ಒಳಗೆ ಸಾಂಬಾರಿಗೆ ಉಪ್ಪು ಕಡಿಮೆಯಾದರೂ ಪರವಾಗಿಲ್ಲ, ಹೊರಗೆ ಇಂದಿರಾ ಫೋಟೋ ದೊಡ್ಡದಿರಬೇಕು!!
ಮಂಗಳೂರು ಮಹಾನಗರ ಪಾಲಿಕೆಗೆ ನಾವು ತೆರಿಗೆ ಕಟ್ಟುವುದು ಅದು ನಮ್ಮ ಊರನ್ನು ಅಭಿವೃದ್ಧಿ ಮಾಡಲಿ ಎನ್ನುವ ಕಾರಣಕ್ಕೆ. ಪಾಲಿಕೆಗೆ ವಿವಿಧ ಕಡೆಗಳಿಂದ ಆದಾಯ ಬರುವುದು ಅಭಿವೃದ್ಧಿ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎನ್ನುವ ಕಾರಣಕ್ಕೆ. ಆದರಿಂದ ಅಲ್ಲಿಗೆ ಬರುವ ಒಂದೊಂದು ಪೈಸೆಯೂ ಹೋಗಬೇಕಾಗಿರುವುದು ನಮ್ಮ ಊರಿನ ಸಮಗ್ರ ಅಭಿವೃದ್ಧಿಗೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಆಗುತ್ತಿರುವುದು ಏನು? ಜನರ ತೆರಿಗೆಯ ಹಣ ತಮ್ಮ ಪಕ್ಷದ ಇಮೇಜ್ ಉತ್ತಮ ಪಡಿಸಲು ಪೋಲು ಮಾಡುವುದು ನಡೆಯುತ್ತಾ ಇದೆ. ಅಷ್ಟಕ್ಕೂ ಇದರ ಅಗತ್ಯ ಇದ್ದದ್ದು ಸ್ವತ: ಸಿದ್ಧರಾಮಯ್ಯನವರಿಗೆ. ಅವರಿಗೆ ಅರ್ಜೆಂಟಾಗಿ ಕಾಂಗ್ರೆಸ್ ಹೈಕಮಾಂಡ್ ಅನ್ನು ಸಂತೃಪ್ತಿ ಪಡಿಸಬೇಕಿತ್ತು. ಈ ಬಾರಿಯ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ಸೆಳೆಯಬೇಕಿತ್ತು. ಅದಕ್ಕಾಗಿ ರಾಹುಲ್ ಗಾಂಧಿಯವರನ್ನು ಸಂತುಷ್ಟಿಗೊಳಿಸಬೇಕಿತ್ತು. ಏನು ಮಾಡಿದರೆ ರಾಹುಲ್ ಗಾಂಧಿ ಖುಷಿಯಾಗುತ್ತಾರೆ ಎಂದು ಲೆಕ್ಕ ಹಾಕಿದ ಸಿದ್ಧರಾಮಯ್ಯ ಇಂದಿರಾ ಗಾಂಧಿಯವರ ಹೆಸರಿನಲ್ಲಿ ರಾಜ್ಯದೆಲ್ಲೆಡೆ ಕ್ಯಾಂಟೀನ್ ತೆರೆಯೋಣ. ಅದನ್ನು ಉದ್ಘಾಟಿಸಲು ರಾಹುಲ್ ಗಾಂಧಿಯವರನ್ನು ಕರೆಯೋಣ. ಕ್ಯಾಂಟಿನ್ ನಲ್ಲಿ ಚಟ್ನಿಗೆ ಉಪ್ಪು ಹಾಕದಿದ್ದರೂ ಪರವಾಗಿಲ್ಲ, ಹೊರಗೆ ಇಂದಿರಾ ಗಾಂಧಿಯವರ ದೊಡ್ಡ ಫೋಟೋ ನಿಲ್ಲಿಸೋಣ. ಅದನ್ನು ನೋಡಿ ರಾಹುಲ್ ಗಾಂಧಿ ಫುಲ್ ಖುಷ್ ಆಗುತ್ತಾರೆ. ಅವರ ಕೈಯಲ್ಲಿ ಉದ್ಘಾಟಿಸಿ ಕಳುಹಿಸೋಣ. ನಾನು ದೊಡ್ಡ ಯೋಜನೆ ಮಾಡಿದ್ದೇನೆ ಎಂದು ಅವರು ಅಂದುಕೊಳ್ಳುತ್ತಾರೆ. ಈ ಗಾಂಧಿ ಫ್ಯಾಮಿಲಿಯವರಿಗೆ ಅವರ ಅಜ್ಜ, ಅಜ್ಜಿಯ ಹೆಸರು, ಫೋಟೋ ಇದ್ದರೆ ಆಯಿತು, ಯೋಜನೆ ಏನು ಎಂದು ಅವರು ಕ್ಯಾರ್ ಮಾಡುವುದಿಲ್ಲ ಎಂದು ಸಿದ್ಧರಾಮಯ್ಯ ಅಂದುಕೊಂಡು ಬಿಟ್ಟರು. ಅದರ ನಂತರವೇ ಅವರು ಈ ಯೋಜನೆಗೆ ಚಾಲನೆ ಕೊಟ್ಟಿದ್ದು.
ಗುತ್ತಿಗೆ ಒಬ್ಬರಿಗೆ ಮಾತ್ರ….
ಹಾಗಂತ ಕೇವಲ ರಾಹುಲ್ ಗಾಂಧಿಯವರಿಗೆ ಖುಷಿ ಮಾಡಲಿಕ್ಕೆ ಅವರು ಈ ಯೋಜನೆ ಪ್ರಾರಂಭಿಸಿದ್ದಾರೆ ಎಂದು ಅಂದುಕೊಳ್ಳುವುದು ಬೇಡಾ. ಒಂದು ಕಡೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ತಮಗೆ ರಾಜ್ಯ ಕಾಂಗ್ರೆಸ್ ನಲ್ಲಿ ಕೊಟ್ಟ ಸಂಪೂರ್ಣ ಸ್ವಾತಂತ್ರ್ಯಕ್ಕೆ ಕೃತಜ್ಞತೆಯ ರೂಪದಲ್ಲಿ ಇಂದಿರಾ ಹೆಸರು ಕ್ಯಾಂಟಿನಿಗೆ ಇಟ್ಟ ಸಿದ್ಧರಾಮಯ್ಯ ಕರ್ನಾಟಕ ರಾಜ್ಯದಲ್ಲಿ ಎಲ್ಲೆಲ್ಲಿ ಇಂದಿರಾ ಕ್ಯಾಂಟಿನ್ ಆಗಬೇಕೋ ಅಲ್ಲೆಲ್ಲ ಒಬ್ಬನೇ ಗುತ್ತಿಗೆದಾರನಿಗೆ ಕ್ಯಾಂಟೀನ್ ಕಟ್ಟಲು ಕಾಂಟ್ರಾಕ್ಟ್ ಕೊಟ್ಟಿದ್ದಾರೆ. ಒಟ್ಟು 400 ಕ್ಯಾಂಟೀನ್ ಗಳಿಗೆ ಒಬ್ಬನೇ ಒಬ್ಬ ವ್ಯಕ್ತಿಗೆ ಗುತ್ತಿಗೆ ಕೊಟ್ಟಿರುವುದು ಏನನೂ ಸೂಚಿಸುತ್ತದೆ ಎನ್ನುವುದು ಪ್ರತ್ಯೇಕ ಹೇಳಬೇಕಾಗಿಲ್ಲ. ಬಹುಶ: ಸೊನ್ನೆಗಳು ಕಡಿಮೆ ಬೀಳಬಹುದಾದಷ್ಟು ದೊಡ್ಡ ಹಗರಣ ಇಲ್ಲಿ ಅಡಕವಾಗಿದೆ ಎನ್ನುವುದನ್ನು ಮತ್ತೆ ಹೇಳುವ ಅವಶ್ಯಕತೆ ಖಂಡಿತ ಜನರಿಗಿಲ್ಲ. ಹೇಗಿದೆ ಐಡಿಯಾ? ಇಂದಿರಾ ಕ್ಯಾಂಟೀನ್ ಕಟ್ಟಡಗಳ ನಿರ್ಮಾಣದ ಗುತ್ತಿಗೆ ಕಮೀಷನ್ ತಮ್ಮ ಕಿಸೆಗೆ ಹೋಗುತ್ತಿದ್ದರೆ ಕ್ಯಾಂಟೀನ್ ಆಹಾರದ ಖರ್ಚು ಸ್ಥಳೀಯ ಸಂಸ್ಥೆಗಳ ತಲೆಗೆ ಕಟ್ಟಿ ಅತ್ತ ರಾಹುಲ್ ಗಾಂಧಿಯವರನ್ನು ಖುಷಿಗೊಳಿಸಲು ಅವರಜ್ಜಿಯ ಫೋಟೋ ಹೆಸರು ಹಾಕಿಸಿ ಸಿದ್ಧರಾಮಯ್ಯ ಏಕಕಾಲದಲ್ಲಿ ಒಂದೇ ಸೂಟ್ ಕೇಸ್ ಗೆ ಮೂರು ಬಾಗಿಲು ಇಟ್ಟಿದ್ದಾರೆ.
ಐನೂರಲ್ಲಿ ಎಷ್ಟು ಉಳಿಯುತ್ತದೆ…
ಇನ್ನು ಪ್ರತಿ ಇಂದಿರಾ ಕ್ಯಾಂಟೀನ್ ನಲ್ಲಿ ಒಂದು ಹೊತ್ತಿಗೆ ಐನೂರು ಜನ ಆಹಾರ ಸೇವಿಸುತ್ತಾರೆ ಎನ್ನುವ ಗ್ಯಾರಂಟಿ ಕೊಡುವುದು ಯಾರು? ಮಂಗಳೂರಿನ ಆಯಕಟ್ಟಿನ ಸ್ಥಳಗಳಲ್ಲಿ ನಿಂತಿರುವ ಇಂದಿರಾ ಕ್ಯಾಂಟೀನ್ ಗಳು ಇಂತಿಷ್ಟೇ ಸಮಯಕ್ಕೆ ತೆರೆದು ಇಂತಿಷ್ಟೇ ಸಮಯಕ್ಕೆ ಕೌಂಟರ್ ಮುಚ್ಚುತ್ತವೆ. ಅಷ್ಟರೊಳಗೆ ಐನೂರು ಜನ ಬಂದು ಆಹಾರ ತೆಗೆದುಕೊಂಡರು ಎನ್ನುವುದಕ್ಕೆ ಸಾಕ್ಷಿ ಏನು? ಮುನ್ನೂರು ಟೋಕನ್ ಹೋದರೂ ಐನೂರು ಜನರಿಗೆ ಉಪಹಾರ ಕೊಟ್ಟಿದ್ದೇವೆ ಎಂದರೆ ಬಾಕಿಯ 200 ಗುಣಿಸು 35 ಅಂದರೆ ಎಷ್ಟಾಗುತ್ತದೆ? ಏಳು ಸಾವಿರ ಆಗುವುದಿಲ್ಲವಾ? ಒಂದು ಹೊತ್ತಿಗೆ ನಿವ್ವಳ ಏಳು ಸಾವಿರ ಕಣ್ಣು ಮುಚ್ಚಿ ಕಿಸೆಗೆ ಹೋಗುತ್ತೆ ಎಂದರೆ ಇದಕ್ಕಿಂತ ದೊಡ್ಡ ಲಾಟರಿ ಬೇರೆ ಇದೆಯಾ? ಆವತ್ತೇ ಡ್ರಾ, ಆವತ್ತೆ ಬಹುಮಾನ ಎನ್ನುವಂತೆ ಇವತ್ತು ಊಟಕ್ಕೆ ನೂರೇ ಜನ ಬಂದರಾ, ಉಳಿದ ನಾಲ್ಕು ನೂರು ಜನರ 35 ಗುಣಿಸು 400 ಹದಿನಾಲ್ಕು ಸಾವಿರ ರೂಪಾಯಿ ಗುತ್ತಿಗೆದಾರನ ಕಿಸೆಗೆ. ಅಂತವರು ಮತ್ತೆ ಕಾಂಗ್ರೆಸ್ಸಿನ ಸ್ಥಳೀಯ ಶಾಸಕರಿಗೆ ಸಹಾಯ ಮಾಡದೇ ಇರುತ್ತಾರಾ?
