ನನ್ನ ಕೈ ಕಟ್ಟಿ, ಬಾಯಿ ಮುಚ್ಚಿಸಿದರೆ ಸತ್ಯ ಸಮಾಧಿಯಾಗಲ್ಲ!!
ಮಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರ ಕೊಡಲು ಮತ್ತು ಒಳಚರಂಡಿ ಯೋಜನೆಗಾಗಿ ನಮಗೆ ಅಂದರೆ ಮಂಗಳೂರಿಗೆ 380 ಕೋಟಿ ರೂಪಾಯಿ ಸಾಲವನ್ನು ಏಶಿಯನ್ ಡೆವಲಪ್ ಮೆಂಟ್ ಬ್ಯಾಂಕಿನವರು ನೀಡಿದ್ದರು. ಅವರು ಸಾಲ ಕೊಡುವಾಗ ಸುಮ್ಮನೆ ಕೊಡುವುದಿಲ್ಲ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿಯೇ ಕೊಡುತ್ತಾರೆ. ಹಾಗೆ 2026 ರವರೆಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24*7 ನೀರು ಕೊಡುತ್ತೇವೆ ಎಂದು ನಮ್ಮವರು ಭರವಸೆ ನೀಡಿ ಬ್ಲೂಪ್ರಿಂಟ್ ಕೊಟ್ಟು ಅಗತ್ಯ ಇರುವ ದಾಖಲೆ ಸಲ್ಲಿಸಿ ಸಾಲ ಪಡೆದಿದ್ದರು.
2026 ರವರೆಗೆ ಇಡೀ ದಿನ ಮಂಗಳೂರಿಗೆ ನೀರು ಕೊಡುವುದು ಬಿಡಿ, ಇನ್ನೂ 2018 ಅರ್ಧ ಮುಗಿದಿಲ್ಲ. ಮಂಗಳೂರಿನ ಅನೇಕ ವಾರ್ಡುಗಳಲ್ಲಿ ಎರಡು ದಿನಗಳಿಗೊಮ್ಮೆ ನಾಲ್ಕು ಗಂಟೆ ನೀರು ಬರುತ್ತದೆ. ಮಣ್ಣಗುಡ್ಡೆ, ಉರ್ವಾ, ಉರ್ವಾಸ್ಟೋರ್, ಅಶೋಕನಗರ, ಬೋಳುರು, ಬಿಕರ್ನಕಟ್ಟೆ ಸಹಿತ ಅನೇಕ ಕಡೆಗಳಲ್ಲಿ ನಿಮಗೆ ನಿತ್ಯ ನೀರು ಇಡೀ ದಿನ ಬರುತ್ತಾ ಎಂದು ಕೇಳಿ ನೋಡಿ, ಅವರು ಖಾಲಿ ತಂಬಿಗೆ ಹಿಡಿದು ನಿಮ್ಮನ್ನು ಓಡಿಸಿ ಬಂದಾರು. ಇದು ನಾನು ಯಾರ ವಿರುದ್ಧವೂ ಮಾಡುವ ಆರೋಪ ಅಲ್ಲ. ಯಾರ ವಿರುದ್ಧವೂ ಮಾಡುವ ಆಪಾದನೆ ಇಲ್ಲ. ಇದು ವಸ್ತುಸ್ಥಿತಿ. ಇಂಗ್ಲೀಷಿನಲ್ಲಿ ಫ್ಯಾಕ್ಟ್ ಎನ್ನುತ್ತಾರಲ್ಲ, ಹಾಗೆ. ಇದು ಜನರಿಗೆ ಗೊತ್ತಿರುವ ಮತ್ತು ಅನುಭವಿಸುತ್ತಿರುವ ಸಮಸ್ಯೆ.
