ಇವಿಎಂ ಬಗ್ಗೆ ಅಪಸ್ವರ ಎತ್ತುವ ಬದಲು ಸಾಬೀತು ಮಾಡಿ ತೋರಿಸಿ ಕಾಂಗ್ರೆಸ್ಸಿಗರೇ!!
ಇನ್ನೇನೂ ಅಭರ್ಥಿಗಳ ಅಂತಿಮ ಪಟ್ಟಿಯನ್ನು ಹೊರಗೆ ಹಾಕಲು ಎರಡೂ ರಾಷ್ಟ್ರೀಯ ಪಕ್ಷಗಳು ತಯಾರಾಗಿವೆ. ಒಂದು ವೇಳೆ ಕಾಂಗ್ರೆಸ್ ಗೆದ್ದರೆ ತಮ್ಮ ಸಾಧನೆಯಿಂದ ಎಂದೂ, ಸೋತರೆ ಇಲೆಕ್ಟ್ರಾನಿಕ್ ವೋಟಿಂಗ್ ಮಿಶಿನ್ ಸರಿಯಿಲ್ಲ ಎಂದು ಹೇಳಲು ಅದರ ಮುಖಂಡರು ತಯಾರಾಗಿದ್ದಾರೆ ಎನ್ನುವ ಜೋಕುಗಳು ಹರಿದಾಡುತ್ತಿವೆ. ಆ ಮೂಲಕ ಇವಿಎಂ ಮತ್ತೆ ಸುದ್ದಿ ಮಾಡುತ್ತಿವೆ ಎನ್ನಬಹುದು. ನೀವು ಅದು ಸರಿಯಿಲ್ಲ ಎಂದು ಆರೋಪ ಮಾಡಿದರೆ ಸಾಕಾಗುವುದಿಲ್ಲ, ಅದು ಸಾಬೀತು ಪಡಿಸಬೇಕು, ಅದು ಬಿಟ್ಟು ಪ್ರತಿ ಸಲ ಚುನಾವಣೆಯಾದ ನಂತರ ಹೀಗೆ ಅದೇ ರಾಗ, ಅದೇ ಹಾಡು ಹಾಡಿದ್ದರೆ ಕಂಬಿಗಳ ಹಿಂದೆ ನಿಲ್ತಿಸ್ತೇವೆ ಎಂದು ರಾಷ್ಟ್ರೀಯ ಚುನಾವಣಾ ಆಯೋಗ ಹೇಳಿದ ನಂತರ ಕಾಂಗ್ರೆಸ್ಸಿಗರು ಮತ್ತು ಅವರ ಕಸಿನ್ಸ್ ಪಕ್ಷಗಳು ಊಳಿಡುವುದನ್ನು ಕಡಿಮೆ ಮಾಡಿವೆ. ಆದರೂ ಆಗೊಮ್ಮೆ, ಈಗೊಮ್ಮೆ ಈ ವಿಷಯ ಬಂದಾಗ ಮತಪತ್ರಗಳಲ್ಲಿಯೇ ಚುನಾವಣೆ ಮಾಡಿ ಎಂದು ಹೇಳುವ ಮೂಲಕ ತಮಗೆ ಇವಿಎಂನಲ್ಲಿ ಸಂಶಯ ಇದೆ ಎಂದು ಸಾರುವ ಪ್ರಯತ್ನ ಮಾಡುತ್ತವೆ, ವಿಶೇಷವಾಗಿ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ ಎಂದರೆ ಅಲ್ಲಿ ಇವಿಎಂ ಬಗ್ಗೆ ವಿಪಕ್ಷಗಳು ಧ್ವನಿ ಎತ್ತದೆ ಇರಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.
ಪರಿಸರಕ್ಕೆ ಪೂರಕ ಇವಿಎಂ.
