ಎಚ್ ಡಿಕೆಗೆ ಶುಭವಾಗಲಿ, ಮರೆಯದಿರಿ ದಕ್ಷಿಣ ಕನ್ನಡ ಜಿಲ್ಲೆಗೆ ಕೊಟ್ಟ ವಾಗ್ದಾನ
ನಮ್ಮ ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ತಯಾರಾಗುತ್ತಿರುವ ಕುಮಾರಸ್ವಾಮಿಯವರಿಗೆ ನಮಸ್ಕಾರಗಳು ಮತ್ತು ಅಭಿನಂದನೆಗಳು. ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯ ನೀರನ್ನು ಕುಡಿಯುವ ಒಬ್ಬ ನಾಗರಿಕನಾಗಿ ನಿಮ್ಮ ಮುಂದೆ ಈ ಮನವಿ ಪತ್ರ ಇಡುವುದು ಅವಶ್ಯಕವಾಗಿದೆ. ಹಾಗಂತ ನಿಮಗೆ ನೇತ್ರಾವತಿ ಅಥವಾ ಎತ್ತಿನಹೊಳೆ ನದಿ ಮರೆತು ಹೋಗಿರಬಹುದು ಎಂದು ನಾನು ಹೇಳುತ್ತಿಲ್ಲ. ಕೇವಲ ಎರಡು ತಿಂಗಳ ಮೊದಲು ನೀವು ಮಂಗಳೂರಿಗೆ ಬಂದಿದ್ದಾಗ ಇಲ್ಲಿನ ಪ್ರಜಾಪ್ರಭುತ್ವ ವೇದಿಕೆ ಆಯೋಜಿಸಿದ್ದ ಪ್ರಗತಿಪರರ ಜೊತೆ ಸಂವಾದದಲ್ಲಿ ನೀವು ನಮಗೆ ಭರವಸೆ ಕೊಟ್ಟಿದ್ದಿರಿ. ಎತ್ತಿನಹೊಳೆ ತಿರುವು ಯೋಜನೆ ಸ್ಪಷ್ಟವಾಗಿ ಹಣ ಹೊಡೆಯುವ ಯೋಜನೆ ಎಂದು ನೀವು ಸಾರಿದ್ದಿರಿ. ಅಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ ನಿಮಗಾದರೂ ಕಾಣಿಸಿತ್ತಲ್ಲ ಎನ್ನುವ ಸಮಾಧಾನ ನಮ್ಮಲ್ಲಿ ಆವತ್ತೆ ಮೂಡಿತ್ತು. ಕಾಂಗ್ರೆಸ್ ನವರು ಈ ಯೋಜನೆ ಜಾರಿಗೆ ತರುವುದು ಯಾವ ಲಾಭಕ್ಕೆ ಎನ್ನುವುದು ನಿಮಗೆ ಗೊತ್ತಿಲ್ಲದೆ ಏನಿಲ್ಲ. ಬಿಜೆಪಿಯವರು ಕರಾವಳಿಯಲ್ಲಿ ಪ್ರತಿಭಟನೆ ಮಾಡಿದರೂ ರಾಷ್ಟ್ರೀಯ ಪಕ್ಷವಾದ ಕಾರಣ ಅವರಿಗೆ ಅವರದ್ದೇ ಆದ ಒತ್ತಡಗಳಿದ್ದವು. ಆದರೆ ನಿಮಗೆ ಹಾಗಲ್ಲ. ನೀವು ಇಲ್ಲಿ ಬಂದು ಈ ಯೋಜನೆಯ ಭ್ರಷ್ಟಾಚಾರದ ಬಗ್ಗೆ ತಿಳಿದಿದ್ದಿರಿ. ಜೆಡಿಎಸ್ ಅಧಿಕಾರಕ್ಕೆ ಬಂದ ಕೂಡಲೇ ನಿಲ್ಲಿಸುತ್ತೇವೆ ಎಂದಿದ್ದಿರಿ. ಅದಕ್ಕಾಗಿ ಮುಹೂರ್ತ ಕೂಡಿ ಬಂದಿದೆ. ಬಹುಶ: ಎತ್ತಿನಹೊಳೆ ತಿರುವು ಯೋಜನೆಯ ಭ್ರಷ್ಟಾಚಾರವನ್ನು ನಿಮ್ಮ ಕೈಯಿಂದಲೇ ನಿಲ್ಲಿಸಬೇಕು ಎಂದು ಭಗವಂತನ ಪ್ರೇರಣೆಯೂ ಇರಬಹುದು. ಅದಕ್ಕೆ ಮತ್ತೆ ನಿಮಗೆ ಮುಖ್ಯಮಂತ್ರಿ ಸ್ಥಾನ ಕರುಣಿಸಿದ್ದಾನೆ.