ಜೋರು ಮಳೆ ಬಂದರೆ ಹೆದರುವುದು ನಾವು ಡ್ರೈನೇಜಿಗೆ…
ಇನ್ನು ಮಂಗಳೂರಿನಲ್ಲಿ ಒಂದು ಗಂಟೆ ಜೋರು ಮಳೆ ಬಂದರೆ ಏನಾಗುತ್ತದೆ ಎನ್ನುವುದನ್ನು ನಾವು ಮೊನ್ನೆಯ ಮಳೆಗಾಲದಲ್ಲಿಯೇ ನೋಡಿದ್ದೇವೆ. ಅದನ್ನು ಬಲ್ಮಠ, ಜ್ಯೋತಿ ಟಾಕೀಸ್ ಬಳಿ ಮೊಣಕಾಲಿನ ತನಕ ನೀರು ನಿಂತಾಗಲೇ ಗೊತ್ತಾಗಿದೆ. ಇನ್ನು ಪಾಲಿಕೆಯ ಹೃದಯಭಾಗದಲ್ಲಿಯೇ ಮಳೆಗಾಲದಲ್ಲಿ ಮ್ಯಾನ್ ಹೋಲ್ ಗಳು ಕಾರಂಜಿಗಳನ್ನು ನಮಗೆ ಕರುಣಿಸುತ್ತವೆ. ಮಳೆಗಾಲ ಏಕೆ, ಇವತ್ತು ಬಿಜೈಯಿಂದ ಕದ್ರಿಪಾರ್ಕಿನ ತನಕ ಹೋಗುವ ರಸ್ತೆಯಲ್ಲಿರುವ ಮ್ಯಾನ್ ಹೋಲ್ ಹೇಗೆ ಇತ್ತು ಎನ್ನುವುದನ್ನು ಕೆಲವರು ತಮ್ಮ ಸಾಮಾಜಿಕ ತಾಣಗಳಲ್ಲಿ ಫೋಟೋ ಹಾಕಿ ಸಾಬೀತುಪಡಿಸಿದ್ದಾರೆ. ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಆ ದಾರಿಯಲ್ಲಿ ಹೋದವರಿಗೆ ವಾಸ್ತವ ಗೊತ್ತಿರುತ್ತದೆ.
ಮಂಗಳೂರಿನ ಕುಡಿಯುವ ನೀರಿನ ವೈಫಲ್ಯ, ಒಳಚರಂಡಿಯ ವೈಫಲ್ಯವನ್ನು ಸೇರಿಸಿ ಸೆಟಲೈಟ್ ವಾಹಿನಿ ಬಿಟಿವಿ ಈ ಯೋಜನೆಗಳಲ್ಲಿ ನಡೆದಿರಬಹುದಾದ ಅವ್ಯವಹಾರ ಮತ್ತು ಕಳಪೆ ಕಾಮಗಾರಿಯ ಕುರಿತಂತೆ ಸುದ್ದಿ ಮಾಡಿತ್ತು. ಅದರಲ್ಲಿ ನನಗೆ ಅಲ್ಲಿಂದ ನೇರಪ್ರಸಾರದಲ್ಲಿ ಫೋನ್ ಬಂದು ಮಾತನಾಡಲು ವಿನಂತಿಸಿದ ಕಾರಣ ನಾನು ಈ ಬಗ್ಗೆ ಮಾತನಾಡಿದ್ದೇನೆ. ಅದರಲ್ಲಿ ಮೇಲೆ ಹೇಳಿದ ವಾಸ್ತವಾಂಶವನ್ನೇ ಹೇಳಿದ್ದೇನೆ. ಇದೇ ವಿಷಯವನ್ನು ಸುಮಾರು ಆರು ತಿಂಗಳ ಇದೇ ಸಿದ್ಧರಾಮಯ್ಯನವರ ಮಂತ್ರಿಮಂಡಲದ ಪ್ರಭಾವಿ ಸಚಿವ ರೋಶನ್ ಬೇಗ್ ಕೂಡ ಹೇಳಿದ್ದರು. ಮಂಗಳೂರಿಗೆ ಭೇಟಿಕೊಟ್ಟಿದ್ದ ಅವರು ಕುಡ್ಸೆಂಪ್ ಕಾಮಗಾರಿ ಕಳಪೆಯಾಗಿರುವುದು ಗಮನಕ್ಕೆ ತಮ್ಮ ಬಂದಿರುವಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೆ ಈ ಕಳಪೆ ಕಾಮಗಾರಿ ಅವ್ಯವಹಾರದಿಂದ ಕೂಡಿದ್ದು ಆ ಸಮಯದಲ್ಲಿದ್ದ ಅಧಿಕಾರಿಗಳು ಈಗ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಅಥವಾ ನಿವೃತ್ತರಾಗಿದ್ದರೂ ಅವರನ್ನು ಬಿಡುವುದಿಲ್ಲ. ಸಿಐಡಿ ತನಿಖೆಗೆ ಆದೇಶಿಸುತ್ತೇನೆ ಎಂದಿದ್ದರು. ಇದನ್ನೆಲ್ಲ ಸೇರಿಸಿಯೇ ನಾನು ಫ್ಯಾಕ್ಟ್ ಹೇಳಿದ್ದು. ಒಂದು ವೇಳೆ ನಾನು ಕತೆ ಕಟ್ಟಿ ಹೇಳಿದ್ದರೆ ಕಾಂಗ್ರೆಸ್ ಪಕ್ಷದ ಮುಖಂಡರೂ, ಸಚಿವರು ಆದ ರೋಶನ್ ಬೇಗ್ ಅವರು ಹೇಳಿದ್ದು ಸುಳ್ಳಾ?
