ಭಾರತದ ಪಾಕ್ ರಾಯಭಾರಿಯ ಕರೆ ಕದ್ದಾಲಿಸಿ ಐಎಸ್ಐಗೆ ಸಾಥ್ ನೀಡಿದ ಅಡುಗೆ ಸಹಾಯಕನ ಬಂಧನ
ಲಖನೌ: ಪಾಕಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತದ ರಾಯಭಾರಿ ನಿವಾಸದ ಕದ್ದಾಲಿಕೆ ಮಾಡಿದ ಆರೋಪಿ, ಉತ್ತರ ಖಂಡದ ಪಿತ್ತೋರ್ ಗಡ್ ಮೂಲದ ಅಡುಗೆಯವನನ್ನು ಪೊಲೀಸರು ಬಂಧಿಸಿದ್ದಾರೆ. ಐಎಸ್‌ಐಗೆ ನೆರವು ನೀಡಿರುವ ಮತ್ತು ಹಣಕ್ಕಾಗಿ ಮಹತ್ವದ ಮಾಹಿತಿಯನ್ನು ಸೋರಿಕೆ ಮಾಡಿದ್ದಾನೆ ಎಂಬ ಆರೋಪದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಪಿತ್ತೋರ್‌ಗಢ ದ ಗರಾಲಿ ಗ್ರಾಮದ 35 ವರ್ಷದ ರಮೇಶ್ ಸಿಂಗ್‌ನನ್ನು ಆತನ ನಿವಾಸದಲ್ಲೇ ಬಂಧಿಸಲಾಗಿದೆ. ಉತ್ತರ ಪ್ರದೇಶದ ಭದ್ರತಾ ವಿರೋಧಿ ದಳ, ಸೇನೆ ಗುಪ್ತಚರ ಇಲಾಖೆ ಹಾಗೂ ಉತ್ತರಾಖಂಡ ಪೊಲೀಸರು ಜಂಟಿಯಾಗಿ ಬಂಧಿಸಿದ್ದಾರೆ. ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಭಾರತದ ರಕ್ಷಣಾ ಅಧಿಕಾರಿಯ ನಿವಾಸದಿಂದ ಮಹತ್ವದ ಮಾಹಿತಿಯನ್ನು ಐಎಸ್ ಐ ಸಹಕಾರದಲ್ಲಿ ಕದ್ದಾಲಿಕೆ ಮಾಡುತ್ತಿದ್ದ. ಭಾರತ ರಾಯಭಾರಿ ಮನೆಯಲ್ಲಿ ಅಡುಗೆಯವನಾಗಿ ಕಾರ್ಯ ನಿರ್ವಹಿಸುತ್ತಿದ್ದ. ರಮೇಶ್ ಸಿಂಗ್ ನ ಸಹೋದರ ಭಾರತೀಯ ಸೇನೆಯ ಅಧಿಕಾರಿಯ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಪಿತ್ತೋರ್‌ಗಢ ಕೋರ್ಟ್‌ಗೆ ರಮೇಶ್ ಸಿಂಗ್‌ನನ್ನು ಹಾಜರುಪಡಿಸಿದ್ದು, ಲಖನೌಗೆ ಕರೆದೊಯ್ಯಲಾಗಿದೆ. ಈ ಪ್ರಕರಣದ ಬಗ್ಗೆ ಉತ್ತರಾಖಂಡ ಡಿಜಿಪಿ ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳ ನೆರವು ಕೋರಿದ್ದರು ಎಂದು ಯುಪಿಯ ಎಟಿಎಸ್ ಐಜಿ ಆಸಿಮ್ ಅರುಣ್ ಮಾಹಿತಿ ನೀಡಿದ್ದಾರೆ. ಮಿಲಿಟರಿ ಗುಪ್ತಚರ ಇಲಾಖೆಯ ನಿರ್ದೇಶಕರ ನೆರವನ್ನೂ ಪಡೆಯಲಾಗಿದೆ.
ರೈತನಾಗಿರುವ ರಮೇಶ್ ಸಿಂಗ್‌ಗೆ ಸಂಬಂಧಿಕರೊಬ್ಬರು ಪಾಕಿಸ್ತಾನದಲ್ಲಿ ಅಡುಗೆ ಕೆಲಸ ಕೊಡಿಸಿದ್ದಾರೆ. ಬಳಿಕ, ಈತ 2015ರ ಮಧ್ಯಭಾಗದಿಂದ 2017 ಸೆಪ್ಟೆಂಬರ್‌ವರೆಗೆ ಭಾರತ ರಕ್ಷಣಾ ಇಲಾಖೆಯ ಅಧಿಕಾರಿಯ ನಿವಾಸದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಐಎಸ್‌ಐ ಸಂಪರ್ಕ ಸಾಧಿಸಿರುವ ಸಿಂಗ್, ಅಧಿಕಾರಿಯ ಮನೆಯಲ್ಲಿ ಪ್ರಮುಖ ದಾಖಲೆ ಸೋರಿಕೆ ಮಾಡಲು ಹಣ ಪಡೆಯುತ್ತಿದ್ದ. ಅಧಿಕಾರಿಯ ಡೈರಿ ಸೇರಿ ಹಲವು ಮಾಹಿತಿ ಐಎಸ್ ಐಗೆ ನೀಡುತ್ತಿದ್ದ ಎನ್ನಲಾಗಿದೆ. ಐಎಸ್‌ಐನಿಂದ ಆರೋಪಿ ಎಷ್ಟು ಹಣ ಪಡೆದಿದ್ದಾನೆ ಎಂದು ಇನ್ನೂ ಗೊತ್ತಾಗಿಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆನಂದ್ ಕುಮಾರ್ ತಿಳಿಸಿದ್ದಾರೆ.
Leave A Reply