ಕ್ರಿಶ್ಚಿಯನ್ನರ ಪವಿತ್ರ ಸ್ಥಳದಲ್ಲಿ ಮೊಳಗಲಿದೆ ಹಿಂದೂ ಸಂತನ ಉಪನ್ಯಾಸ
ವಿಜಯಪುರ: 1893 ಜುಲೈ 30 ರಂದು ಚಿಕ್ಯಾಗೋದಲ್ಲಿ ಸ್ವಾಮೀ ವಿವೇಕಾನಂದರು ಮೊಳಗಿಸಿದ ಹಿಂದೂ ಧರ್ಮದ ವಿಶ್ವಭಾತೃತ್ವದ ಧ್ವನಿ ಇಂದಿಗೂ ವಿಶ್ವಾದ್ಯಂತ ಅನುರಣಿಸುತ್ತಿದೆ. ಹಿಂದೂತ್ವದ ಧ್ವನಿಗೆ ಕಿವಿಗೊಟ್ಟು ಕೇಳುವವರು ಸದಾ ಇರುತ್ತಾರೆ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದ್ದು, ಅಂದು ಸ್ವಾಮಿ ವಿವೇಕಾನಂದರು ಬಿತ್ತಿದ್ದ ಬೀಜ ಇಂದಿಗೂ ಫಲ ನೀಡುತ್ತಿದೆ. ಅದಕ್ಕೆ ಸಾಕ್ಷಿ ಪ್ರಪ್ರಥಮ ಬಾರಿಗೆ ಕ್ರಿಶ್ಚಿಯನ್ನರ ಪವಿತ್ರ ಸ್ಥಳ ವ್ಯಾಟಿಕನ್ ಚರ್ಚ್ ನಲ್ಲಿ ನಡೆಯಲಿರುವ ಅಂತರ್ ಧರ್ಮಿಯರ ವಿಶ್ವಸಮ್ಮೇಳನದಲ್ಲಿ ರಾಮಕೃಷ್ಣ ಆಶ್ರಮದ ಸಂತ ಸ್ವಾಮಿ ನಿರ್ಭಯಾನಂದಜೀ ಅವರಿಗೆ ಹಿಂದೂ ಧರ್ಮದ ಪ್ರತಿನಿಧಿಯಾಗಿ ಪಾಲ್ಗೊಳ್ಳುವ ಅವಕಾಶ ದೊರಕಿದೆ.
ಗದಗ ಮತ್ತು ವಿಜಯಪುರ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿರುವ ಸ್ವಾಮಿ ನಿರ್ಭಯಾನಂದಜೀ ಅವರು ವ್ಯಾಟಿಕನ್ ಚರ್ಚ್ ನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಭಾಗವಹಿಸುವ ಪ್ರಥಮ ಭಾರತೀಯ ಸನ್ಯಾಸಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸ್ವಾಮೀಜಿ ‘ದಿ ಧರ್ಮ ಆ್ಯಂಡ್ ದಿ ಲೋಗೋಸ್’ ಎಂಬ ವಿಷಯದ ಕುರಿತು ಅರ್ಧ ಗಂಟೆ ಉಪನ್ಯಾಸ ನೀಡಲಿದ್ದು, ನಂತರ ಒಂದು ಗಂಟೆ ಅದೇ ವಿಷಯದ ಕುರಿತು ಸಂವಾದ ನಡೆಸಲಿದ್ದಾರೆ.
ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳನ್ನು ಅರಿತಿರುವ ನಿರ್ಭಯಾನಂದ ಜೀ ಹಿಂದೂ ಧರ್ಮದ ಬಗ್ಗೆ ಅಗಾಧವಾದ ಪಾಂಡಿತ್ಯವನ್ನು ಸಾಧಿಸಿದ್ದಾರೆ. ಅಲ್ಲದೇ ದೇಶ ವಿದೇಶಗಳಲ್ಲಿ ಹಿಂದೂ ಧರ್ಮದ ಕುರಿತು ಜಾಗೃತಿ ಮೂಡಿಸುವ ಉಪನ್ಯಾಸಗಳನ್ನು ನೀಡಿದ್ದಾರೆ. ಹಿಂದೂ ಧರ್ಮದ ಕುರಿತು ಆಳ ಜ್ಞಾನವನ್ನು ಸ್ವಾಮೀಜೀ ಹೊಂದಿದ್ದಾರೆ.
Leave A Reply