ಯೋಧರ ಕುಟುಂಬಕ್ಕೆ ಶುಭ ಸುದ್ಧಿ, ಗಡಿಕಾಯುವ ನವವಿವಾಹಿತ ಯೋಧರಿಗೆ ಅತಿಥಿ ಗೃಹ ನಿರ್ಮಾಣ

ದೆಹಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತೀಯ ಸೇನೆಗೆ ಹೊಸ ಬಲ ತುಂಬುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಸೇನೆಗೆ ಸ್ವಾತಂತ್ರ್ಯ ನೀಡುವುದು, ವೇತನ, ಯುದ್ಧಾಸ್ತ್ರಗಳ ವಿತರಣೆ ಸೇರಿ ನಾನಾ ಸೌಲಭ್ಯಗಳನ್ನು ಕಟ್ಟುನಿಟ್ಟಾಗಿ ನೀಡುತ್ತಿದ್ದಾರೆ. ಈ ಮೂಲಕ ಸೈನಿಕರಿಗೆ ನೈತಿಕ ಬಲ ತುಂಬುವ ಕಾರ್ಯವನ್ನು ನರೇಂದ್ರ ಮೋದಿ ಅವರ ಸರ್ಕಾರ ಮಾಡುತ್ತಿದೆ. ಆದರೆ ಇದೀಗ ಕುಟುಂಬದಿಂದ ದೂರವಿರುವ, ವಿಶೇಷವಾಗಿ ನವವಿವಾಹಿತ ಯೋಧರಿಗೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆಯನ್ನು ನೀಡುವ ಮೂಲಕ ಗಮನ ಸೆಳೆದಿದೆ.
ನವವಿವಾಹಿತ ಮತ್ತು ಇತರ ಯೋಧರು ತಮ್ಮ ಕುಟುಂಬದವರೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸಲು, ಸಮಯ ಕಳೆಯಲು ಅನುಕೂಲವಾಗುವ ನಿಟ್ಟಿನಲ್ಲಿ ದೇಶಾಧ್ಯಂತ 190 ಅತಿಥಿ ಗೃಹಗಳನ್ನು ನಿರ್ಮಿಸಲು ಗಡಿ ಭದ್ರತಾ ಪಡೆ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ಎಂಟು ಗಡಿ ಪ್ರದೇಶದಲ್ಲಿ 2,800 ಕೋಣೆಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಯೋಧರಿಗೆ ತಮ್ಮ ಕುಟುಂಬದವರೊಂದಿಗೆ ನೆಮ್ಮದಿಯ ಜೀವನ ನಡೆಸಲು ಅನುಕೂಲ ಕಲ್ಪಿಸಲಾಗಿದೆ.
ಜವಾನ್ ಗೆಸ್ಟ್ ಹೌಸ್ ಹೆಸರಲ್ಲಿ ನಿರ್ಮಿಸಲಾಗುವ ಈ ಗೃಹಗಳಲ್ಲಿ ಯೋಧರು ತಮ್ಮ ಕುಟುಂಬಸ್ಥರೊಂದಿಗೆ ಕಾಲ ಕಳೆಯಬಹುದು. ಯೋಧರು 30 ವರ್ಷದ ಸೈನಿಕ ಸೇವೆಯಲ್ಲಿ ನಿರತರಾಗಿದ್ದರೇ, ಕೇವಲ ಐದು ವರ್ಷ ಮಾತ್ರ ಕುಟುಂಬದೊಂದಿಗೆ ಜೀವನ ಕಳೆಯುತ್ತಾರೆ. ಆದ್ದರಿಂದ ಹೆಚ್ಚಿನ ಸಮಯವನ್ನು ಕುಟುಂಬದೊಂದಿಗೆ ಕಳೆಯಬೇಕು, ವಿಶೇಷವಾಗಿ ನವವಿವಾಹಿತ ಯೋಧರು ಕುಟುಂಬದೊಂದಿಗೆ ಜೀವನ ಸಾಗಿಸುವ ದೃಷ್ಟಿಯಿಂದ ಈ ಅತಿಥಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.