ಶ್ರೀ ವಿಠೋಭ ರುಕುಮಾಯಿ ದೇವಸ್ಥಾನ “ಪಬ್ಲಿಕ್ ಟೆಂಪಲ್” ಎಂದಿದೆ ನ್ಯಾಯಾಲಯ…
ಮಂಗಳೂರಿನ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನಕ್ಕೆ ಸುಮಾರು 200 ವರ್ಷಗಳ ಇತಿಹಾಸ ಇದೆ. ಶ್ರೀ ನಾರಾಯಣ ತೀರ್ಥ ಸ್ವಾಮಿಯವರು ಈ ದೇವಸ್ಥಾನವನ್ನು ಸ್ಥಾಪಿಸಿ ಇದು ಮುಂದೆ ಹೇಗೆ ನಡೆಯಬೇಕು ಎನ್ನುವ ಬಗ್ಗೆ ಟ್ರಸ್ಟ್ ಡಿಡ್ ಒಂದನ್ನು ರಚಿಸಿದ್ದರು. ಆ ಟ್ರಸ್ಟ್ ಡಿಡ್ ಪ್ರಕಾರ ಐದು ಕುಟುಂಬಗಳ ಹಿರಿಯ ಮಗ ಅವರು ಇಲ್ಲದಿದ್ದರೆ ಅಥವಾ ಅವರು ಆಡಳಿತ ಮಾಡಲು ಬರುವುದಿಲ್ಲ ಎಂದಾದರೆ ಜಿ ಎಸ್ ಬಿ ಸಮಾಜದ ಗೌರವಾನ್ವಿತರನ್ನು ಟ್ರಸ್ಟಿಗಳನ್ನಾಗಿ ಪಡೆದುಕೊಳ್ಳಬಹುದು. ವರದರಾಯ ಪ್ರಭು ಎನ್ನುವವರು ಈ ಐದು ಕುಟುಂಬದಲ್ಲಿ ಒಂದು ಕುಟುಂಬದ ಸದಸ್ಯರಾಗಿರುವುದರಿಂದ ದೇವಸ್ಥಾನದ ಟ್ರಸ್ಟಿಯಾಗಿದ್ದರು. 1994 ರಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ನಂತರ ವರದರಾಯ ಪ್ರಭು ಅವರಿಗೆ ಮತ್ತು ಇತರ ಟ್ರಸ್ಟಿಗಳಿಗೆ ಮಾತುಕತೆ ನಡೆದು ವರದರಾಯ ಪ್ರಭು ಅವರು 1994 ರಿಂದ 2010 ರ ತನಕ ದೇವಸ್ಥಾನದಲ್ಲಿ ನಡೆಸಿಕೊಂಡು ಬರಬೇಕಿದ್ದ ಪಂಚಪರ್ವವನ್ನು ಆಚರಿಸಿಕೊಂಡು ಬರಲೇ ಇಲ್ಲ. ಇನ್ನು ದೇವಸ್ಥಾನದ ಅಂದಿನ ಅರ್ಚಕರಾದ ಶ್ರೀ ವೇದವ್ಯಾಸ ಭಟ್ ರೊಂದಿಗೆ ಗಲಾಟೆ ಮಾಡಿ ಅವರಿಗೆ ಹೊಡೆದು, ಬಡಿದು ತುಂಬಾ ತೊಂದರೆ ಕೊಟ್ಟಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆ ನಂತರ 2010 ರಿಂದ ದೇವಸ್ಥಾನದ ಇತರ ಇಬ್ಬರು ಟ್ರಸ್ಟಿಗಳಾದ ವಿಶ್ವನಾಥ ನಾಯಕ್ ಹಾಗೂ ಮೋಹನ ನಾಯಕ್ ಇವರು ನಾರಾಯಣ ತೀರ್ಥರು 1923 ರಲ್ಲಿ ರಚಿಸಿದ ಟ್ರಸ್ಟ್ ಡಿಡ್ ನಲ್ಲಿ ನಮೂದಿಸಿರುವ ಐದು ಕುಟುಂಬಗಳಲ್ಲಿ ಒಂದು ಕುಟುಂಬವಾದ ಮರೋಳಿ ಕುಟುಂಬದ ಮರೋಳಿ ಸುರೇಂದ್ರ ಕಾಮತ್ ಅವರನ್ನು ಶಿಲೆಶಿಲೆ ಮೋಕ್ತೇಸರರನ್ನಾಗಿ ಮಾಡಿಕೊಂಡಿದ್ದಾರೆ. ಆ ನಂತರ ಆ ಮೂವರು