ಸ್ವಚ್ಛ ಭಾರತ ಯೋಜನೆಗೆ ಅಭೂತಪೂರ್ವ ಯಶಸ್ಸು, ದೇಶದ ಶೇ.93ರಷ್ಟು ಜನರಿಂದ ಶೌಚಾಲಯ ಬಳಕೆ!
ದೆಹಲಿ: ಅದು 2014ರ ಅಕ್ಟೋಬರ್ 2. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಯೋಜನೆ ಜಾರಿಗೊಳಿಸಿದಾಗ, ಇದು ವಿಫಲ ಯೋಜನೆ ಎಂದು ಪ್ರತಿಪಕ್ಷಗಳು ಸುಖಾಸುಮ್ಮನೆ ಟೀಕಿಸಿದ್ದವು. ಆದರೆ ಅಂದು ಪ್ರಧಾನಿ ಮೋದಿ ಅವರು ಜಾರಿಗೊಳಿಸಿದ್ದ ಸ್ವಚ್ಛ ಭಾರತ ಯೋಜನೆ ಈಗ ಭಾರತದಾದ್ಯಂತ ಅಭೂತಪೂರ್ವ ಯಶಸ್ಸು ಗಳಿಸಿದೆ.
ವಿಶ್ವ ಬ್ಯಾಂಕ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಎನ್ಎಆರ್ ಎಸ್ಎಸ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಶೇ.93ರಷ್ಟು ಜನರಿಗೆ ಶೌಚಾಲಯ ಬಳಕೆ ಗೊತ್ತಿದೆ. ಅಲ್ಲದೆ ಸ್ವಚ್ಛ ಭಾರತ ಯೋಜನೆ ಜಾರಿಯಾದ ಬಳಿಕ ಭಾರತದ ಗ್ರಾಮೀಣ ಪ್ರದೇಶದಲ್ಲಿ ಶೇ.77ರಷ್ಟು ಕುಟುಂಬಗಳು ಶೌಚಾಲಯ ಹೊಂದಿವೆ ಎಂದು ತಿಳಿದುಬಂದಿದೆ.
2017ರ ನವೆಂಬರ್ ನಿಂದ 2018ರ ಮಾರ್ಚ್ ಅವಧಿಯಲ್ಲಿ ಸಮೀಕ್ಷೆ ನಡೆಸಿದ್ದು, ಗ್ರಾಮೀಣ ಪ್ರದೇಶದ ಶೇ.96ರಷ್ಟು ಜನ ಶೌಚಾಲಯವನ್ನೇ ಬಳಸುತ್ತಿದ್ದಾರೆ. 2014ರ ಅಕ್ಟೋಬರ್ 2ರಿಂದ ಇದುವರೆಗೆ ದೇಶಾದ್ಯಂತ ಸುಮಾರು 6.6 ಕೋಟಿ ಶೌಚಾಲಯ ನಿರ್ಮಿಸಲಾಗಿದೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.
ಈ ಯೋಜನೆ ಜಾರಿಯಾದ ಬಳಿಕ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದು, ಇದುವರೆಗೆ 3.4 ಲಕ್ಷ ಗ್ರಾಮಗಳು ಹಾಗೂ 341 ಜಿಲ್ಲೆಗಳನ್ನು ಬಯಲು ಶೌಚ ಮುಕ್ತ ಗ್ರಾಮಗಳು ಎಂದು ಘೋಷಿಸಲಾಗಿದೆ. ಒಟ್ಟಿನಲ್ಲಿ ಶೌಚಾಲಯವೇ ಕಾಣದ ಲಕ್ಷಾಂತರ ಗ್ರಾಮಗಳು, ಕೋಟ್ಯಂತರ ಜನ ಒಂದೇ ಒಂದು ಯೋಜನೆಯಿಂದ ಶೌಚಾಲಯ ಕಟ್ಟಿಸಿಕೊಂಡು ಸ್ವಚ್ಛ ಭಾರತಕ್ಕೆ ಮುನ್ನುಡಿಯಾಗಿರುವುದು ಸ್ವಾಗತಾರ್ಹವಾಗಿದೆ.
Leave A Reply