ಒಂದು ವಿಷಯ ಸ್ಪಷ್ಟ. ನಮ್ಮ ದೇಶ ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ನಾವು ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿದ್ದೇವೆ. ನಮಗೆ ಮತಪತ್ರದಲ್ಲಿಯೇ ಚುನಾವಣೆ ಮಾಡಬೇಕು ಎನ್ನುವ ನಿಯಮ ಸಂವಿಧಾನದಲ್ಲಿ ಇಲ್ಲ. ಇವಿಎಂ ಬಹಳ ವೇಗವಾಗಿ ಫಲಿತಾಂಶ ಕೊಡುತ್ತದೆ. ಇನ್ನೊಂದು ಪರಿಸರಾದಿಗಳು ಇವಿಎಂ ಅನ್ನು ಒಪ್ಪಲೇಬೇಕು ಯಾಕೆಂದರೆ ನಮ್ಮ ರಾಷ್ಟ್ರದಲ್ಲಿ ಪ್ರತಿ ವರ್ಷ ಕನಿಷ್ಟ ಸರಾಸರಿ ಎರಡು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಲೇ ಇರುತ್ತದೆ. ಅದರೊಂದಿಗೆ ಲೋಕಸಭಾ ಚುನಾವಣೆ. ನೂರ ಇಪ್ಪತ್ತು ಜನಸಂಖ್ಯೆಯಲ್ಲಿ ಹದಿನೆಂಟು ದಾಟಿದವರು ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅದರ ಮೇಲಾಗಿ ನಮ್ಮದು ಯುವದೇಶ. ಪ್ರತಿ ಚುನಾವಣೆಯಲ್ಲಿ ಸರಾಸರಿ ಎಪ್ಪತ್ತು ಶೇಕಡಾ ಜನ ಮತ ಹಾಕಿದರೂ ಬೇಕಾಗುವ ಕಾಗದಗಳು ಎಷ್ಟು? ಅಷ್ಟು ಕಾಗದಗಳು ಬೇಕಾದರೆ ಧರೆಗುರುಳುವ ಮರಗಳು ಎಷ್ಟು? ಅದಲ್ಲದೆ ಇದನ್ನು ರೀಸೈಕ್ಲಿಂಗ್ ಮಾಡಲು ಆಗಲ್ಲ. ಇಷ್ಟು ಮರಗಳು ಪ್ರತಿ ವರ್ಷ ನಾಶವಾದರೆ ನಾವು ಚುನಾವಣೆಯನ್ನು ನಮ್ಮದೇ ಪರಿಸರ ನಾಶಕ್ಕೆ ಬಳಸುತ್ತಿದ್ದೇವೆ ಎಂದು ಅರ್ಥವಾಗುವುದಿಲ್ಲವೇ? ಆದ್ದರಿಂದ ನಾವು ಪರಿಸರ ಉಳಿಸುವುದಕ್ಕಾಗಿಯಾದರೂ ಇವಿಎಂಗಳ ಮೊರೆ ಹೋಗಲೇಬೇಕು. ಇದಕ್ಕೆ ಒಂದು ಸಲ ಹಣ ತೊಡಗಿಸಿಕೊಂಡರೆ ಸಾಕು, ಇವು ಎಷ್ಟೋ ಚುನಾವಣೆಗಳನ್ನು ತಮ್ಮ ಉದರದಲ್ಲಿ ಜೀರ್ಣಿಸಿಕೊಳ್ಳಬಲ್ಲವು.
ಅಡ್ವಾಣಿ, ಸ್ವಾಮಿ ಹೇಳಿದ್ದು 1999 ರಲ್ಲಿ.