ಸೇರಿ ಮಂಗಲ್ಪಾಡಿ ನಾಮದೇವ ಶೆಣೈ ಅವರನ್ನು ಆಡಳಿತ ಮೋಕ್ತೇಸರರನ್ನಾಗಿ ನೇಮಿಸಿರುತ್ತಾರೆ. ಇವರು ಸದ್ರಿ ದೇವಸ್ಥಾನದಲ್ಲಿ ನಡೆಯಬೇಕಿದ್ದ ಎಲ್ಲಾ ಪಂಚಪರ್ವಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸದ್ರಿ ಟ್ರಸ್ಟ್ ಡಿಡ್ ನಲ್ಲಿ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನ ಜಿಎಸ್ ಬಿ ಸಮಾಜದ ಎಲ್ಲರಿಗೂ ಸೇರಿದ ದೇವಸ್ಥಾನ ಎಂದು ಹೇಳಲಾಗಿದೆ. ಆದ್ದರಿಂದ ವರದರಾಯ ಪ್ರಭು ಅವರು ತನ್ನ ಕುಟುಂಬದ ದೇವಸ್ಥಾನ ಎಂದು ಹೇಳುತ್ತಿರುವುದು ಸರಿಯಲ್ಲ ಮತ್ತು ಅದು ಅಪ್ಪಟ ಸುಳ್ಳು. .
ನಾಲ್ಕು ವರುಷಗಳ ಮೊದಲು ಮಂಗಲ್ಪಾಡಿ ನಾಮದೇವ ಶೆಣೈ ದೈವಾಧೀನರಾದ ನಂತರ ಮರೋಳಿ ಸುರೇಂದ್ರ ಕಾಮತ್ ಅವರು ಆಡಳಿತ ಮತ್ತು ಶಿಲೆಶಿಲೆ ಮೊಕ್ತೇಸರರಾಗಿ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ದೇವಸ್ಥಾನದ ಟ್ರಸ್ಟ್ ಡಿಡ್ ನಲ್ಲಿ ನಮೂದಿಸಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಾದಿಗಳ ಸಂಪೂರ್ಣ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ. 1994 ರಿಂದ ವರದರಾಯ ಪ್ರಭು ಅವರು ದೇವಸ್ಥಾನದ ಆಡಳಿತದ ಬಗ್ಗೆ ಹಲವಾರು ಸಿವಿಲ್ ಮತ್ತು ಕ್ರಿಮಿನಲ್ ಸುಳ್ಳು ದಾವೆಗಳನ್ನು ಹೂಡಿರುತ್ತಾರೆ. ಹೆಚ್ಚಿನ ದಾವೆಗಳಲ್ಲಿ ಇವರ ವಿರುದ್ಧ ತೀರ್ಪು ಬಂದಿರುತ್ತದೆ. 2010 ರಂದು ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ( ದಾವೆ ಸಂಖ್ಯೆ ಆರ್ ಎಸ್ ಎ- 1753/2007) ದಲ್ಲಿ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನ ಸಾರ್ವಜನಿಕ ದೇವಸ್ಥಾನ ( ಪಬ್ಲಿಕ್ ಟೆಂಪಲ್) ಎಂದು ತೀರ್ಪು ಬಂದಿದೆ. ಈ ತೀರ್ಪಿನ ವಿರುದ್ಧ ವರದರಾಯ ಪ್ರಭು ಅವರು ಯಾವುದೇ ಮೇಲ್ಮನವಿ ಸಲ್ಲಿಸಿರುವುದಿಲ್ಲ, ಈ ಬಗ್ಗೆ ತೀರ್ಪು ಅಂತಿಮವಾಗಿರುತ್ತದೆ.
