡೆ ಮದುವೆ ಸಹಿತ ಶುಭ ಸಮಾರಂಭಗಳಿವೆ. ಆದ್ದರಿಂದ ಸಹಜವಾಗಿ ಅದರ ಹಿಂದಿನ ದಿನ ಮದುವೆ ಮನೆಯವರು, ಅವರ ಹಿತೈಷಿಗಳು, ಗೆಳೆಯರು ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಅದರ ನಡುವೆ ಮತ್ತೆ ವೋಟಿಗೆ ಯಾರು ಹೋಗುವುದು ಎಂದು ಯೋಚಿಸಿ ಕೆಲಸದಲ್ಲಿ ಬ್ಯುಸಿಯಾದರೋ ಅಲ್ಲಿ ಯಾರೋ ಗೆದ್ದು ಅಧಿಕಾರಕ್ಕೆ ಬಂದ್ರು ಎಂದೇ ಅರ್ಥ. ಅದರ ನಂತರ ನೀವು ಎಷ್ಟು ಫ್ರೀ ಇದ್ದರೂ ಏನು ಮಾಡಲಾಗುವುದಿಲ್ಲ.
ನಿಮ್ಮ ಶಾಸಕ ಎಂತವ ಎಂದು ನಿರ್ಧಾರ ಮಾಡಿಡಿ..
ನೀವು ಎರಡು ದಿನ ರಜೆ ಇದೆ ಎಂದು ಬೇರೆ ಊರಿನಲ್ಲಿರುವ ಗೆಳೆಯರ ಮನೆಗೆ, ನೆಂಟರ ಮನೆಗೆ ಹೋಗುವುದಾದರೆ ಅದು ಮೇ ಮೂರನೇ ವಾರಕ್ಕೆ ಬೇಕಾದರೆ ಇಟ್ಟುಕೊಳ್ಳಿ. ಯಾಕೆಂದರೆ ನೀವು ಅಲ್ಲಿಗೆ ಹೋಗುವಾಗ ಒಂದು ವಾರ ತಡವಾದರೆ ಏನು ಆಗುವುದಿಲ್ಲ. ಆದರೆ ಅದೇ ನೀವು ವೋಟ್ ಹಾಕದೇ ಹೋದರೆ ಇಲ್ಲಿ ನಿಮ್ಮ ಶತ್ರು ಅಧಿಕಾರಕ್ಕೆ ಬರಬಹುದು.
ನೀವು ಯಾರಿಗೆ ವೋಟ್ ಹಾಕಬೇಕು ಎಂದು ನಿರ್ಧರಿಸುವ ಅವಕಾಶ ಇರುವುದು ನಿಮಗೆ ಮಾತ್ರ. ಆದರೆ ವೋಟ್ ಹಾಕುವ ಮೊದಲು ಆ ವ್ಯಕ್ತಿ ಕಳೆದ ಬಾರಿ ಗೆಲ್ಲುವ ಮೊದಲು ತೋರಿಸಿದ ಸ್ವರ್ಗವನ್ನು ಈಡೇರಿಸಿದ್ದಾನಾ ಎನ್ನುವುದನ್ನು ನೋಡಿ. ಹಾಲಿ ಶಾಸಕ ಕೇವಲ ಹಿಂದಿನ ಶಾಸಕರು ಮಾಡಿದ ಯೋಜನೆಯನ್ನು ಉದ್ಘಾಟನೆ ಮಾಡಿ ಫೋಟೋಗೆ ಫೋಸ್ ಕೊಟ್ಟಿದ್ದಾರಾ ಗಮನಿಸಿ. ಕಳೆದ ಐದು ವರ್ಷಗಳಲ್ಲಿ ನಿಮ್ಮ ಶಾಸಕ ಕೇವಲ ಧರ್ಮ ಧರ್ಮಗಳನ್ನು ಒಡೆದು ಖುಷಿ ನೋಡುವ ಕೆಲಸ ಮಾಡಿದ್ದಾರಾ, ನೋಡಿ. ಹಾಗೆ ತಮ್ಮ ಜಾತಿ ಭಾಂದವರಿಗಾಗಿ ಬೇರೆಯವರ ಮೇಲೆ ಅನ್ಯಾಯ ಮಾಡಿದ್ದಾರಾ ಎಂದು ನೋಡಿ. ಸ್ವಜಾತಿ ಪ್ರೇಮದಲ್ಲಿಯೇ ಮುಳುಗಿದ್ದಾರಾ ನೋಡಿ. ಇದಕ್ಕೆ ತಕ್ಕ ಉತ್ತರ ನೀವು ಕೊಡಬೇಕಾದರೆ ಮೇ 12 ಕ್ಕೆ ಬೆಳಿಗ್ಗೆ ಬೇಗ ಹೋಗಿ ವೋಟ್ ಮಾಡಿ, ಅದರ ನಂತರ ತಿರುಗಾಡಲು ಎಲ್ಲಿ ಬೇಕಾದರೂ ಹೋಗಿ, ನಿಮಿಷ್ಟ!
Leave A Reply