ಕಾಶ್ಮೀರದಲ್ಲಿ ಕ್ರಿಯಾಶೀಲವಾದ ಐಸಿಸ್: ಮಹಿಳಾ ಸಂಘಟನೆಯ ಸಾಥ್
ದೆಹಲಿ: ಕಾಶ್ಮೀರ ಕಣಿವೆಯಲ್ಲಿ ಕಲ್ಲು ತೂರಾಟ, ಬಂದ್ ಸೇರಿ ದೇಶವಿದ್ರೋಹಿ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಲಗಾಮು ಹಾಕಿರುವ ಸುದ್ದಿ ಬಂದಿರುವಾಗಲೇ ಆಘಾತಕಾರಿ ಅಂಶವೊಂದನ್ನು ಕೇಂದ್ರ ಗೃಹ ಇಲಾಖೆ ಹೊರ ಹಾಕಿದೆ. ಕಾಶ್ಮೀರ ಕಣಿವೆಯಲ್ಲಿ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಐಸಿಸ್ ಭಯೋತ್ಪಾದಕ ಸಂಘಟನೆಯು ಕ್ರಿಯಾಶೀಲವಾಗಿದ್ದು, ಅದಕ್ಕೆ ಮಹಿಳಾ ಸಂಘಟನೆಯೊಂದು ಸಾಥ್ ನೀಡುತ್ತಿದೆ. ಇತ್ತೀಚೆಗೆ ಕೆಲವು ಕಡೆ ಐಸಿಸ್ ಪರ ಒಲವು ಹೊಂದುವಂತ, ಪ್ರಚೋಧನಕಾರಿ ಹೇಳಿಕೆಯುಳ್ಳ ಭಾಷಣಗಳನ್ನು ಮಾಡಲಾಗಿದೆ. ಈ ಕುರಿತು ಕಾಶ್ಮೀರ ಪೊಲೀಸರು ಎಚ್ಚರದಿಂದ ಇರಬೇಕು ಎಂದು ಕೇಂದ್ರ ಗೃಹ ಇಲಾಖೆ ಎಚ್ಚರಿಕೆ ನೀಡಿದೆ.
ಐಸಿಸ್ ಸಂಘಟನೆಯ ಮಹಿಳಾ ಸಂಸ್ಥೆ ದೌಲತ್ ಉಲ್ ಇಸ್ಲಾಂ ಸಂಘಟನೆಯೂ ಕಾಶ್ಮೀರದಲ್ಲಿ ಐಸಿಸ್ ಪರವಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೇ ಪ್ರಥಮ ಬಾರಿಗೆ ಕಾಶ್ಮೀರದಲ್ಲಿ ಮಹಿಳಾ ಸಂಘಟನೆಯೊಂದು ಐಸಿಸ್ ನಂತರ ಭಯೋತ್ಪಾದಕ ಸಂಘಟನೆಯೊಂದಿಗೆ ಕೈ ಜೋಡಿಸಿರುವ ಕುರಿತು ಮಾಹಿತಿ ಹೊರ ಬಿದ್ದಿದೆ.
ಅನಂತನಾಗ ಜಿಲ್ಲೆಯಲ್ಲಿ ಭಯೋತ್ಪಾದಕನೊಬ್ಬರ ಸೈನಿಕರ ಗುಂಡಿಗೆ ಸತ್ತು ಬಿದ್ದಾಗ ಆತನ ಕುಟುಂಬಕ್ಕೆ ದೌಲತ್ ಉಲ್ ಇಸ್ಲಾಂ ಸಂಘಟನೆಯು ಮುಖ್ಯಸ್ಥರು ಭೇಟಿ ನೀಡಿದ್ದರು. ಅಲ್ಲದೇ ಅವರಿಗೆ ಜಿಹಾದ್ ನ ಬಗ್ಗೆ ಜಾಗೃತಿ ಮೂಡಿಸುವ ನೆಪದಲ್ಲಿ ವಿಷ ಬೀಜ ಬಿತ್ತಿದ್ದರು. ಇದೇ ಘಟನೆಯಿಂದ ಆರಂಭವಾದ ಚಟುವಟಿಕೆಗಳು ಗೌಪ್ಯವಾಗಿ ಮತ್ತು ಬಹಿರಂಗವಾಗಿಯೇ ಮುಂದುವರಿಯುತ್ತಿವೆ ಎಂದು ಗೃಹ ಇಲಾಖೆ ತಿಳಿಸಿದೆ.
ಕಾಶ್ಮೀರದಲ್ಲಿ ಐಸಿಸ್ ಪರ ಒಲವು ಹೆಚ್ಚುತ್ತಿದ್ದು, ಇತ್ತೀಚೆಗೆ ಅನಂತನಾಗದ ಹಕ್ಕೋರಾ ಮತ್ತು ಶ್ರೀನಗರದ ಬಲ್ಹಾನ್ ನಲ್ಲಿ ಎನ್ ಕೌಂಟರ್ ವೇಳೆ ನಡೆದ ಘಟನೆಗಳೇ ಅನುಮಾನಕ್ಕೆ ಪುಷ್ಠಿ ನೀಡಿವೆ. ಹಕ್ಕೋರಾದಲ್ಲಿ ಕೊಲೆಯಾದ ಮೂವರು ಭಯೋತ್ಪಾದಕರು ಐಸಿಸ್ ನವರು ಎಂಬ ಮಾಹಿತಿಯನ್ನು ಕೇಂದ್ರ ಗೃಹ ಇಲಾಖೆ ಕಲೆ ಹಾಕಿದೆ.
Leave A Reply