ವರದರಾಯ ಪ್ರಭುಗಳಿಂದ ಅರ್ಚಕರಿಗೆ ಬೆದರಿಕೆ…
3-3-2018 ರಂದು ಬಂದಿರುವ ಒಎಸ್ 905/2011ರ ಆದೇಶದಲ್ಲಿ ಸದ್ರಿ ದೇವಸ್ಥಾನದ ಆಡಳಿತ ಮೋಕ್ತೇಸರ ಬಗ್ಗೆ ತೀರ್ಪು ಬಂದಿರುತ್ತದೆ. ಈ ಬಗ್ಗೆ ಅಪೀಲು ಸಲ್ಲಿಸಿರುತ್ತೇನೆ. ಆ ನಂತರ ವರದರಾಯ ಪ್ರಭು ಅವರು ದೇವಸ್ಥಾನದಲ್ಲಿ ನಡೆಯುತ್ತಿರುವ ಪೂಜಾ ವಿಧಿವಿಧಾನಗಳಿಗೆ ಮತ್ತು ದೇವಸ್ಥಾನದ ರಾಜಾಂಗಣವನ್ನು ಬಾಡಿಗೆಗೆ ಪಡೆದುಕೊಂಡು ಕಾರ್ಯಕ್ರಮ ನಡೆಸುವವರಲ್ಲಿ ಗಲಾಟೆ ಮಾಡಿ ಗೊಂದಲವನ್ನು ಉಂಟು ಮಾಡುತ್ತಿದ್ದಾರೆ. ಶ್ರೀ ದೇವರುಗಳ ಪೂಜಾ ವಿಧಿ ವಿಧಾನ ನಡೆಸಿಕೊಂಡು ಬರುತ್ತಿರುವ ಅರ್ಚಕರಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ನಿನ್ನನ್ನು ಕೋರ್ಟಿಗೆ ಎಳೆಯುತ್ತೇನೆ, ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ಹೆದರಿಸಿ ದೇವಸ್ಥಾನದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ.
ವರದರಾಯ ಪ್ರಭು ನಮ್ಮ ಕೈಯಲ್ಲಿರುವ ದೇವಸ್ಥಾನದ ಆಡಳಿತವನ್ನು ಅವರಿಗೆ ಒಪ್ಪಿಸಬೇಕು ಎಂದು ನ್ಯಾಯಾಲಯ ಮೂಲಕ ಆದೇಶವನ್ನು ತೆಗೆದುಕೊಂಡು ಬಂದಲ್ಲಿ ದೇವಸ್ಥಾನದ ಆಡಳಿತವನ್ನು ಅವರಿಗೆ ಒಪ್ಪಿಸಲು ನಮಗ್ಯಾರಿಗೂ ಆಕ್ಷೇಪ ಅಥವಾ ವಿರೋಧ ಇಲ್ಲ.
ಈ ಮೊದಲು ವರದರಾಯ ಪ್ರಭು ಅವರು ಟ್ರಸ್ಟಿಗಳ ಮತ್ತು ಇನ್ನಿತರರ ವಿರುದ್ಧ ಶ್ರೀ ವಿಠೋಭ ರುಕುಮಾಯಿ ದೇವರ ಬಂಗಾರವನ್ನು ಕದ್ದಿದ್ದಾರೆ ಎಂದು ಕೆನರಾ ಬ್ಯಾಂಕಿನವರನ್ನು ಕೂಡ ಸೇರಿಸಿ ಸುಳ್ಳು ದಾವೆ ಕೂಡ ಹಾಕಿದ್ದಾರೆ. ಆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ. ಪ್ರಸ್ತುತ ನಾವು ದೇವಸ್ಥಾನದಲ್ಲಿ ಕಳೆದ ಎಂಟು ವರ್ಷಗಳಿಂದ ಪಂಚಪರ್ವ ಸಹಿತ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಬರುತ್ತಿದ್ದೇವೆ. 2010ರ ನಂತರ ಕೆಲವು ಭಕ್ತಾದಿಗಳು ದೇವರಿಗೆ ಸೇವಾರೂಪದಲ್ಲಿ ಬೆಳ್ಳಿಯ ಕಿರೀಟ, ಬಂಗಾರದ ಮಾಲೆ ಮತ್ತು ಇನ್ನಿತರ ವಸ್ತುಗಳನ್ನು ದಾನವಾಗಿ ನೀಡಿದ್ದು, ಅದು ನಮ್ಮ ಸುಪರ್ದಿಯಲ್ಲಿ ಇದೆ. ಹೀಗಿರುವಾಗ ವರದರಾಯ ಪ್ರಭು ಅವರು ದೇವಸ್ಥಾನಕ್ಕೆ ಬಂದು ದೇವಸ್ಥಾನ ತನ್ನದು ಎಂದು 3-3-2018 ದಿನಾಂಕದ ಆದೇಶ ಪತ್ರ ತೋರಿಸಿ ಗಲಾಟೆ ಮಾಡುತ್ತಿರುವುದು ನ್ಯಾಯವಲ್ಲ. ಈ ತೀರ್ಪು ಅಂತಿಮವಾಗಿರುವುದಿಲ್ಲ.