ನನ್ನ ವಿರುದ್ಧ ತಡೆಯಾಜ್ಞೆ…
ಸದ್ಯ ಮಂಗಳೂರು ನಗರ ದಕ್ಷಿಣ ಶಾಸಕರು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ನನ್ನ ವಿರುದ್ಧ ಎಕ್ಸಪಾರ್ಟಿ ಸ್ಟೇ ಆರ್ಡರ್ ಆದೇಶ ತಂದಿದ್ದಾರೆ. ಎಕ್ಸಪಾರ್ಟಿ ಎಂದರೆ ಎದುರು ಪಾರ್ಟಿಯ ಕಕ್ಷಿದಾರರನ್ನು ಹೊರಗಿಟ್ಟು ಅಥವಾ ಅವರ ಗಮನಕ್ಕೆ ತರದೇ ಏಕಮುಖವಾಗಿ ಆದೇಶ ಬರುವುದು. ನನ್ನನ್ನು ಮತ್ತು ಖ್ಯಾತ ವೆಬ್ ಸೈಟ್ ತುಳುನಾಡು ನ್ಯೂಸ್ ಅನ್ನು ಪ್ರತಿವಾದಿಯನ್ನಾಗಿ ಮಾಡಿ ಶಾಸಕರ ಗೌರವಕ್ಕೆ(!) ದಕ್ಕೆಯಾಗುವ ಹಾಗೆ ಬರೆಯುವುದನ್ನು ನಿರ್ಭಂದಿಸಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಮೇ 28ಕ್ಕೆ ನಿಗದಿಪಡಿಸಲಾಗಿದೆ. ಈ ತಡೆಯಾಜ್ಞೆಯನ್ನು ನಾನು ತೆರವುಗೊಳಿಸಲು ಸದ್ಯ ಸಾಧ್ಯವಿಲ್ಲ. ಯಾಕೆಂದರೆ ಸಿವಿಲ್ ಕೋರ್ಟ್ ಗಳು ಬೇಸಿಗೆ ರಜೆಯಲ್ಲಿವೆ. ನ್ಯಾಯಾಲಯಕ್ಕೆ ಪೂರ್ಣ ಗೌರವ ಸಲ್ಲಿಸಿ ನಾನು ಅದರ ಆದೇಶವನ್ನು ಪಾಲಿಸುತ್ತಿದ್ದೇನೆ. ಆದರೆ ಒಂದಂತೂ ಖಡಾಖಂಡಿತವಾಗಿ ಹೇಳಬಲ್ಲೆ. ನಾನು ಎಲ್ಲಿಯೂ ಸುಳ್ಳು ಹೇಳಿಲ್ಲ ಅಥವಾ ಸುಳ್ಳು ಬರೆದಿಲ್ಲ. ಟಿವಿಗಳಲ್ಲಿ ಹೇಳಿದ್ದು ಕೂಡ ಸತ್ಯ ಮತ್ತು ನನ್ನ ಜಾಗೃತ ಅಂಕಣ ಸರಣಿಯಲ್ಲಿ ಬರೆದಿರುವುದು ಸತ್ಯ. ಸದ್ಯ ನನ್ನ ಕೈಕಟ್ಟಿ ಹಾಕುವಲ್ಲಿ ವಾದಿಗಳು ಯಶಸ್ವಿಯಾಗಿರಬಹುದು. ನನ್ನ ಬಾಯಿ ಮುಚ್ಚಿಸಿ ಬೀಗಿರಬಹುದು. ಆದರೆ ಇದು ಅವರ ತಾತ್ಕಾಲಿಕ ಜಯ ಮತ್ತು ನನ್ನ ತಾತ್ಕಾಲಿಕ ಹಿನ್ನಡೆ. ನನ್ನನ್ನು ಬೇರೆ ರೀತಿಯಲ್ಲಿ ಮಣಿಸಲು ಸಾಧ್ಯವಿಲ್ಲವೆಂದು ನ್ಯಾಯಾಲಯ ರಜೆಗೆ ಹೋಗುವ ಸಮಯ ನೋಡಿ ತಡೆಯಾಜ್ಞೆ ತಂದಿದ್ದಾರೆ. ಇದು ಈಗ ಸಣ್ಣ ಇಂಟರ್ ವೆಲ್ ಅಷ್ಟೇ. ಫಿಲ್ಮಂ ಅಭಿ ಬಾಕಿ ಹೇ!
Leave A Reply