ದೇಶದ ಪುರಾತನ ಶಿಕ್ಷಣ ಪದ್ಧತಿಗೆ ಜಾಗತಿಕ ಸಮಸ್ಯೆ ಬಗೆಹರಿಸುವ ಶಕ್ತಿ ಇದೆ ಎಂದಿದ್ದು ಯಾರು ಗೊತ್ತೇ?
ನವದೆಹಲಿ: ಭಾರತೀಯ ಸಂಸ್ಕೃತಿ, ಆಚಾರ, ವಿಚಾರ, ನಡೆ-ನುಡಿ, ಉಡುಗೆ-ತೊಡುಗೆ, ಜ್ಞಾನ ಸಂಪತ್ತು ಎಂದರೆ ಇಡೀ ವಿಶ್ವವೇ ತಲೆದೂಗುತ್ತದೆ. ಮೆಚ್ಚುಗೆಯ ಮಾತು ಕೇಳಿಬರುತ್ತವೆ. ಆದರೂ ಭಾರತದಲ್ಲಿರುವ ಕೆಲವು ಕುತ್ಸಿತ ಮನಸ್ಸುಗಳು ನಮ್ಮ ದೇಶದ ವಿರುದ್ಧವೇ ಮಾತನಾಡುತ್ತವೆ ಎಂಬುದೇ ಬೇಸರ.
ಆದರೇನಂತೆ, ಇತಿಹಾಸದ ಆರಂಭದ ದಿನಗಳಿಂದಲೇ ಭಾರತದ ಮೇಲೆ, ಭಾರತೀಯತೆಯ ಮೇಲೆ ಹಲವರು ದಾಳಿ ಮಾಡಿದರೂ ನಮ್ಮ ಖ್ಯಾತಿಯನ್ನು, ಸತ್ವಯುತ ವಿಚಾರ, ನಡೆ-ನುಡಿಯನ್ನು ಯಾರೂ ಅಲ್ಲಾಡಿಸಲು ಆಗಿಲ್ಲ.
ಇಂತಹ ಶ್ರೀಮಂತ ಸಂಸ್ಕೃತಿಯ ಹೆಗ್ಗಳಿಕೆಗೆ ಮುಕುಟವಿಟ್ಟಂತೆ ಟಿಬೆಟಿಯನ್ ಬೌದ್ಧ ಧರ್ಮ ಗುರು ದಲಾಯಿ ಲಾಮಾ ಮಾತನಾಡಿದ್ದು, ಭಾರತದ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಪುರಾತನ ಶಿಕ್ಷಣ ಪದ್ಧತಿಯ ಅಂಶಗಳನ್ನು ಸೇರಿಸಬೇಕು ಎಂದು ಸಲಹೆ ನೀಡಿದ್ದಾರೆ. ಆ ಮೂಲಕ ಪುರಾತನ ಭಾರತೀಯ ಶಿಕ್ಷಣದ ಹೆಗ್ಗಳಿಕೆ ಬಗ್ಗೆ ಉಲ್ಲೇಖಿಸಿದ್ದಾರೆ.
ಅಷ್ಟೇ ಅಲ್ಲ, ಜರೂರಾಗಿ ಭಾರತದ ಉನ್ನತ ಶಿಕ್ಷಣ ಪದ್ಧತಿಗೆ ಪುರಾತನ ಗುರುಕುಲ ಶಿಕ್ಷಣ ಪದ್ಧತಿಯ ಹಲವು ಅಂಶಗಳನ್ನು ಸೇರಿಸಬೇಕು. ಶೈಕ್ಷಣಿಕ ಪದ್ಧತಿಯ ಸುಧಾರಣೆಯ ಜತೆಗೆ ಜಾಗತಿಕ ತಾಪಮಾನ ಏರಿಕೆ ಹಾಗೂ ಯುದ್ಧಗಳ ವಿರುದ್ಧ ನಾವು ಮಾಡುತ್ತಿರುವ ಹೋರಾಟಕ್ಕೆ ಭಾರತದ ಪುರಾತನ ಶೈಕ್ಷಣಿಕ ಪದ್ಧತಿ ಸಹಕಾರಿಯಾಗುತ್ತದೆ ಎಂದು ದಲಾಯಿ ಹೇಳಿದ್ದಾರೆ.
ಜಾಗತಿಕ ಶಾಂತಿ ಮತ್ತು ಸೌಹಾರ್ದ ಸೃಷ್ಟಿಸುವಲ್ಲಿ ನೈತಿಕತೆ ಮತ್ತು ಸಂಸ್ಕೃತಿಯ ಪಾತ್ರ ಎಂಬ ಕುರಿತು ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪ್ರಸ್ತುತ ಜಾಗತಿಕವಾಗಿ ಕಾಡುತ್ತಿರುವ ಸಮಸ್ಯೆಗಳನ್ನು ನಿವಾರಣೆ ಮಾಡುವ ಶಕ್ತಿ ಭಾರತದ ಪುರಾತನ ಶೈಕ್ಷಣಿಕ ಪದ್ಧತಿಗಿದೆ. ಅದರಲ್ಲಿ ಅಡಗಿರುವ ಮೌಲ್ಯಗಳಿಂದ ಹೀಗೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
Leave A Reply