ನಿಮಗೆ ಇದೆಲ್ಲ ಅರ್ಥವಾಗುತ್ತದೆ ಎಂದುಕೊಂಡಿದ್ದೇವೆ.
ಇನ್ನು ನೀವು ಬೆಂಗಳೂರು ಗ್ರಾಮಾಂತರ ಪ್ರದೇಶವಾದ ರಾಮನಗರದಿಂದ ಕೂಡ ಗೆದ್ದವರು. ಅಲ್ಲಿ ನಿಮಗೆ ಅಪಾರ ಬೆಂಬಲಿಗರಿದ್ದಾರೆ. ನೀವು ಅವರಿಗೆ ಎತ್ತಿನಹೊಳೆ ಯೋಜನೆಯ ಸಾಧಕ ಬಾಧಕ ತಿಳಿಸಿಹೇಳುವಷ್ಟು ಶಕ್ತರಾಗಿದ್ದೀರಿ. ಆ ಯೋಜನೆಯಿಂದ ಬಯಲು ಸೀಮೆಯ ಜನರಿಗೆ ನೀರು ಸಿಗುವುದಿಲ್ಲ, ಅದು ಕೇವಲ ಹಣ ಹೊಡೆಯುವ ಯೋಜನೆ ಎಂದು ನೀವು ಹೇಳಿದರೆ ಜನ ಕೇಳುತ್ತಾರೆ. ಅಲ್ಲಿನ ಜನರಿಗೆ ಕುಡಿಯುವ ನೀರು ಕೊಡಲು ನಾವು ವಿರೋಧ ಇಲ್ಲ. ಅವರು ಕೂಡ ನಮ್ಮ ಸಹೋದರರ ಹಾಗೆ. ಆದರೆ ಎತ್ತಿನಹೊಳೆ ನೀರು ಇಲ್ಲಿಂದ ಅಲ್ಲಿಗೆ ಹೋಗುವುದಿಲ್ಲ ಎಂದು ಅವರಿಗೆ ತಿಳಿಸಿ ಹೇಳುವವರ್ಯಾರು ಎನ್ನುವ ಪ್ರಶ್ನೆ ಇಲ್ಲಿಯ ತನಕ ಉದ್ಭವಿಸುತ್ತಿತ್ತು. ನೀವು ಮುಖ್ಯಮಂತ್ರಿಯಾಗಿ ಮನಸ್ಸು ಮಾಡಿದರೆ ಆ ಕಾಮಗಾರಿ ತಕ್ಷಣ ನಿಲ್ಲಿಸಬಹುದು. ಈಗಾಗಲೇ ಅದಕ್ಕೆ ಸಾವಿರಾರು ಕೋಟಿ ಪೋಲಾಗಿದೆ ಎನ್ನುವ ಮಾಹಿತಿ ನೀವು ಅಧಿಕಾರಿಗಳಿಂದ ಕೇಳಿ ಪಡೆದುಕೊಳ್ಳಬಹುದು.
ನಿಮಗೆ ರಾಜಕೀಯವೂ ಅರ್ಥವಾಗುತ್ತದೆ ಎಂದು ಗೊತ್ತಿದೆ.
