ಭಾರತೀಯ ಪ್ರವಾಸಿಗಳಿಗೆ ರಾಯಭಾರಿ ಭೇಟಿಗೆ ಅವಕಾಶ ನೀಡದೇ ನಿಯಮ ಉಲ್ಲಂಘಿಸಿದ ಪಾಕ್
ದೆಹಲಿ: ಪಾಕಿಸ್ತಾನದಲ್ಲಿರುವ ಸಿಖ್ ಪುಣ್ಯಕ್ಷೇತ್ರಗಳ ಪ್ರವಾಸಕ್ಕೆ ಹೋಗಿರುವ ಭಾರತದ ಪ್ರವಾಸಿಗರಿಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳನ್ನು ಭೇಟಿಯಾಗಲು ಅವಕಾಶ ನೀಡದೇ ಪಾಕಿಸ್ತಾನ ಮತ್ತೊಮ್ಮೆ ತನ್ನ ಹೀನ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ಇನ್ನು ಈ ಕ್ರಮಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತದ 1800 ಯಾತ್ರಿಕರು ಏ.12ರಿಂದ ಪಾಕಿಸ್ತಾನದಲ್ಲಿ ಸಿಖ್ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ಪ್ರವಾಸಕ್ಕೆ ಹೋಗಿದ್ದರು. ಇವರೆಲ್ಲರೂ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಕಚೇರಿಯ ರಾಜತಾಂತ್ರಿಕ ಅಧಿಕಾರಿಗಳನ್ನು ಭೇಟಿ ನೀಡಲು ಭಯಸಿದ್ದಾರೆ. ಆದರೆ ಪಾಕಿಸ್ತಾನದ ಅಧಿಕಾರಿಗಳು ಭಾರತದ ರಾಜತಾಂತ್ರಿಕ ಅಧಿಕಾರಿಗಳ ಭೇಟಿಗೆ ಅವಕಾಶ ನೀಡದಿರುವುದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯ ‘ಸಿಖ್ ರ ಪ್ರಮುಖ ಹಬ್ಬ ಬೈಸಾಕಿ ನಿಮಿತ್ತ ಪಾಕಿಸ್ತಾನದಲ್ಲಿರುವ ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕೆ ಹೋಗಲಾಗಿತ್ತು. ಎಲ್ಲರೂ ಶೀಘ್ರದಲ್ಲಿ ಭಾರತಕ್ಕೆ ಮರಳಲಿದ್ದಾರೆ ಎಂದು ತಿಳಿಸಿದೆ. ಅಲ್ಲದೇ ಪಾಕಿಸ್ತಾನದ ಈ ನಡೆ ಭಾರತ ಮತ್ತು ಪಾಕ್ ಮಧ್ಯದ ರಾಜತಾಂತ್ರಿಕ ಸಂಬಂಧಕ್ಕೆ ಧಕ್ಕೆ ತರುವಂತಾದ್ದು, ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ವಿದೇಶಾಂಗ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಭಾರತ ಇದನ್ನು ಖಂಡಿಸಿದ್ದು, ಈ ಕುರಿತು ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದೆ ಎಂದು ವಿದೇಶಾಂಗ ಇಲಾಖೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಇತ್ತೀಚೆಗೆ ನಡೆದ ರಾಯಭಾರಿ ಕಚೇರಿಗಳ ಕುರಿತ ಸಂಘರ್ಷದ ನಂತರ ಇದು ಪ್ರಥಮ ಘಟನೆಯಾಗಿದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಪ್ರವಾಸಿಗರ ಭೇಟಿ ಕುರಿತ ನಿಯಮದ ಸ್ಪಷ್ಟ ಉಲ್ಲಂಘನೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Leave A Reply