150 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಮಾರ್ಪಾಡು ಮಾಡಿದರೇ ಕೆ.ಜೆ.ಜಾರ್ಜ್?
ಬೆಂಗಳೂರು: ರಾಜ್ಯದಲ್ಲಿ ದಿನೇದಿನೆ ಚುನಾವಣೆ ಕಾವು ರಂಗೇರುತ್ತಿರುವ ಬೆನ್ನಲ್ಲೇ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಸಂಕಷ್ಟ ಎದುರಾಗಿದ್ದು, ಬರೋಬ್ಬರಿ 150 ಕೋಟಿ ರೂ. ಮೌಲ್ಯದ ಕೃಷಿ ಭೂಮಿಯನ್ನು ಗೃಹ ನಿರ್ಮಾಣ ಭೂಮಿಯಾಗಿ ಮಾರ್ಪಾಡು ಮಾಡಿದ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವವರು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಹೊಸಕೋಟೆ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ತಿಮ್ಮೇಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಎಂಆರ್ ಡಿಎ ಆಯುಕ್ತ ಬಿ.ಎಸ್.ಶೇಖರಪ್ಪ, ಬಿಎಂಆರ್ ಡಿಎ ನಗರ ಯೋಜಕ ಎನ್.ಕೆ.ತಿಪ್ಪೇಸ್ವಾಮಿ, ಬಿಎಂಆರ್ ಡಿಎ ಹೆಚ್ಚುವರಿ ನಿರ್ದೇಶಕ ವಿ.ಧನಂಜಯರೆಡ್ಡಿ ಮತ್ತು ಬಿಎಂಆರ್ ಡಿಎ ಅಧಿಕಾರಿ ಎನ್.ನರಸಿಂಹಮೂರ್ತಿ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಿಸಲಾಗಿದೆ.
ಹೊಸಕೋಟೆಯಲ್ಲಿ ಹೊಸಕೋಟೆ ಯೋಜನಾ ಪ್ರಾಧಿಕಾರದ ಅಡಿಯಲ್ಲಿ ಮಾಸ್ಟರ್ ಪ್ಲಾನ್ ರಚಿಸುವ ಸೋಗು ಹಾಕಿ ಸುಮಾರು 870 ಹೆಕ್ಟೇರ್ ಕೃಷಿ ಭೂಮಿಯನ್ನು ಅಕ್ರಮವಾಗಿ ವಸತಿ ಹಾಗೂ ಗೃಹ ನಿರ್ಮಾಣ ಭೂಮಿಯನ್ನಾಗಿ ಮಾರ್ಪಾಡು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದು ಸುಮಾರು 150 ಕೋಟಿ ರೂಪಾಯಿ ಮೌಲ್ಯದ ಹಗರಣವಾಗಿದ್ದು, ಸಚಿವ ಕೆ.ಜೆ.ಜಾರ್ಜ್ ಹಾಗೂ ಆರು ಅಧಿಕಾರಿಗಳಲ್ಲದೆ 40 ಬ್ಯುಲ್ಡರ್ ಗಳು ಸಹ ಹಗರಣದಲ್ಲಿ ಭಾಗಿಯಾಗಿದ್ದಾರೆ. ಇದರ ಕುರಿತು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದಾಗ್ಯೂ, ಡಿವೈಎಸ್ ಪಿ ಎಂ.ಕೆ.ಗಣಪತಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಜೆ.ಜಾರ್ಜ್ ಅವರಿಗೆ ಚುನಾವಣೆ ಹೊಸ್ತಿಲಿನಲ್ಲಿ ಮತ್ತೊಂದು ಕಂಟಕ ಎದುರಾಗಿದ್ದು, ಎಲ್ಲರ ದೃಷ್ಟಿ ತನಿಖೆಯತ್ತ ನೆಟ್ಟಿದೆ.
Leave A Reply