ನಮ್ಮ ಊರಿನ ಕ್ಯಾಂಟೀನ್ ಗೆ ರಾಣಿ ಅಬ್ಬಕ್ಕಳ ಹೆಸರು ಇಡಿ, ಇಂದಿರಾ ಗಾಂಧಿ ಹೆಸರು ಯಾಕೆ!
ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಇಂದಿರಾ ಕ್ಯಾಂಟಿನ್ ಐಡಿಯಾ ಯಾರು ಕೊಟ್ರೋ ಗೊತ್ತಿಲ್ಲ. ಬಹಳ ಒಳ್ಳೆಯ ಯೋಜನೆ. ಬಹುಶ: ತಮಿಳುನಾಡಿನ ಅಮ್ಮಾ ಕ್ಯಾಂಟೀನ್ ನಿಂದ ನೋಡಿ ಕಲಿತಿರಬೇಕು. ಯಾಕೆ ಒಳ್ಳೆಯ ಯೋಜನೆ ಎನ್ನುತ್ತಿದ್ದೇನೆ ಎಂದರೆ ಬಡವರಿಗೆ, ಮಧ್ಯಮ ವರ್ಗದವರಿಗೆ ಹೋಟೇಲಿನವರ ತಿಂಡಿಗೆ ಹಣ ಕೊಟ್ಟು ಪೂರೈಸುವುದಿಲ್ಲ. ಒಂದು ಪ್ಲೇಟ್ ಇಡ್ಲಿಗೆ 20 ರಿಂದ 25 ರೂಪಾಯಿ ಇದೆ. ಇನ್ನು ಊಟಕ್ಕೆ ನಲ್ವತ್ತು ರೂಪಾಯಿ ಕೊಟ್ಟರೂ ಸಾಂಬಾರಿನಲ್ಲಿ ತರಕಾರಿಯನ್ನು ಹುಡುಕಬೇಕು, ಹಾಗಿರುತ್ತೆ. ಹಾಗಿರುವಾಗ ತಿಂಡಿಗೆ ಐದು ರೂಪಾಯಿ, ಊಟಕ್ಕೆ ಹತ್ತು ರೂಪಾಯಿ ಒಳ್ಳೆಯ ವಿಚಾರ. ನಗರ ಪ್ರದೇಶದಲ್ಲಿ ವಾಸಿಸುವ ಬಡವರಿಗೆ ತಮ್ಮ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯಿಂದ ಪೌಷ್ಟಿಕಾಂಶ ಇರುವ ಸಮತೋಲಿತ ಆಹಾರವನ್ನು ಹೋಟೇಲಿನ ದುಬಾರಿ ಬಿಲ್ ನೀಡಿ ಪೂರೈಸಲು ಆಗದ ಕಾರಣ ಇಂದಿರಾ ಕ್ಯಾಂಟಿನ್ ಒಳ್ಳೆಯ ಯೋಜನೆ. ಆದ್ದರಿಂದ ನನಗೆ ಯೋಜನೆಯ ಬಗ್ಗೆ ಬೇಸರವಿಲ್ಲ. ಆದರೆ ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಸಿದ್ಧರಾಮಯ್ಯ ಹಾಗೂ ಅವರ ಇಡೀ ಪಟಾಲಂ ಫ್ರೀಯಾಗಿ ಯಥೇಚ್ಚ ಪಬ್ಲಿಸಿಟಿ ಪಡೆದುಕೊಳ್ಳುತ್ತಾ ಇದೆಯಲ್ಲ, ಆ ಬಗ್ಗೆ ಆಕ್ಷೇಪ ಇದೆ. ಯಾಕೆಂದರೆ ಅವರಿಗೆ ಈ ಯೋಜನೆ ತಮ್ಮದು ಎಂದು ಹೇಳುವ ಯಾವ ನೈತಿಕತೆಯೂ ಇಲ್ಲ.
ಯಾರದ್ದೋ ಹಣದಲ್ಲಿ ಎಲ್ಲಮ್ಮನ ಜಾತ್ರೆ.
