ಕರ್ನಾಟಕದಲ್ಲಿ ಬಿಜೆಪಿ ಶತಕ ಬಾರಿಸುವ ಹಾಗೆ ಮಾಡಿದ ಚಾಣಕ್ಯನ ದೃಷ್ಟಿ ಈಗ ಯಾವ ರಾಜ್ಯದತ್ತ ನೆಟ್ಟಿದೆ ಗೊತ್ತಾ?
2013ರ ವಿಧಾನಸಭೆ ಚುನಾವಣೆ ಬಳಿಕ ಕರ್ನಾಟಕದಲ್ಲಿ ಬಿಜೆಪಿ ತೆರೆಮರೆಗೆ ಸರಿಯಿತು ಎಂದೇ ಹೇಳಲಾಗುತ್ತಿತ್ತು. ಆದರೆ 2018ರ ಚುನಾವಣೆ ಫಲಿತಾಂಶದ ಬಳಿಕ ಮರೆಗೆ ಸರಿದಿದ್ದು ಕಾಂಗ್ರೆಸ್ ಎಂಬುದು ಈಗ ಜಗಜ್ಜಾಹೀರಾಗಿದೆ. ಪ್ರಸ್ತುತ ಬಿಜೆಪಿ ಅಧಿಕಾರ ಹಿಡಿಯದಿರಬಹುದು, ಆದರೆ ಅಧಿಕ ಸ್ಥಾನ ಪಡೆದ ರಾಜ್ಯದ ಮೊದಲ ಪಕ್ಷವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಹೀಗೆ ಬಿಜೆಪಿ ಪಾಲಿಗೆ ದಕ್ಷಿಣ ಭಾರತದ ರಾಜಕೀಯ ಹೆಬ್ಬಾಗಿಲು ಆಗಿರುವ ಕರ್ನಾಟಕದಲ್ಲಿ ಬಿಜೆಪಿ ಶತಕ ಬಾರಿಸುವಲ್ಲಿ ಪ್ರಧಾನಿ ಮೋದಿ ಅಲೆ, ಯಡಿಯೂರಪ್ಪ ವರ್ಚಸ್ಸು ಎಷ್ಟಿದೆಯೋ, ಅಷ್ಟೇ ಪ್ರಮಾಣದ ತಂತ್ರಗಾರಿಕೆ, ಸಂಘಟನೆ, ಚಾಣಕ್ಷತನವನ್ನು ತೋರಿಸಿದ್ದು ಅಮಿತ್ ಶಾ. ಅದೇ ಕಾರಣಕ್ಕೆ ಅವರನ್ನು ಚಾಣಕ್ಯ ಎನ್ನುವುದು.
ಇಂತಹ ಚಾಣಕ್ಯ ಕರ್ನಾಟಕದಲ್ಲಿ ಬಿಜಿಪಿ ಅಧಿಕಾರ ಹಿಡಿಯಲಿಲ್ಲವಲ್ಲ ಎಂದು ಸುಮ್ಮನೆ ಕುಳಿತಿಲ್ಲ. ಮುಂದಿನ ವರ್ಷ ತೆಲಂಗಾಣದಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ಶಸ್ತ್ರಸನ್ನದ್ಧರಾಗುತ್ತಿದ್ದಾರೆ. ತಂತ್ರಗಾರಿಕೆ ರೂಪಿಸುತ್ತಿದ್ದಾರೆ.
ಹೌದು, ಮುಂದಿನ ವರ್ಷ ಬಹು ಕುತೂಹಲ ಕೆರಳಿಸಿರುವ ಲೋಕಸಬೆ ಚುನಾವಣೆ ಜತೆಗೆ, ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹಾಗಾಗಿ ಅಮಿತ್ ಶಾ ಅವರು ಲೋಕಸಭೆ ಚುನಾವಣೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ, ಅಷ್ಟೇ ಪ್ರಾಮುಖ್ಯತೆಯನ್ನು ತೆಲಂಗಾಣಕ್ಕೂ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ತೆಲಂಗಾಣ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಲಕ್ಷ್ಮಣ್ ಮಾಹಿತಿ ನೀಡಿದ್ದು, ಇತ್ತೀಚೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ದೆಹಲಿಯಲ್ಲಿ ನಮ್ಮೊಂದಿಗೆ ಸಭೆ ನಡೆಸಿದ್ದಾರೆ, ಅಲ್ಲದೆ ನಮ್ಮ ಮುಂದಿನ ಗಮನ ತೆಲಂಗಾಣ ವಿಧಾನಸಭೆ ಚುನಾವಣೆಯತ್ತ ಹರಿಸಬೇಕು ಎಂದು ತಿಳಿಸಿದ್ದಾರೆ. ಅಲ್ಲದೆ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಒಡಿಶಾ ಚುನಾವಣೆಗಳತ್ತಲೂ ನಾವು ಗಮನ ಕೇಂದ್ರೀಕೃತವಾಗಿಸೋಣ ಎಂಬುದಾಗಿ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
Leave A Reply