ಜಾಗತಿಕ ಭಯೋತ್ಪಾದನೆ ತೊಲಗಿಸಲು ಕೇಂದ್ರ ಸರ್ಕಾರ ಯಾವ ಪ್ರಮುಖ ನಿರ್ಧಾರ ಕೈಗೊಂಡಿದೆ ಗೊತ್ತಾ?
ಜೈಪುರ: ಭಾರತದ ದಿಟ್ಟ ಪ್ರತ್ಯುತ್ತರದ ನಡುವೆಯೂ ಇತ್ತೀಚೆಗೆ ಗಡಿಯಲ್ಲಿ ಪಾಕಿಸ್ತಾನ ಹಾಗೂ ಚೀನಾ ಉಪಟಳ ಮಾಡುತ್ತಿರುವ ಬೆನ್ನಲ್ಲೇ ದೇಶದಲ್ಲಿ ಶತ್ರುಗಳ ಉಪದ್ವ್ಯಾಪದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿವೆ. ಆದಾಗ್ಯೂ ಇತ್ತೀಚೆಗಷ್ಟೇ ಚೀನಾ, ನಾವು ಶತ್ರುಗಳನ್ನು ಸದೆಬಡಿಯದೇ ಬಿಡುವುದಿಲ್ಲ ಎಂದು ಹೇಳಿರುವುದು ಸಹ ಭಾರತವನ್ನು ಕೆಣಕುವಂತಿದೆ. ಅತ್ತ ಪಾಕಿಸ್ತಾನಿ ಭಯೋತ್ಪಾದಕರಂತೂ ಸ್ವಲ್ಪ ಸಮಯ, ಜಾಗ ಸಿಕ್ಕರೂ ಭಾರತದೊಳಕ್ಕೆ ನುಸುಳಿಬಿಡುತ್ತಾರೆ.
ಆದರೆ ಈ ವೈರಿಗಳ, ಭಯೋತ್ಪಾದಕರ ಉಪಟಳವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಮ್ಮನಿರಬೇಕಲ್ಲ. ಇವರನ್ನು ಮಟ್ಟಹಾಕಲೆಂದೇ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದೆ. ಹೌದು, ದೇಶದಲ್ಲೇ ಮೊದಲ ಬಾರಿಗೆ ಜಾಗತಿಕ ಭಯೋತ್ಪಾದನೆ ನಿಗ್ರಹ ಕೇಂದ್ರವೊಂದನ್ನು ತೆರೆಯಲು ಕೇಂದ್ರ ಸರ್ಕಾರ ಮುಂದಾಗಿದೆ.
ಜೈಪುರ ಜಿಲ್ಲೆಯ ಬಾಗ್ರು ಎಂಬಲ್ಲಿ ಕೇಂದ್ರ ತೆರೆಯಲು 50 ಎಕರೆ ಜಾಗವನ್ನು ಗುರುತಿಸಿದ್ದು, ಸುಮಾರು 275 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರ 110 ಕೋಟಿ ರೂ. ನೀಡಲಿದ್ದು, ಕೇಂದ್ರ ಸ್ಥಾಪನೆಯಾದರೆ ಇದು ದೇಶದ ಮೊದಲ ಜಾಗತಿಕ ಭಯೋತ್ಪಾದನೆ ನಿಗ್ರಹ ಹಾಗೂ ಆಘಾತ ನಿಗ್ರಹ ಕೇಂದ್ರ ಎನಿಸಲಿದೆ ಎಂದು ತಿಳಿದುಬಂದಿದೆ.
ಜೈಪುರ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಜಾಗ ಗುರುತಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರದಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ಪ್ರಾಯೋಗಿಕ ಹಾಗೂ ತಾಂತ್ರಿಕವಾಗಿ ಹೇಗೆ ನಿಗ್ರಹಿಸಬೇಕು, ಹೇಗೆ ಎದುರಾಳಿಗಳ ದಾಳಿಗೆ ಪ್ರತಿ ದಾಳಿ ಮಾಡಬೇಕು, ಭಯೋತ್ಪಾದಕರ ಚಲನವಲನಗಳನ್ನು ಹೇಗೆ ಗುರುತಿಸಬೇಕು ಎಂಬುದರ ಕುರಿತು ಸೈನಿಕರಿಗೆ ತರಬೇತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
Leave A Reply