ಮೊದಲನೇಯದಾಗಿ ಇಂದಿರಾ ಕ್ಯಾಂಟಿನ್ ನಲ್ಲಿ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ತಲಾ ಐನೂರು ಜನರಿಗೆ ಕೊಡಬೇಕು ಎನ್ನುವ ನಿಯಮ ಇದೆ. ನಿಮಗೆ ಗೊತ್ತಿರುವ ಪ್ರಕಾರ ಐದು ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಊಟ ಕೊಡಿ ಎಂದು ಟೆಂಡರ್ ಕರೆದರೆ ಸಿದ್ಧರಾಮಯ್ಯನವರ ಪಕ್ಷದವರು ಕೂಡ ಇವರ ಹತ್ತಿರ ಸುಳಿಯುವುದಿಲ್ಲ. ಅದಕ್ಕಾಗಿ ಐದು ರೂಪಾಯಿ ಜನರಿಂದ ತೆಗೆದುಕೊಳ್ಳಿ, 35 ರೂಪಾಯಿ ನಾವು ಪ್ರತ್ಯೇಕವಾಗಿ ಕೊಡುತ್ತೇವೆ ಎಂದು ಸರಕಾರ ಹೇಳುತ್ತದೆ. ಈಗ ಐದು ರೂಪಾಯಿ ನಾವು ಕೊಟ್ಟು 35 ರೂಪಾಯಿ ರಾಜ್ಯ ಸರಕಾರ ಕೊಟ್ಟರೆ ನನಗ್ಯಾಕೆ ಟೆನ್ಷನ್ ಎಂದು ನೀವು ಕೇಳಬಹುದು. ಪ್ರಶ್ನೆ ಇರುವುದು ರಾಜ್ಯ ಸರಕಾರ 35 ರೂಪಾಯಿ ಗುತ್ತಿಗೆದಾರರರಿಗೆ ಕೊಡುತ್ತಿಲ್ಲ. ಹಾಗಾದರೆ ಗುತ್ತಿಗೆದಾರರು ಧರ್ಮಕ್ಕೆ ಮಾಡುತ್ತಿದ್ದಾರಾ ಎಂದು ನೀವು ಕೇಳಬಹುದು. ಇಲ್ಲ, ಸಿದ್ಧರಾಮಯ್ಯನವರು ಅದನ್ನು ನಮ್ಮ ಸ್ಥಳೀಯ ಸಂಸ್ಥೆಗಳಿಂದ ಕೊಡಿಸುತ್ತಿದ್ದಾರೆ. ಈ ಇಂದಿರಾ ಕ್ಯಾಂಟಿನ್ ನಲ್ಲಿ ನೀವು ಹೋಗಿ ಒಂದು ಪ್ಲೇಟ್ ತಿಂಡಿ ತಿನ್ನಲು ಐದು ರೂಪಾಯಿ ಕೊಟ್ಟು ಟೋಕನ್ ಪಡೆದುಕೊಂಡರೆ ಅವರಿಗೆ 35 ರೂಪಾಯಿ ಕೊಡುವುದು ನಾವು ಮತ್ತು ನೀವು ಅಂದರೆ ನಮ್ಮ ಮಂಗಳೂರು ಮಹಾನಗರ ಪಾಲಿಕೆ. ನಿಮಗೆ ಒಂದು ಪ್ಲೇಟ್ ನ ಅಂದಾಜಿನಲ್ಲಿ ನೋಡಿದರೆ ಇದು ಅಷ್ಟು ದೊಡ್ಡ ಮೊತ್ತದಂತೆ ಕಾಣುವುದಿಲ್ಲ. ಆದರೆ ಅದೇ ಒಂದು ಸಲಕ್ಕೆ 500 ಜನರಿಗೆ 35 ರೂಪಾಯಿಯಂತೆ ಮಂಗಳೂರು ಮಹಾನಗರ ಪಾಲಿಕೆಯ ಐದು ಕ್ಯಾಂಟೀನ್ ಗಳಲ್ಲಿ 365 ದಿನ ನಡೆಯುವ ಈ ಊಟ, ತಿಂಡಿಯ ವ್ಯವಹಾರವನ್ನು ಲೆಕ್ಕ ಹಾಕಿದರೆ ನಮ್ಮ ಪಾಲಿಕೆ ಇದಕ್ಕಾಗಿ ಖರ್ಚು ಮಾಡುವ ಹಣ ಎಷ್ಟು ಗೊತ್ತೆ ಮೂವತ್ತೊಂದು ಕೋಟಿಯ ಒಂಭತ್ತು ಲಕ್ಷದ ಮೂವತ್ತೇಳು ಸಾವಿರ ಐನೂರು ರೂಪಾಯಿ (31,937,500). ಹೆಸರಿಗೆ ಯೋಜನೆ ರಾಜ್ಯ ಸರಕಾರದ್ದು, ಅದಕ್ಕೆ ಅವರ ಅಜ್ಜಿ ಇಂದಿರಾ ಗಾಂಧಿಯವರ ಹೆಸರು. ಹಣ ಕೊಡುವುದು ಮಾತ್ರ ನಮ್ಮ ಸ್ಥಳೀಯ ಸಂಸ್ಥೆಗಳು ಅಂದರೆ ನಮ್ಮ ಊರಿನಲ್ಲಿರುವ ಐದು ಕ್ಯಾಂಟೀನ್ ಗಳಿಗೆ ಮಂಗಳೂರು ಮಹಾನಗರ ಪಾಲಿಕೆ.
