ವಿದೇಶದಲ್ಲಿ ನೆಲೆಸಿರುವವರಲ್ಲಿ ಭಾರತೀಯರೇ ಅಚ್ಚು ಮೆಚ್ಚು, ಹೊಡೆಯಿರಿ ನಮ್ಮ ಸಂಸ್ಕೃತಿಗೊಂದು ಸೆಲ್ಯೂಟು!
ಆದಿ-ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ, ಉಡುಗೆ-ತೊಡುಗೆ, ಮಾತು, ಸಂವಹನ, ಜ್ಞಾನ… ಹೀಗೆ ಭಾರತದ ಪ್ರತಿಯೊಂದೂ ವಿಶ್ವದೆಲ್ಲೆಡೆ ಮೆಚ್ಚುಗೆ ಪಡೆದಿದೆ. ಅದರಲ್ಲೂ ವೈವಿಧ್ಯತೆಯಲ್ಲೂ ಏಕತೆ ಸಾಧಿಸುವ ಹಿಂದೂಸ್ಥಾನ ಎಂದರೆ ಎಲ್ಲರೂ ಗೌರವ ಕೊಡುತ್ತಾರೆ. ನಾವೂ ಹಾಗೆಯೇ ಬದುಕಿದ್ದೇವೆ.
ಈಗ ಭಾರತದ ಸಂಪ್ರದಾಯ, ಭಾರತೀಯರ ವರ್ತನೆ ಸೇರಿ ಹಲವು ಅಂಶಗಳಿಂದಾಗಿ ಭಾರತಕ್ಕೆ ಮತ್ತೊಂದು ಮುಕುಟ ಲಭಿಸಿದ್ದು, ಎಲ್ಲರೂ ಸಂಭ್ರಮಪಡುವ ಅಂಶವೊಂದು ಬಹಿರಂಗವಾಗಿದೆ.
ಹೌದು, ಬ್ರಿಟನ್ನಿನಲ್ಲಿ ನೆಲೆಸಿರುವ ಎಲ್ಲ ವಿದೇಶಿಗರಲ್ಲಿ ಭಾರತೀಯರೇ ಎಲ್ಲರಿಗೂ ಅಚ್ಚು ಮೆಚ್ಚು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ ಶತ್ರು ರಾಷ್ಟ್ರ ಪಾಕಿಸ್ತಾನ ಮತ್ತು ಬಾಂಗ್ಲಾದೇಶಿಯರಿಗಿಂತಲೂ ಎಲ್ಲರಿಗೂ ಭಾರತೀಯರೇ ಇಷ್ಟ ಎಂದು ಯು ಗೋವ್ ಪೋಲ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಈ ಕುರಿತು ವರದಿ ತಯಾರಿಸಲು ಸಂಸ್ಥೆ ಸುಮಾರು 25 ಪ್ರಶ್ನೆಗಳನ್ನು ತಯಾರಿಸಿ 1,668 ಬ್ರಿಟಿಷರನ್ನು ಸಂದರ್ಶನ ಮಾಡಿದ್ದು, ಅವರಲ್ಲಿ ಬಹುತೇಕರು ಭಾರತೀಯರೇ ನಮಗೆ ಅಚ್ಚುಮೆಚ್ಚು ಎಂದು ತಿಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬ್ರಿಟನ್ನಿಗೆ ವಲಸೆ ಹೋಗಿ ಅಲ್ಲಿ ನೆಲೆಸಿರುವ ಭಾರತೀಯರ ಆಚಾರ-ವಿಚಾರ, ಸಂವಹನ, ವರ್ತನೆ ಸೇರಿ ಹಲವು ವಿಷಯಗಳು ನಮಗೆ ಇಷ್ಟ ಎಂದು ಬಹುತೇಕ ಬ್ರಿಟಿಷರು ಭಾರತೀಯರನ್ನೇ ಇಷ್ಟಪಟ್ಟಿದ್ದಾರೆ. ನಂತರ ಸ್ಥಾನವನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಪಡೆದಿವೆ. ಈ ರಾಷ್ಟ್ರಗಳ ಜನರ ಕುರಿತು ಬ್ರಿಟಿಷರು ಅಷ್ಟೇನೂ ಸಕಾರಾತ್ಮಕವಾಗಿ ಅಭಿಪ್ರಾಯ ಮಂಡಿಸಿಲ್ಲ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಭಾರತ ಪಾಶ್ಚಿಮಾತ್ಯ ಸಂಸ್ಕೃತಿಗೆ ಒಗ್ಗಿ ಹೋಗಿದೆ ಎಂದು ಗುಲ್ಲೆಬ್ಬಿಸುತ್ತಿರುವವ ಬೆನ್ನಲ್ಲಿ, ನಮ್ಮನ್ನಾಳಿದ ಬ್ರಿಟಿಷರ ನಾಡಿನಲ್ಲೂ ನಾವು, ನಮ್ಮವರು ಭಾರತೀಯತನವನ್ನು ಮೆರೆಯುವ ಮೂಲಕ ಸಕಾರಾತ್ಮಕ ಅಭಿಪ್ರಾಯ ಮೂಡಿಸಿರುವುದು ಪ್ರತಿ ಭಾರತೀಯನೂ ಹೆಮ್ಮೆಪಡುವ ಸಂಗತಿಯಾಗಿದೆ.
Leave A Reply