ಭಾರತದ ಧ್ವಜ ಹೊತ್ತು ಲಕ್ಷಾಂತರ ಕಿ.ಮೀ. ನಡೆಯುತ್ತಿರುವ ಈ ವ್ಯಕ್ತಿಯ ಆಶಯವೇನು ಗೊತ್ತಾ?
ಭಾರತ, ಭಾರತದ ಧ್ವಜ, ಭಾರತದ ಗೀತೆ ಎಂದರೆ ಪ್ರತಿ ದೇಶಭಕ್ತ ಭಾರತೀಯನ ರೋಮವೂ ಎದ್ದುನಿಲ್ಲುತ್ತದೆ ಎಂಬುದಕ್ಕೆ ನಿದರ್ಶನವೊಂದು ಸಿಕ್ಕಿದ್ದು, ಹರಿಯಾಣದ ವ್ಯಕ್ತಿಯೊಬ್ಬ ದೇಶದ ಜನರಲ್ಲಿ ಜಾಗೃತಿ ಮೂಡಿಸಲು ಭಾರತದ ಧ್ವಜ ಹೊತ್ತು ದೇಶಾದ್ಯಂತ ಲಕ್ಷಾಂತರ ಕಿ.ಮೀ. ಸಂಚರಿಸಿದ್ದಾನೆ.
ಹೌದು, 83 ವರ್ಷದ ಬಾಗಿಚ ಸಿಂಗ್ ಕಳೆದ 25 ವರ್ಷದಲ್ಲಿ ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 5.70 ಲಕ್ಷ ಕಿ.ಮೀ. ನಡೆದಿದ್ದಾರೆ. ಸುಮ್ಮನೆ ಹೆಸರಿಗಾಗಿ, ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಸಿಂಗ್ ಹೀಗೆ ಮಾಡಿಲ್ಲ.
ಬದಲಾಗಿ ದೇಶಾದ್ಯಂತ ಯುವಕರು ತಂಬಾಕು, ಡ್ರಗ್ಸ್, ಮದ್ಯ ಸೇವನೆಯ ದಾಸರಾಗಿರುವುದನ್ನು ಕಂಡು ಬೇಸರಗೊಂಡ ಈತ 1993ರಿಂದ ಇದುವರೆಗೆ ದೇಶಾದ್ಯಂತ ಕಾಲ್ನಡಿಗೆ ಮೂಲಕ ಸಂಚರಿಸಿ ಜಾಗೃತಿ ಮೂಡಿಸಿದ್ದಾರೆ.
ಅದಕ್ಕಾಗಿ ಇವರು ಬಳಸಿಕೊಂಡಿರುವ ಅಸ್ತ್ರ ದೇಶಪ್ರೇಮ. ಸುಮಾರು 90 ಕೆಜಿ ಭಾರದ, 15 ಅಡಿ ಉದ್ದದ ಕಂಬಗಳಿಗೆ ಭಾರತದ ಧ್ವಜ ಕಟ್ಟಿರುವ ಇವರು ಅದನ್ನು ಹೊತ್ತುಕೊಂಡು ಊರು ಊರು ಸುತ್ತುತ್ತಿದ್ದಾರೆ.
ದೇಶದ ಯುವಜನತೆ ಚಟಗಳ ದಾಸರಾದರೆ ಸದೃಢ ಭಾರತದ ಸೃಷ್ಟಿಯಾಗುವುದು ಹೇಗೆ ಎಂಬ ಪ್ರಶ್ನೆ ಮೂಡಿತು. ಹಾಗಾಗಿ ಇವರೆಲ್ಲರಿಗೂ ಜಾಗೃತಿ ಮೂಡಿಸಲು ನನ್ನ ಇಡೀ ಜೀವನವನ್ನೇ ಮುಡಿಪಾಗಿಟ್ಟು ದೇಶಾದ್ಯಂತ ಸಂಚರಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಯುವಕರು ಚಟಗಳ ದಾಸರಾಗಬಾರದು ಎಂಬುದೇ ನನ್ನ ಆಶಯ ಎನ್ನುತ್ತಾರೆ ಬಾಗಿಚ ಸಿಂಗ್.
ತಲೆ ನೋವು ಬಂದರೆ ನಾಲ್ಕು ದಿನ ರಜೆ ಹಾಕುವ ನಾವು, ಸಿಗರೇಟು, ಹಾಲ್ಕೋಹಾಲ್ ಎಂದು ಆರೋಗ್ಯ ಕೆಡಿಸಿಕೊಳ್ಳುವ ನಾವು, ಅರ್ಧ ಕಿಲೋ ಮೀಟರ್ ದೂರ ಎಂದರೂ ಆಟೋ ಹಿಡಿಯುವ ನಾವು, ನಮಗಾಗಿ ಲಕ್ಷಾಂತರ ಕಿಲೋ ಮೀಟರ್ ಕಾಲ್ನಡಿಗೆಯಲ್ಲೆ ಸಂಚರಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರಿಗೊಂದು ಸಲಾಮ್ ಹೇಳೋಣ, ಅವರ ಆಶಯ ಪಾಲಿಸೋಣ.
Leave A Reply