ನಮ್ಮ ಊರಿನವರ ಹೆಸರು ಯಾಕಿಲ್ಲ…
ಒಂದು ವೇಳೆ ನಾವೇ ನಮ್ಮ ತೆರಿಗೆಯ ಹಣದಿಂದ ಊಟ ತಿಂಡಿ ಮಾಡುವುದಾದರೆ ನಿಮ್ಮ ಪಕ್ಷದ ನಾಯಕಿಯಾಗಿದ್ದವರ ಹೆಸರು ಯಾಕೆ? ಕಾಂಗ್ರೆಸ್ ಪಕ್ಷಕ್ಕೆ ಮೈಲೇಜ್ ಸಿಗುವುದಾದರೆ ನಮ್ಮ ಸ್ಥಳೀಯ ಸಂಸ್ಥೆಗಳ ಹಣ ಯಾಕೆ? ನಮ್ಮ ಊರಿನವರದ್ದೇ ಯಾರಾದಾದರೂ ಹೆಸರು ಇಡಬಹುದಿತ್ತು. ರಾಣಿ ಅಬ್ಬಕ್ಕಳ ಹೆಸರು ಇಡಬಹುದು, ಅವರು ಕೂಡ ಮಹಿಳೆ, ಇಂದಿರಾಗಾಂಧಿಯವರಿಗಿಂತ ಹೆಚ್ಚು ಹೋರಾಟ ಮಾಡಿದ ಹೆಣ್ಣುಮಗಳು. ರಾಣಿ ಅಬ್ಬಕ್ಕ ಕ್ಯಾಂಟೀನ್ ಇಟ್ಟರೆ ನಮಗೆ ಖುಷಿಯಾಗುತ್ತಿತ್ತು. ಇನ್ನು ಯು.ಎಸ್.ಮಲ್ಯ ಅವರ ಹೆಸರು ಇಡಬಹುದಿತ್ತು. ಅವರು ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ದುಡಿದವರು. ವಿಮಾನ ನಿಲ್ದಾಣ, ಬಂದರು ನಮಗೆ ತಂದದ್ದು ಅವರು. ಇನ್ನು ಎಷ್ಟೋ ಜನರಿದ್ದರು, ಕಲೆ, ಸಾಹಿತ್ಯ, ಸಂಸ್ಕೃತಿಗೆ ನಮ್ಮ ಊರಿನಲ್ಲಿ ಕೆಲಸ ಮಾಡಿದ ಯಾರದಾದರೂ ಹೆಸರು ಇಡಬಹುದಿತ್ತು. ಇಟ್ಟಿಲ್ಲ. ಇಟ್ಟಿದ್ದು ಇಂದಿರಾ ಗಾಂಧಿಯವರ ಹೆಸರು. ಅವರು ಲೋಕಸಭಾ ಚುನಾವಣೆಯಲ್ಲಿ ಸೋತಾಗ ಉಪಚುನಾವಣೆಯಲ್ಲಿ ಗೆಲ್ಲಲು ಚಿಕ್ಕಮಗಳೂರಿಗೆ ಬರುವ ಸಂದರ್ಭದಲ್ಲಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿದು ಇಲ್ಲಿ ಯಾರದ್ದೋ ಮನೆಯಲ್ಲಿ ಚಾ ಕುಡಿದು ಹೋಗಿರುವುದಷ್ಟೇ ಅವರಿಗೂ ನಮಗೂ ಇರುವ ಭಾವನಾತ್ಮಕ ನಂಟು.
ಒಂದು ವೇಳೆ ಸುಮಾರು ಆ ಮೂವತ್ತೊಂದು ಕೋಟಿಯನ್ನು ರಾಜ್ಯ ಸರಕಾರವೇ ತನ್ನ ಬೊಕ್ಕಸದಿಂದ ಕೊಟ್ಟರೂ ಆಗ ಬೆಂಗಳೂರಿನಲ್ಲಾದರೆ ಆ ನಗರಕ್ಕೆ ಸೇವೆ ಸಲ್ಲಿಸಿದವರ ಹೆಸರು, ಮೈಸೂರಾದರೆ ಆ ಊರಿನಲ್ಲಿ ಸೇವೆ ಸಲ್ಲಿಸಿದವರ ಹೆಸರು, ಹೀಗೆ ಆಯಾ ಊರಿನಲ್ಲಿ ಯಾರ್ಯಾರು ತಮ್ಮ ತನು, ಮನ, ಧನವನ್ನು ಊರಿನ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿದ್ದಾರೋ ಅವರ ಹೆಸರು ಇಡಬೇಕಿತ್ತು. ಏಕೆಂದರೆ ಅಂತಿಮವಾಗಿ ಇದು ಕಾಂಗ್ರೆಸ್ ಪಕ್ಷದ ಹಣದಿಂದ ನಡೆಯುವ ಕ್ಯಾಂಟೀನ್ ಅಲ್ಲ. ಇನ್ನು ಇಂದಿರಾ ಕ್ಯಾಂಟಿನ್ ನಿಂದ ನಮ್ಮ ಎಷ್ಟು ಜನರಿಗೆ ಅನುಕೂಲ ಇದೆ? ಇದರ ಹಿಂದಿರುವ ಗೋಲ್ ಮಾಲ್ ಗಳೇನು? ಎಲ್ಲವನ್ನು ನಾಳೆ ಬರೆದು ಮುಗಿಸುತ್ತೇನೆ
Leave A Reply