ರಾಜಸ್ಥಾನ ಆಡಳಿತ ಸೇವೆ ಪರೀಕ್ಷೆ ಪಠ್ಯದಲ್ಲಿ ಸೇರಿದವು ಭಗವದ್ಗೀತೆಯ ಅಧ್ಯಾಯಗಳು!

ಜೈಪುರ: ಪ್ರತೀ ಭಾರತೀಯನೂ ಓದಬೇಕಾದ ಪುಸ್ತಕ ಹಾಗೂ ಧರ್ಮಗ್ರಂಥ ಎಂದರೆ ಅದು ಭಗವದ್ಗೀತೆ. ಆದರೆ ಆಧುನಿಕ ಪಠ್ಯಕ್ರಮ, ಸ್ಪರ್ಧಾತ್ಮಕ ಜಗತ್ತು, ಮಕ್ಕಳ ಮನಸ್ಥಿತಿ ಬದಲಾಗಿದ್ದು, ಬಹುತೇಕ ವಿದ್ಯಾರ್ಥಿಗಳು ಭಗವದ್ಗೀತೆ ಓದುವುದಿಲ್ಲ. ಅದರ ಸಂದೇಶ ಅರಿಯುವುದಿಲ್ಲ.
ಆದರೆ ಇದನ್ನು ಮನಗಂಡಿರುವ ರಾಜಸ್ಥಾನ ಸರ್ಕಾರ ಈಗ ತಾನು ನಡೆಸುವ ರಾಜಸ್ಥಾನ ಆಡಳಿತ ಸೇವೆ ಪರೀಕ್ಷೆಯಾದ ರಾಜಸ್ಥಾನ ಲೋಕಸೇವಾ ಆಯೋಗದ ಪಠ್ಯಕ್ರಮದಲ್ಲಿ ಭಗವದ್ಗೀತೆಯ ಅಧ್ಯಾಯಗಳನ್ನು ಸೇರಿಸಿದೆ.
ಹಾಗಂತ ಸುಖಾಸುಮ್ಮನೆ ಪಠ್ಯಕ್ರಮದಲ್ಲಿ ಭಗವದ್ಗೀತೆಯ ಅಧ್ಯಾಯಗಳನ್ನು ಸೇರಿಸಿಲ್ಲ. ಭಗವದ್ಗೀತೆಯಲ್ಲಿ ಆಡಳಿತ ಮತ್ತು ನಿರ್ವಹಣೆ ಕುರಿತು ಇರುವ ಅಂಶಗಳನ್ನು ಗುರುತಿಸಿ ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ.
ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮುಂದೆ ಅಧಿಕಾರಿಯಾದ ಬಳಿಕ ನಿರ್ವಹಣೆ ಹಾಗೂ ಆಡಳಿತದಲ್ಲಿ ದಕ್ಷತೆ ಕಾಪಾಡಿಕೊಳ್ಳಲಿ, ಭಗವದ್ಗೀತೆಯ ಸಾತ್ವಿಕ ವಿಚಾರಗಳನ್ನು ಅಭ್ಯರ್ಥಿಗಳನ್ನು ಅವುಗಳನ್ನು ಅಳವಡಿಸಿಕೊಂಡು ಯಶಸ್ವಿ ಅಧಿಕಾರಿಯಾಗಲಿ ಎಂಬ ದೃಷ್ಟಿಯಿಂದ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಪಠ್ಯಕ್ರಮದ ಆಡಳಿತ ಮತ್ತು ನಿರ್ವಹಣೆ ವಿಷಯದಲ್ಲಿ ಒಂದು ಘಟಕ ಸೇರಿಸಿದ್ದು, ಅದರಲ್ಲಿ ನಿರ್ವಹಣೆ ಮತ್ತು ಆಡಳಿತದಲ್ಲಿ ಭಗವದ್ಗೀತೆಯ ಪಾತ್ರ ಎಂಬ ಉಪ ಘಟಕವನ್ನು ಸೇರಿಸಲಾಗಿದೆ. ಅಷ್ಟೇ ಅಲ್ಲ, ಕುರುಕ್ಷೇತ್ರದಲ್ಲಿ ಯುದ್ಧ ಆರಂಭವಾಗುವ ಮುನ್ನ ಕೃಷ್ಣ ಮತ್ತು ಅರ್ಜುನನ ನಡುವೆ ನಡೆಯುವ ಕುರಿತು 18 ಅಧ್ಯಾಯಗಳನ್ನು ಸೇರಿಸಲಾಗಿದೆ.
ಒಟ್ಟಿನಲ್ಲಿ ಇಷ್ಟು ದಿನ ಭಗವದ್ಗೀತೆ ಎಂದರೆ ಅಷ್ಟು ದೊಡ್ಡ ಪುಸ್ತಕವನ್ನು ಯಾರು ಓದುತ್ತಾರೆ ಎಂಬ ನಿರ್ಲಕ್ಷ್ಯ ಮನೋಭಾವನೆ ತೊಲಗಿಸಲು ರಾಜಸ್ಥಾನ ಸರ್ಕಾರ ಆಡಳಿತ ಸೇವೆ ಪಠ್ಯದಲ್ಲಿ ಭಗವದ್ಗೀತೆ ಅಧ್ಯಾಯ ಸೇರಿಸಿದ್ದು, ಇದು ದಕ್ಷ ಅಧಿಕಾರಿಯಾಗಲು ಸಹಕರಿಸುವ ಜತೆಗೆ ಜೀವನದಲ್ಲಿ ಉತ್ತಮ ಮೌಲ್ಯ ಕಟ್ಟಿಕೊಡುವುದರಲ್ಲಿ ಎರಡು ಮಾತಿಲ್ಲ.
Leave A Reply