ಸೈನಿಕರ ಬಹುದಿನದ ಆಸೆ ಈಡೇರಿಸಿದ ಕೇಂದ್ರ ಸರ್ಕಾರ, ಬುಲೆಟ್ ಪ್ರೂಫ್ ಜಾಕೆಟ್ ತಯಾರಿಸಲು ಒಪ್ಪಿಗೆ
ದೆಹಲಿ: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ 110 ಯುದ್ಧ ವಿಮಾನ ಖರೀದಿಗೆ ಅಂಗೀಕಾರ ನೀಡುವ ಮೂಲಕ ಸೇನೆ ಬಲಪಡಿಸಲು ಮುಂದಾಗುವ ಜತೆಗೆ, ಅದರಲ್ಲಿ ಶೇ.85ರಷ್ಟು ವಿಮಾನಗಳನ್ನು ಮೇಕ್ ಇನ್ ಇಂಡಿಯಾ ಯೋಜನೆ ಮೂಲಕವೇ ತಯಾರಿಸಲು ಅನುಮತಿ ನೀಡಿ ಸ್ವದೇಶಿ ಉತ್ಪಾದನೆಗೆ ಅನುಕೂಲ ಮಾಡಿತು.
ಈಗ ಸೈನಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಬುಲೆಟ್ ಪ್ರೂಫ್ ಜಾಕೆಟ್ ತಯಾರಿಸಲು ಅನುಮತಿ ನೀಡಿದ್ದು, ಆ ಮೂಲಕ ಕಳೆದ ಒಂಬತ್ತು ವರ್ಷದ ಹಿಂದೆ ಕೇಂದ್ರ ಸರ್ಕಾರಕ್ಕೆ ಬುಲೆಟ್ ಪ್ರೂಫ್ ಜಾಕೆಟ್ ನೀಡಬೇಕು ಎಂದು ಮನವಿ ಸಲ್ಲಿಸಿ ಕಾಯುತ್ತಿದ್ದ ಸೈನಿಕರ ಆಸೆ ತಣಿಸಿದೆ.
ಈಗ ಮೇಕ್ ಇನ್ ಇಂಡಿಯಾ ಮೂಲಕವೇ ಬುಲೆಟ್ ಪ್ರೂಫ್ ಜಾಕೆಟ್ ತಯಾರಿಸಲಿದ್ದು, ದೆಹಲಿ ಮೂಲದ ಎಸ್ಎಂಪಿಪಿ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 639 ಕೋಟಿ ರೂ. ವೆಚ್ಚದಲ್ಲಿ ಬುಲೆಟ್ ಪ್ರೂಫ್ ಜಾಕೆಟ್ ತಯಾರಿಸಲು ಸೂಚಿಸಿದೆ.
ಮೂರು ವರ್ಷಗಳಲ್ಲಿ ಸೇನೆಗೆ ಬುಲೆಟ್ ಪ್ರೂಫ್ ಜಾಕೆಟ್ ವಿತರಿಸಲಾಗುವುದು ಎಂದು ಕಂಪನಿ ತಿಳಿಸಿದ್ದು, ಈ ಜಾಕೆಟ್ ಗಳು ಬೊರೊನ್ ಕಾರ್ಬೈಡ್ ಸೆರಾಮಿಕ್ ಎಂಬ ಅಂಶವನ್ನು ಹೊಂದಿದ್ದು, ಕಡಿಮೆ ಭಾರದ್ದಾಗಿರುತ್ತವೆ ಎಂದು ಕಂಪನಿ ಮಾಹಿತಿ ನೀಡಿದೆ. ಆದಾಗ್ಯೂ ಸೇನೆಗೆ 3.5 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ ಅವಶ್ಯವಿದೆ ಎಂದು ತಿಳಿದುಬಂದಿದೆ.
Leave A Reply