ಸೇನೆಗೆ ಬ್ರಹ್ಮೋಸ್ ಬಲ: ಪರೀಕ್ಷಾರ್ಥ ಉಡಾವಣೆ ಯಶಸ್ವಿ
ಬಾಲಾಸೋರ್: ಒಡಿಶಾದ ಬಾಲಾಸೋರ್ ಕಡಲ ತೀರದಲ್ಲಿ ಭಾರತ- ರಷ್ಯಾ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿರುವ ಶಬ್ದಾತೀತ ವೇಗದ (ಸೂಪರ್ಸಾನಿಕ್) ಬ್ರಹ್ಮೋಸ್ ಸುಧಾರಿತ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಸೋಮವಾರ ಯಶಸ್ವಿಯಾಗಿ ನೆರವೇರಿತು.
ಚಂಡೀಪುರದ ಸಮಗ್ರ ಪರೀಕ್ಷಾ ಪ್ರದೇಶದ (ಐಟಿಆರ್) ಲಾಂಚ್ ಪ್ಯಾಡ್-3ರಿಂದ ಸುಧಾರಿತ ಕ್ಷಿಪಣಿಯನ್ನು ಬೆಳಗ್ಗೆ 10.40ಕ್ಕೆ ಪ್ರಯೋಗಾರ್ಥ ಪರೀಕ್ಷೆ ನಡೆಯಿತು. ಕ್ಷಿಪಣಿಯ ಜೀವಿತಾವಧಿ ಹೆಚ್ಚಿಸುವ ತಂತ್ರಜ್ಞಾನವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮೊದಲ ಬಾರಿಗೆ ಅಭಿವೃದ್ಧಿಪಡಿಸಿದೆ. ಸುಧಾರಿತ ಕ್ಷಿಪಣಿ ಪರೀಕ್ಷೆಯಿಂದ ಸೇನಾ ಶಸ್ತ್ರಾಸ್ತ್ರ ಸಂಗ್ರಹಾಗಾರದಲ್ಲಿರುವ ಕ್ಷಿಪಣಿಗಳ ಬದಲಾವಣೆಗೆ ತಗುಲುವ ದೊಡ್ಡ ಮೊತ್ತದ ವೆಚ್ಚ ಕಡಿಮೆ ಮಾಡಲಿದೆ ಎಂದು ಡಿಆರ್ಡಿಒ ಮಾಹಿತಿ ನೀಡಿದೆ.
ಪ್ರಸ್ತುತ ಪರೀಕ್ಷೆ ನಡೆಸಿರುವ ಕ್ಷಿಪಣಿ ಘನರೂಪಿ ನೋದಕ ಶಕ್ತಿ ಮತ್ತು ರಾಮ್ ಜೆಟ್ ದ್ರವರೂಪಿ ನೋದಕಶಕ್ತಿ ಎಂಬ ಎರಡು ಹಂತಗಳನ್ನು ಹೊಂದಿದೆ. 2016ರಲ್ಲಿ ನಡೆದ ಬ್ರಹ್ಮೋಸ್ ಪರೀಕ್ಷೆಯಲ್ಲಿ 290 ಕಿ.ಮೀ. ಇದ್ದ ಗುರಿಯನ್ನು 2017ರ ನಡೆದ ಪರೀಕ್ಷೆಯಲ್ಲಿ 400 ಕಿ.ಮೀ.ಗೆ ಹೆಚ್ಚಳ ಮಾಡಲಾಗಿತ್ತು. ಇದೀಗ ಸುಧಾರಿತ ಪರೀಕ್ಷೆಯಲ್ಲಿ 800 ಕಿ.ಮೀ.ಗೆ ಏರಿಕೆ ಮಾಡಲಾಗಿದ್ದು, ಜಲಾಂತರ್ಗಾಮಿಗೆ ಬ್ರಹ್ಮೋಸ್ ಕ್ಷಿಪಣಿ ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ.
ಡಿಆರ್ ಡಿಒ ಯಶಸ್ವಿಯಾಗಿ ಸೂಪರ್ಸಾನಿಕ್ ಬ್ರಹ್ಮೋಸ್ ಸುಧಾರಿತ ಕ್ಷಿಪಣಿ ಪರೀಕ್ಷೆಯನ್ನು ನಡೆಸಿರುವುದಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
Leave A Reply