ಚುನಾವಣೆಗೂ ಐದು ದಿನದ ಮೊದಲು ಮಂಗಳೂರಿನಲ್ಲಿ ಮೋದಿ ಮೋಡಿ, ಮಾಡಲಿದ್ದಾರೆ ಅಬ್ಬರದ ಪ್ರಚಾರ
ರಾಜ್ಯದಲ್ಲಿ ಬೇಸಗೆ ಬಿಸಿಲಿಗಿಂತ ಚುನಾವಣೆ ಕಾವೇ ಜಾಸ್ತಿ ಇದೆ ಎನ್ನುವಷ್ಟರ ಮಟ್ಟಿಗೆ ಚುನಾವಣೆ ರಂಗೇರಿದೆ. ಮೂರೂ ಪಕ್ಷಗಳು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಡಳಿತ ವಿರೋಧಿ ಅಲೆ ತಲೆನೋವಾಗಿದ್ದರೆ, ಜೆಡಿಎಸ್ ಗೆ ಅಸ್ತಿತ್ವದ ಪ್ರಶ್ನೆಯಾಗಿದೆ. ಅತ್ತ ಬಿಜೆಪಿ ಈ ಬಾರಿ ಗೆಲುವು ನಮ್ಮದೇ ಎಂದು ಆತ್ಮವಿಶ್ವಾಸದಲ್ಲಿದ್ದಾರೆ. ಜನಬೆಂಬಲವೂ ಮೇಲ್ನೋಟಕ್ಕೆ ಬಿಜೆಪಿಗೇ ಇದೆ ಎಂಬುದು ಕಾಣುತ್ತಿದೆ.
ಇದಕ್ಕೆ ರಾಜ್ಯದಲ್ಲಿ ಯಡಿಯೂರಪ್ಪನವರಿಗೆ ಇರುವ ಬೆಂಬಲ, ಚುನಾವಣಾ ಚಾಣಾಕ್ಯ ಅಮಿತ್ ಷಾ ಬಿಡುವಿಲ್ಲದ ಪ್ರವಾಸ, ನರೇಂದ್ರ ಮೋದಿ ಅವರ ಅಲೆಯೇ ಕಾರಣ ಎಂಬುದು ರಾಜಕೀಯ ತಜ್ಞರ ಅಂಬೋಣ.
ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಚುನಾವಣೆಗೆ ಐದು ದಿನ ಮೊದಲು ಮಂಗಳೂರಿನಲ್ಲಿ ಪ್ರಚಾರ ನಡೆಸಲಿದ್ದು, ಕರಾವಳಿಯಲ್ಲಿ ಈ ಬಾರಿ ಬಿಜೆಪಿ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಲು ಈ ಪ್ರಚಾರ ಸಹಕಾರಿಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಆದಾಗ್ಯೂ ಕರಾವಳಿಯಲ್ಲಿ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗೆ ಐದು ದಿನ ಮೊದಲು, ಅಂದರೆ ಏಪ್ರಿಲ್ 7ರಂದು ಮಂಗಳೂರಿಗೆ ಆಗಮಿಸಲಿದ್ದು, ಅಬ್ಬರದ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದ್ದು, ಈ ಭಾಗದ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಜನರಲ್ಲಿ ನಿರೀಕ್ಷೆ ಹುಟ್ಟಿದೆ.
ಮೇ 8ರಂದು ಸಹ ಮೋದಿ ಅವರು ಮಂಗಳೂರಿನ ವಿವಿಧ ಭಾಗಗಳಲ್ಲಿ ಮತಯಾಚನೆ, ರ್ಯಾಲಿ ನಡೆಸಲಿದ್ದು, ಸ್ಟಾರ್ ಪ್ರಚಾರಕರಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಶತಾಯ ಗತಾಯ ಈ ಬಾರಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಕನಸು ಹೊತ್ತಿರುವ ಬಿಜೆಪಿಗೆ ಮೋದಿ ಭೇಟಿ ಮತ್ತಷ್ಟು ಶಕ್ತಿ ತುಂಬಲಿದೆ ಎಂದೇ ಹೇಳಲಾಗುತ್ತಿದೆ.
Leave A Reply