ಪ್ರತಿಪಕ್ಷಗಳಿಂದ ಕಲಾಪ ವ್ಯರ್ಥ, 23 ದಿನದ ವೇತನ ಭತ್ಯೆ ಮರಳಿಸಿದ ಪ್ರಧಾನಿ ಮೋದಿ
ದೆಹಲಿ: ಸಂಸತ್ ನಲ್ಲಿ ನಿರಂತರವಾಗಿ ಗದ್ದಲವೆಬ್ಬಿಸಿ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಎರಡನೆಯ ಇಡೀ ಅವಧಿ ವ್ಯರ್ಥವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಅವರು ತಮ್ಮ 23 ದಿನಗಳ ವೇತನ ಮತ್ತು ಭತ್ಯೆಯನ್ನು ಸರ್ಕಾರಕ್ಕೆ ಮರಳಿಸಿದ್ದಾರೆ. ಸಂಸತ್ ಅಧಿವೇಶನ ವ್ಯರ್ಥವಾದ ಹಿನ್ನೆಲೆಯಲ್ಲಿ ಎನ್ ಡಿಎ ಸಂಸದರು ವೇತನ ತ್ಯಜಿಸುವ ನಿರ್ಧಾರ ಕೈಗೊಂಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 28 ದಿನಗಳ 79,750 ರೂಪಾಯಿಯನ್ನು ಮರಳಿ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಜ.29ರಂದು ಆರಂಭವಾಗಿದ್ದ ಸಂಸತ್ ಅಧಿವೇಶನ ಶೂನ್ಯ ಸಾಧನೆಯ ಮೂಲಕ ಶುಕ್ರವಾರ ಅಂತ್ಯವಾಗಿತ್ತು. ಬಜೆಟ್ ಅಧಿವೇಶನದ ವಿಸ್ತರಿತ ಭಾಗ ಆರಂಭವಾದಾಗಿನಿಂತಲೂ ಕಾವೇರಿ ನಿರ್ವಹಣಾ ಮಂಡಳಿ ರಚನೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ, ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯ ಕುರಿತು ಪ್ರತಿಪಕ್ಷಗಳ ವಿನಾಕಾರಣ ಅಲಾಪದಿಂದ ಕಲಾಪ ವ್ಯರ್ಥವಾಗಿತ್ತು. ಉಭಯ ಸದನಗಳಲ್ಲಿ ಯಾವುದೇ ರೀತಿಯ ಚರ್ಚೆಗಳು ನಡೆಯಲಿಲ್ಲ.
ಕೇಂದ್ರ ಸರ್ಕಾರದ ವಿರುದ್ಧ ವೈಎಸ್ಸಾರ್ ಕಾಂಗ್ರೆಸ್, ತೆಲುಗುದೇಶಂ, ಕಾಂಗ್ರೆಸ್ ಹಾಗೂ ಎಡರಂಗಗಳು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮುಂದಾದರೂ ಕೆಲವು ಪ್ರಾದೇಶಿಕ ಪಕ್ಷಗಳ ಗಲಾಟೆಯಿಂದ ಇದನ್ನು ಕೈಗೆತ್ತಿಕೊಳ್ಳಲೂ ಆಗಲಿಲ್ಲ. ಈ ಬಿಕ್ಕಟ್ಟಿಗೆ ವಿಪಕ್ಷಗಳು ಕಾರಣ ಎಂದು ಸರ್ಕಾರ ಟೀಕಿಸಿತ್ತು. ಆದರೆ ಕೇಂದ್ರದ ನಿಲುವುಗಳು ಇದಕ್ಕೆ ಕಾರಣ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇದೆಲ್ಲದರ ಮಧ್ಯೆ 23 ದಿನಗಳ ಕಲಾಪ ವ್ಯರ್ಥವಾಗಿತ್ತು. ಆದ್ದರಿಂದ ಎನ್ ಡಿಎ ಸಂಸದರು ವೇತನ ಮತ್ತು ಭತ್ಯೆ ನಿರಾಕರಿಸಿದ್ದರು. ಇದರಿಂದ 3.66 ಕೋಟಿ ರು. ಸರ್ಕಾರಕ್ಕೆ ಮರಳಿಲಿದೆ ಎಂದು ಸಂಸದೀಯ ಖಾತೆ ಸಚಿವ ಅನಂತ್‌ಕುಮಾರ್ ಮಾಹಿತಿ ನೀಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ವೇತನ ಮತ್ತು ಭತ್ಯೆ ನಿರಾಕರಿಸುವ ಮೂಲಕ ಮಾದರಿಯಾಗಿದ್ದಾರೆ.
Leave A Reply