ಅರುಣಾಚಲ ಪ್ರದೇಶದಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ, ಚೀನಾಕ್ಕೆ ಭಾರತದ ತಪರಾಕಿ
ಗುವಾಹಟಿ: ಗಡಿಯಲ್ಲಿ ಚೀನಾ ಚುಟುವಟಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತದ ಅರುಣಾಚಲ ಪ್ರದೇಶದ ದಿಬಂಗ್, ದೌ-ದೆಲಾಯಿ ಹಾಗೂ ಲೋಹಿತ್ ಕಣಿವೆ ಬೆಟ್ಟದ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸಿದ್ದು, ಚೀನಾಗೆ ತಪರಾಕಿ ನೀಡಿದೆ.
ಕಳೆದ ವರ್ಷ ಅಸ್ಸಾಂನ ಡೊಕ್ಲಾಂ ಗಡಿ ಪ್ರದೇಶದಲ್ಲಿ 73 ದಿನ ಸೈನಿಕರನ್ನು ನಿಯೋಜಿಸಿ ಉದ್ಧಟತನ ಮೆರೆದಿದ್ದ ಚೀನಾಕ್ಕೆ ಈ ಮೂಲಕ ಭಾರತ ಸ್ಪಷ್ಟ ಸಂದೇಶವನ್ನು ರವಾನಿಸಿದ್ದು, ಭಾರತ ಯಾವ ಪರಿಸ್ಥಿತಿ ಬೇಕಾದರೂ ಎದುರಿಸಲು ಸಿದ್ಧ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದೆ.
ಈ ಮೂರು ಪ್ರದೇಶಗಳ ಮೇಲೆ ಕಣ್ಣಿಡಲು ಹಾಗೂ ಭದ್ರತೆ ಒದಗಿಸಲು ಕಿಬಿತು ಎಂಬ ಪ್ರದೇಶದಲ್ಲಿ ಭಾರತೀಯ ಸೇನಾ ನೆಲೆಯನ್ನು ಸ್ಥಾಪಿಸಲಾಗಿದ್ದು, ಈ ಪ್ರದೇಶದ ಸೇನಾ ಮುಖ್ಯಸ್ಥ ಮಾಹಿತಿ ನೀಡಿದ್ದು, ಡೋಕ್ಲಾಂನಲ್ಲಿ ಈ ಹಿಂದೆ ಉಂಟಾಗಿದ್ದ ಬಿಕ್ಕಟ್ಟನ್ನು ಗಮನಿಸಿ ಈ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಗಡಿಯಲ್ಲಿ ನಾವು ಸೈನಿಕರನ್ನು ನಿಯೋಜಿಸಿ ಸುಮ್ಮನಿರುವುದಿಲ್ಲ. ಬದಲಾಗಿ ಚೀನಾ ಯಾವುದೇ ಉಪಟಳ ಮಾಡಿದರೂ ನಿಗ್ರಹಿಸುತ್ತೇವೆ ಹಾಗೂ ಎಂತಹುದೇ ಪರಿಸ್ಥಿತಿಯನ್ನು ಬೇಕಾದರೂ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಸ್ನೇಹ, ಸೌಹಾರ್ದದ ಮಾತುಕತೆಯಾಡಿ, ಬೆನ್ನಿಗೆ ಚೂರಿ ಹಾಕುವ ಪಾಕಿಸ್ತಾನದಂತೆ ಚೀನಾವೂ ಕಪಟತನ ಮಾಡುತ್ತಿದ್ದು, ಅದಕ್ಕೆ ಭಾರತವೂ ಗಡಿಯಲ್ಲಿ ಸೈನಿಕರನ್ನು ನಿಯೋಜಿಸುವ ಮೂಲಕ ಸರಿಯಾಗಿಯೇ ತಪರಾಕಿ ನೀಡಿದೆ.
Leave A Reply