ಅನಾವಶ್ಯಕ ಕಿರಿಕಿರಿ ಮಾಡುವುದನ್ನು ನಿಲ್ಲಿಸಲಿ…
ದಿನಾಂಕ 27-3-2018 ರಂದು ಏಕಾದಶಿಯ ಪೂಜೆಯ ನಂತರ ವರದರಾಯ ಪ್ರಭು ಅವರು ಕೃಷ್ಣಾರ್ಪಣೆ ಮಾಡಲು ತನಗೆ ನೀಡಬೇಕು. ಈಗ ತಾನು ಟ್ರಸ್ಟಿ ಎಂದಾಗ ಅರ್ಚಕರು ತಾನು ಅರ್ಚಕನಾಗಿ ಬಂದ ನಂತರ ಇಲ್ಲಿಯ ತನಕ ಶಿಲೆಶಿಲೆ ಮೊಕ್ತೇಸರ ಮರೋಳಿ ಸುರೇಂದ್ರ ಕಾಮತ್ ಅವರಿಂದ ಕೃಷ್ಣಾರ್ಪಣೆ ಮಾಡಿಸುತ್ತಿರುವುದಾಗಿ ಹೇಳಿದಾಗ ನೀನು ಹೇಗೆ ನನ್ನಿಂದ ಕೃಷ್ಣಾರ್ಪಣೆ ಮಾಡಿಸುವುದಿಲ್ಲ ಎಂದು ನೋಡಿಕೊಳ್ಳುತ್ತೇನೆ, ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ವರದರಾಯ ಪ್ರಭು ಅವರು ನ್ಯಾಯಾಲಯದ ಮೂಲಕ ದೇವಸ್ಥಾನವನ್ನು ಅವರಿಗೆ ಹಸ್ತಾಂತರಿಸಬೇಕೆನ್ನುವ ಆದೇಶವನ್ನು ಪಡೆದುಕೊಂಡು ಬರುವ ತನಕ ದೇವಸ್ಥಾನದಲ್ಲಿ ನಡೆಯುವ ಪೂಜಾ ಕೈಂಕರ್ಯ, ಧಾರ್ಮಿಕ ವಿಧಿವಿಧಾನಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ. ಅರ್ಚಕರೊಂದಿಗೆ, ಸಿಬ್ಬಂದಿಗಳೊಂದಿಗೆ, ಬರುವ ಭಕ್ತಾದಿಗಳಲ್ಲಿ, ರಾಜಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಬಾಡಿಗೆ ನೀಡಿ ಪಡೆದುಕೊಂಡವರೊಂದಿಗೆ ಗಲಾಟೆ ಮಾಡುವುದು, ತೊಂದರೆ ಕೊಡುವುದು ನಿಲ್ಲಿಸಬೇಕು ಎಂದು ಅನೇಕ ಮಹಿಳೆಯರನ್ನು ಸೇರಿಕೊಂಡು ಸುಮಾರು 40 ಜನ ಮಂಗಳೂರು ಪೊಲೀಸ್ ಕಮೀಷನರ್ ಸುರೇಶ್ ಅವರಿಗೆ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಪರವಾಗಿ ಮನವಿ ಕೊಟ್ಟು ಬಂದಿದ್ದೇವೆ.
Leave A Reply