ಇನ್ನು ಸಿದ್ಧರಾಮಯ್ಯನವರೇ ನೀವು ಬಡವರಿಗೆ ಅನ್ನಭಾಗ್ಯ ಎನ್ನುವ ಹೆಸರಿನಲ್ಲಿ ಕೇಂದ್ರದ 29 ರೂಪಾಯಿ ತೆಗೆದುಕೊಂಡು ರಾಜ್ಯದ 3 ರೂಪಾಯಿ ಅಕ್ಕಿ ಕೊಡುತ್ತೀದ್ದಿರಲ್ಲ, ಅದರ ಮೇಲೆ ಪುನ: ಇಂದಿರಾ ಕ್ಯಾಂಟೀನ್ ಯಾಕೆ? ಅಷ್ಟಕ್ಕೂ ನಮ್ಮ ಮಂಗಳೂರಿನ ಇಂದಿರಾ ಕ್ಯಾಂಟೀನ್ ನಲ್ಲಿ ಹೆಚ್ಚು ಕಾಣಿಸಿಕೊಳ್ಳುವವರು ಉತ್ತರ ಕರ್ನಾಟಕದ ಮಂದಿ. ಅಂದರೆ ಸಿದ್ಧರಾಮಯ್ಯನವರಿಗೆ ಬೇಕಾದವರು. ಅವರು ಎಲ್ಲಿ ಹೋದರೂ ಊಟಕ್ಕೆ ತೊಂದರೆಯಾಗಬಾರದೆಂದು ಪುಕ್ಕಟೆ ಪ್ರಚಾರ ಬೇರೆ. ಅದು ಕೂಡ ಕಾಂಗ್ರೆಸ್ಸಿಗೆ ಮತ ಸೆಳೆಯುವ ತಂತ್ರ. ಒಂದೇ ವಾಕ್ಯದಲ್ಲಿ ಹೇಳಬೇಕಾದರೆ ಪಾಲಿಕೆ ದುಡ್ಡಿನಲ್ಲಿ ಸಿದ್ಧರಾಮಯ್ಯ ತಮ್ಮ ಹೆಸರನ್ನು ಮೆರೆಸೋದು ನೋಡಿದರೆ ಅದರೊಂದಿಗೆ ಹೈಕಮಾಂಡ್ ಅನ್ನು ಖುಷಿ ಇಟ್ಟಿದ್ದು ಕಂಡು ಖರ್ಗೆ, ಮೊಯಿಲಿ, ಆಸ್ಕರ್, ಮುನಿಯಪ್ಪ ನವರಂತಹ ಮೂಲ ಕಾಂಗ್ರೆಸ್ಸಿಗರು ನಾವು ಕೂಡ ಜಾತ್ಯಾತೀತ ಜನತಾದಳದಲ್ಲಿ ಇಂತದ್ದೆಲ್ಲ ಕಲಿತು ಬಂದಿದ್ದರೆ ಏನೋ ಆಗುತ್ತಿದ್ವಿ ಎಂದುಕೊಳ್ಳುತ್ತಿದ್ದಾರೆ!
Leave A Reply