ನನ್ನ ದೇಶ ನೆನಪಿಸಿಕೊಂಡಿದ್ದೇ ಬೆಳ್ಳಿ ಪದಕ ಗೆಲ್ಲಲು ಸಹಾಯಕವಾಯ್ತು ಎಂದಿದ್ದು ಯಾರು ಗೊತ್ತೇ?

ಗೋಲ್ಡ್ ಕೋಸ್ಟ್: 2012ರ ಒಲಿಂಪಿಕ್ ನಲ್ಲಿ ಕಂಚಿನ ಪದಕ ಗೆದ್ದ ಬಳಿಕ ತಮ್ಮ ಮನದಾಳ ಬಿಚ್ಚಿಟ್ಟಿದ್ದ ಸೈನಾ ನೆಹ್ವಾಲ್, ನಾನು ರಾಷ್ಟ್ರಧ್ವಜ ಕೇಳಬೇಕಾದರೂ ಪದಕ ಗೆಲ್ಲಬೇಕು ಎಂದುಕೊಂಡಿದ್ದೆ ಎಂದು ತಿಳಿಸಿದ್ದರು. ಇದು ಒಬ್ಬ ಆಟಗಾರನಲ್ಲಿ ದೇಶ, ದೇಶಪ್ರೇಮ ಎಷ್ಟರಮಟ್ಟಿಗೆ ಒಡಮೂಡಿರುತ್ತದೆ ಎಂಬುದರ ಸಂಕೇತ. ಒಡಲೊಳಗೆ ಕ್ಯಾನ್ಸರ್ ಗೆಡ್ಡೆ ಇಟ್ಟುಕೊಂಡು 2011ರ ವಿಶ್ವಕಪ್ ಪಂದ್ಯಾವಳಿ ಆಡಿದ ಯುವರಾಜ್ ಸಿಂಗ್ ಸಹ ಅಂಥ ಅಪ್ಪಟ ದೇಶಪ್ರೇಮಿಯೇ!
ಆಟಗಾರನಿಗೆ ದೇಶಪ್ರೇಮ ಎಷ್ಟರ ಮಟ್ಟಿಗೆ ಸಹಾಯಕವಾಗುತ್ತದೆ, ದೇಶದ ಹೆಮ್ಮೆಯನ್ನು ಬಾನೆತ್ತರಕ್ಕೆ ಹಾರಿಸಲು ಸ್ಫೂರ್ತಿ ನೀಡುತ್ತದೆ ಎಂಬುದು ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸಾಬೀತಾಗಿದೆ.
ಕಾಮನ್ ವೆಲ್ತ್ ಗೇಮ್ಸ್ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಕುಂದಾಪುರದ ಗುರುರಾಜ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಭಾರ ಎತ್ತುವಾಗ ನನ್ನ ಕುಟುಂಬ ಹಾಗೂ ದೇಶವನ್ನು ನೆನಪಿಸಿಕೊಂಡೆ, ಇದೇ ಮುನ್ನಡೆ ಸಾಧಿಸಲು ಕಾರಣವಾಯಿತು ಎಂದು ತಿಳಿಸಿದ್ದಾರೆ.
ಪದಕ ಗೆಲ್ಲುವುದಕ್ಕೂ ಮೊದಲಿನ ಎರಡು ಪ್ರಯತ್ನದಲ್ಲಿ ನಾನು ಎರಡು ಬಾರಿ ಹಿನ್ನಡೆ ಅನುಭವಿಸಿದ್ದೆ. ಬಳಿಕ ನನ್ನ ತರಬೇತುದಾರ ಬಳಿ ಬಂದು ಇದು ನಿನ್ನ ಜೀವನದ ಮೇಲೆ ಅವಲಂಬಿತವಾಗಿದೆ, ಜನ ಹೇಗೆ ನಿನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ, ಈ ಮುನ್ನಡೆ ಹೇಗೆ ನಿನ್ನ ಜೀವನ ಬದಲಾಯಿಸುತ್ತದೆ ಎಂಬುದರ ಬಗ್ಗೆ ತಿಳಿಸಿದರು ಎಂದು ಗುರುರಾಜ್ ಸ್ಮರಿಸಿದ್ದಾರೆ.
ನಾನೂ ಸಹ ಧೈರ್ಯ ಮಾಡಿ ಭಾರ ಎತ್ತಲು ಮುಂದೆ ಬಂದೆ. ಆಗ ನನ್ನ ದೇಶ ಹಾಗೂ ಕುಟುಂಬವನ್ನು ನೆನಪಿಸಿಕೊಂಡೇ. ಅದೇ ಲಹರಿಯಲ್ಲಿ ಭಾರ ಎತ್ತಿದೆ. ಹಾಗಾಗಿ ಈ ಪದಕ ನನ್ನ ದೇಶ ಹಾಗೂ ಕುಟುಂಬಕ್ಕೆ ಸಮರ್ಪಿಸುತ್ತೇನೆ ಎಂದು ಕೃತಜ್ಞತೆ ಮೆರೆದಿದ್ದಾರೆ ಗುರುರಾಜ್. ಅಷ್ಟಕ್ಕೂ ದೇಶಪ್ರೇಮ ಎಂಬುದು ಸ್ಫೂರ್ತಿಯ ಚಿಲುಮೆಯಲ್ಲವೇ…
Leave A Reply