ಇನ್ನು ಕಾಂಗ್ರೆಸ್ಸಿಗರ ಮತ್ತೊಂದು ಆರೋಪ ಎಂದರೆ 1999 ರಲ್ಲಿಯೇ ಬಿಜೆಪಿ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಸುಬ್ರಹ್ಮಣ್ಯ ಸ್ವಾಮಿ ಇವಿಎಂಗೆ ವಿರೋಧ ವ್ಯಕ್ತಪಡಿಸಿದರು ಎನ್ನುತ್ತಾರೆ. ಖಂಡಿತ, ಇವಿಎಂ ಅನುಷ್ಟಾನಕ್ಕೆ ತಂದಾಗ ಅದು ಈಗಿನದಷ್ಟು ಮುಂದುವರೆದಿರಲಿಲ್ಲ. ಅದರಲ್ಲಿ ಮತದ ಬಟನ್ ನಿಂದ ಹಿಡಿದು ಒಳಗಿನ ತಂತ್ರಜ್ಞಾನದ ಬಗ್ಗೆ ಗೊಂದಲ ಇತ್ತು. ಆದ್ದರಿಂದ ಅದನ್ನು ಸುಧಾರಿಸುವ ತಂತ್ರಜ್ಞಾನ ಹುಡುಕಿ, ನಮಗೆ ಗೊಂದಲ ಇದೆ ಎಂದು ಅಡ್ವಾಣಿ, ಸ್ವಾಮಿ ಹೇಳಿದ್ದು ನಿಜ. ಆದರೆ ನಂತರ 19 ವರ್ಷಗಳಲ್ಲಿ ಇವಿಎಂ ನಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಈ ಬಾರಿಯಂತೂ ವಿವಿಪ್ಯಾಟ್ ಎನ್ನುವ ತಂತ್ರಜ್ಞಾನ ಅದಕ್ಕೆ ಸೇರಿದೆ. ಒಬ್ಬ ಮತದಾರ ತಾನು ಯಾರಿಗೆ ಮತ ಹಾಕಬೇಕು ಎಂದು ಅಂದುಕೊಂಡು ಬಟನ್ ಒತ್ತುತ್ತಾನೋ ಅದು ಅಲ್ಲಿಯೇ ಪಕ್ಕದಲ್ಲಿರುವ ಯಂತ್ರದಲ್ಲಿ ಏಳು ಸೆಕೆಂಡ್ ತನಕ ಗೋಚರಿಸುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿಗರಿಗೆ ಅದರಲ್ಲಿಯೂ ಸಂಶಯ ಇದೆ. ಅವರ ಪ್ರಕಾರ ಇವಿಎಂ ಮತ್ತು ವಿವಿಪ್ಯಾಟ್ ನಡುವೆ ಕಂಟ್ರೋಲಿಂಗ್ ಆಫೀಸರ್ ಕುಳಿತುಕೊಳ್ಳಬೇಕು. ಆಗ ಸರಿಯಾಗುತ್ತದೆ ಎನ್ನುತ್ತಿದ್ದಾರೆ. ನೀವು ಲಿಖಿತವಾಗಿ ಬರೆದು ಕೊಡಿ, ನಾವು ಮೇಲಿನವರಿಗೆ ಕಳುಹಿಸಿಕೊಡುತ್ತೇವೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಹೇಳಿದ್ದಾರೆ.
ಇವಿಎಂ ಬಗ್ಗೆ ಅಪಸ್ವರ ಎತ್ತುವ ಕಾಂಗ್ರೆಸ್ಸಿಗರಿಗೆ ಪಂಜಾಬ್ ನಲ್ಲಿ ಗೆಲುವು ಸಿಕ್ಕಿದಾಗ ಇವಿಎಂ ಸರಿಯಾಗಿಯೇ ಇತ್ತು ಎಂದೆನಿಸುತ್ತದೆ, ಅದೇ ಸೋತಾಗ ಇವಿಎಂ ಸರಿಯಿಲ್ಲ ಎಂದೆನಿಸುತ್ತದೆ. ಇದನ್ನು ಏನು ಮಾಡುವುದು ಎನ್ನುವುದು ಚುನಾವಣಾ ಪಂಡಿತರ ಪ್ರಶ್ನೆ. ಅಷ್ಟೇ ಅಲ್ಲ, ಇತ್ತೀಚೆಗೆ ಗೋರಖಪುರ ಮತ್ತು ಫುಲ್ ಪುರದಲ್ಲಿ ಬಿಜೆಪಿ ಸೋತಿತು. ಅದು ಕೂಡ ಅಲ್ಲಿನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಪರ್ಧಿಸುತ್ತಿದ್ದ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಗೆದ್ದಿದೆ. ಯೋಗಿ ಆದಿತ್ಯನಾಥ ಅವರು ಕಳೆದ ಬಾರಿ ಎರಡೂವರೆ ಲಕ್ಷ ಮತಗಳಿಂದ ಗೆದ್ದ ಕ್ಷೇತ್ರದಲ್ಲಿ ಈ ಬಾರಿ ಐವತ್ತು ಸಾವಿರ ಮತಗಳಿಗೆ ಸೋಲುತ್ತಾರೆ ಎಂದರೆ ಇವಿಎಂ ಬಿಜೆಪಿಗರ ಕೈಯಲ್ಲಿ ಇದೆ ಎಂದರೆ ಇಂತಹ ಮುಖಭಂಗ ಯಾವ ಪಕ್ಷ ಕೂಡ ಮಾಡಲು ಹೋಗಲ್ಲ. ಯಾಕೆಂದರೆ ಯೋಗಿ ಆದಿತ್ಯನಾಥ ಅವರ ಕ್ಷೇತ್ರದಲ್ಲಿ ಬಿಜೆಪಿ ಸೋತಿತು ಎಂದರೆ ಅದು ಬೇರೆ ರಾಜ್ಯಗಳ ಚುನಾವಣೆಗಳ ಮೇಲೆಯೂ ಪರಿಣಾಮ ಬೀರುತ್ತೆ. ಉತ್ತರಪ್ರದೇಶದಲ್ಲಿ ಲೋಕಸಭಾ ಉಪಚುನಾವಣೆಯಲ್ಲಿ ಯಾಕೆ ಯಾರೂ ಇವಿಎಂ ಸರಿಯಿಲ್ಲ ಎಂದು ಹೇಳಿಲ್ಲ. ಆಗ ಯಾಕೆ ಯಾರೂ ಮಾತನಾಡಿಲ್ಲ. ಯಾಕೆಂದರೆ ಅದು ಅವರ ಪರವಾಗಿದ್ದ ಫಲಿತಾಂಶ. ಒಂದು ವೇಳೆ ಇವಿಎಂ ದುರುಪಯೋಗ ಅಥವಾ ದುರ್ಬಳಕೆ ಆಗುತ್ತೆ ಎಂದು ಗ್ಯಾರಂಟಿ ಇದ್ದರೆ ಕಾಂಗ್ರೆಸ್ಸಿನವರು ಪ್ರಪಂಚದ ಯಾವುದಾದರೂ ರಾಷ್ಟ್ರದಿಂದ ತಮಗೆ ಬೇಕಾದವರನ್ನು ಕರೆದು ದೆಹಲಿಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಹೋಗಿ ಅದನ್ನು ಸಾಬೀತು ಮಾಡಿ ತೋರಿಸಲಿ. ಕಾಂಗ್ರೆಸ್ಸಿಗರಿಗೆ ಫೇಸ್ ಬುಕ್ ನ ಒನರ್ ನಿಂದ ಹಿಡಿದು ಇಟಲಿಯ ಯಾವುದ್ಯಾವುದೋ ಕಂಪೆನಿಯ ತನಕ ಎಲ್ಲರೂ ಗೊತ್ತು. ಹಾಗಿದ್ದ ಮೇಲೆ ಇವಿಎಂ ಸರಿಯಿಲ್ಲ ಎಂದು ಸಾಬೀತು ಪಡಿಸುವುದು ಕಷ್ಟವಲ್ಲ. ಆದರೂ ಕಾಂಗ್ರೆಸ್ಸಿನವರೂ ಮಾಡಲು ಹೋಗುವುದಿಲ್ಲ. ಯಾಕೆಂದರೆ ಅವರಿಗೆ ಗೊತ್ತು, ಅದು ಆಗುವ, ಹೋಗುವ ಕೆಲಸ ಅಲ್ಲ. ಅದರ ಬದಲಿಗೆ ಅವಕಾಶ ಸಿಕ್ಕಾಗ ಪತ್ರಿಕಾ ಹೇಳಿಕೆ ಕೊಟ್ಟು ನಮಗೆ ಮತಪತ್ರಗಳೇ ಒಳ್ಳೆಯದು ಎಂದು ಹೇಳಿ ಜನರಿಗೆ ಇವಿಎಂ ಬಗ್ಗೆ ಗೊಂದಲ ಮೂಡಿಸೋಣ ಎಂದು ಅಂದುಕೊಂಡಿದ್ದಾರೆ!
Leave A Reply