ಇನ್ನು ವೀರಪ್ಪ ಮೊಯಿಲಿಯವರು ಚಿಕ್ಕಬಳ್ಳಾಪುರದ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಅಲ್ಲಿನ ಜನರಿಗೆ ಎತ್ತಿನಹೊಳೆಯ ಆಸೆ ತೋರಿಸಿದರು. ಅವರಿಗೂ ಆ ಯೋಜನೆ ಸಂಪೂರ್ಣವಾಗಿ ಜಾರಿಗೆ ಬರುವುದಿಲ್ಲ ಎಂದು ಗೊತ್ತಿತ್ತು. ಸಿಎಂ ಆಗಿದ್ದಾಗ ಡಿವಿ ಸದಾನಂದ ಗೌಡ್ರು ಆ ಯೋಜನೆಯ ಸಾಧ್ಯತೆಗಳ ಬಗ್ಗೆ ಪರಾಮರ್ಶಿಸಲು ಚಾಲನೆ ಕೊಟ್ಟಿದ್ದರು. ಈಗ ಅದೆಲ್ಲವೂ ಆಗಿ ಹೋದ ವಿಷಯ. ನಮ್ಮ ಜಿಲ್ಲೆಯ ಜನರಿಗೆ ನೇತ್ರಾವತಿ ಉಳಿಯಬೇಕು, ಎತ್ತಿನಹೊಳೆ ಉಳಿಯಬೇಕು ಮತ್ತು ನಮ್ಮ ಪಶ್ಚಿಮಘಟ್ಟಗಳು ಉಳಿಯಬೇಕು, ಅಷ್ಟೇ ಗುರಿ ಮತ್ತು ಉದ್ದೇಶ.
ಕುಮಾರಸ್ವಾಮಿಯವರು ಮಾತು ತಪ್ಪುತ್ತಾರೆ, ಎರಡೆರಡು ನಾಲಿಗೆ ಎಂದು ಕೆಲವರು ಸಾಮಾಜಿಕ ತಾಣಗಳಲ್ಲಿ ಹೀಯಾಳಿಸುತ್ತಾರೆ. ಅದಕ್ಕೆ ನೀವು ಖಡಕ್ ಉತ್ತರ ಕೊಡಬೇಕಾದರೆ ಎತ್ತಿನಹೊಳೆ ತಿರುವು ಯೋಜನೆಯನ್ನು ನಿಲ್ಲಿಸಬೇಕು. ಅದರ ನಂತರ ನೋಡಿ, ನಿಮಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ವರ್ಚಸ್ಸು ನಿರ್ಮಾಣವಾಗಲಿದೆ. ಕಳೆದ ಬಾರಿ ನೀವು ಬಿಜೆಪಿಯೊಂದಿಗೆ ಮೈತ್ರಿ ಸರಕಾರ ಮಾಡಿ ಬಿಜೆಪಿಗೆ ಅಧಿಕಾರ ಕೊಡದೇ ಇದ್ದಾಗ ನೀವು “ದಾರಿ ತಪ್ಪಿದ ಮಗ” ಎನ್ನುವ ಕುಖ್ಯಾತಿ ಪಡೆದಿದ್ದಿರಿ. ಅದರಿಂದ ಕರಾವಳಿಯಲ್ಲಿ ನಿಮ್ಮ ಬಗ್ಗೆ ಬೇಸರ ಇದೆ. ಅದನ್ನು ಈಗ ತೊಡೆದು ಹಾಕುವ ಕಾಲವೂ ಬಂದಿದೆ. ನೀವು “ಮಾತು ತಪ್ಪದ ಮಗ” ಆಗಬೇಕಾದರೆ ಅಧಿಕಾರ ಸ್ವೀಕರಿಸಿದ ತಿಂಗಳೊಳಗೆ ಎತ್ತಿನಹೊಳೆ ತಿರುವು ಯೋಜನೆ ನಿಲ್ಲಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಹೋರಾಟಗಾರರು ಮತ್ತು ಹೋರಾಟ ಮಾಡದೇ ಸುಮ್ಮನೆ ಕುಳಿತವರು ಎಲ್ಲರೂ ನಿಮಗೆ ಅಭಿನಂದಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ನಿಮ್ಮ ಪಕ್ಷದವರಿಗೆ ಮುಂದೆ ಹೇಳಿ ತಿರುಗಾಡಲು ಒಂದು ವಿಷಯ ಸಿಕ್ಕಿದಂತೆಯೂ ಆಗುತ್ತದೆ!
Leave A Reply