” ಪಾಕಿಸ್ತಾನ ಭಯೋತ್ಪಾದಕರ ಪಾಲಿನ ಸ್ವರ್ಗ”!
ಇಷ್ಟು ವರ್ಷ ಭಯೋತ್ಪಾದಕರನ್ನು ತನ್ನ ಮಡಿಲಲ್ಲಿ ಮಲಗಿಸಿ, ಅಗತ್ಯ ಬಿದ್ದಾಗ ಸೆರಗಿನ ಹಿಂದೆ ಅಡಗಿಸುತ್ತಿದ್ದ ಪಾಕಿಸ್ತಾನ “ಭಯೋತ್ಪಾದಕರ ಪಾಲಿನ ಸ್ವರ್ಗ” ಎಂದು ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಮೂಲಕ ನಮ್ಮ ರಾಷ್ಟ್ರದಲ್ಲಿ ಭಯೋತ್ಪಾದಕರು ಇಲ್ಲ, ಇರುವವರೆಲ್ಲಾ ಬಾಯಿಗೆ ಬೆರಳು ಹಾಕಿದರೆ ಚೀಪಲು ಕೂಡ ಗೊತ್ತಿಲ್ಲದವರು ಎಂದು ಹೇಳಿಕೊಂಡು ಬರುತ್ತಿದ್ದ ಪಾಕಿಸ್ತಾನದ ಮುಖಕ್ಕೆ ಮಂಗಳಾರತಿ ಆಗಿದೆ.
ತನ್ನ ವಾರ್ಷಿಕ ” ಭಯೋತ್ಪಾದಕ ರಾಷ್ಟ್ರಗಳ ವರದಿ” ಯಲ್ಲಿ ಅಮೇರಿಕಾ, ವಿಶ್ವಪಟದಲ್ಲಿ ಉಗ್ರನೆಂದು ಗುರುತಿಸಿಕೊಂಡಿರುವ, ಮುಂಬೈ ದಾಳಿಯ ರೂವಾರಿಯೂ ಆಗಿರುವ ಹಫೀಝ್ ಸಯಿದ್ ಪಾಕಿಸ್ತಾನದಲ್ಲಿ ಬಹಿರಂಗವಾಗಿ ರ್ಯಾಲಿಗಳನ್ನು ಮಾಡುತ್ತಿದ್ದಾನೆ, ಮಾಧ್ಯಮಗಳಿಗೆ ಸಂದರ್ಷನ ನೀಡುತ್ತಿದ್ದಾನೆ ಮತ್ತು ಪಾಕಿಸ್ತಾನ ಫೆಬ್ರವರಿ 2017 ರಲ್ಲಿ ಆತನನ್ನು ಎಂಟಿ-ಭಯೋತ್ಪಾದಕ ಪ್ರಕ್ರಿಯೆಯಲ್ಲಿ ಬಂಧಿಸಿದರೂ ಈಗ ಆತ ಹೀಗೆ ರಾಜಾರೋಷವಾಗಿ ತಿರುಗುವ ಮೂಲಕ ಪಾಕಿಸ್ತಾನ ಕೇವಲ ಬೂಟಾಟಿಕೆಗಳಿಗೆ ಮಾತ್ರ ಉಗ್ರ ಚಟುವಟಿಕೆಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಿದೆ ಎಂದು ಅಮೇರಿಕಾ ಪಾಕಿಸ್ತಾನದ ವಿರುದ್ಧ ಕಿಡಿಕಾರಿದೆ.
ಲಷ್ಕರೆ ತೋಯ್ಬಾ ಪಾಕಿಸ್ತಾನದಲ್ಲಿ ನಿಷೇಧಕ್ಕೆ ಒಳಗಾಗಿದೆ ಎಂದು ಹೇಳಲಾಗುತ್ತಿದ್ದರೂ ಅದರ ಅಂಗಸಂಸ್ಥೆಗಳಾದ ಜಮಾತ್ ಉದ್ ದಾವಾ ಮತ್ತು ಫಲಾಹ್ ಐ ಇನ್ಸಾನಿಯತ್ ಸಂಘಟನೆಗಳು ಪಾಕಿಸ್ತಾನ ಸಹಿತ ವಿಶ್ವದಲ್ಲಿ ತಮ್ಮ ಉಗ್ರಗಾಮಿ ಚಟುವಟಿಕೆಗಳಿಗೆ ಧನಸಂಗ್ರಹ ಮಾಡುತ್ತಿವೆ. ಈ ಸಂಘಟನೆಗಳ ಮುಖಂಡರು ಮಾಧ್ಯಮಗಳಲ್ಲಿ ಉಗ್ರತ್ವಕ್ಕೆ ಬೆಂಬಲವಾಗಿ ಮಾತನಾಡುತ್ತಿದ್ದರೂ ಅವುಗಳ ಪ್ರಸಾರಕ್ಕೆ ತಡೆ ಅಥವಾ ಪತ್ರಿಕೆಗಳಲ್ಲಿ ಅವರು ಕೊಡುವ ಹೇಳಿಕೆಗಳನ್ನು ನಿಷೇಧಿಸುವ ಪ್ರಕ್ರಿಯೆಗಳಿಗೆ ಇಲ್ಲಿಯ ತನಕ ಯಾವುದೇ ತೊಂದರೆಯಾಗಿಲ್ಲದಿರುವುದು ಪಾಕಿಸ್ತಾನ ಈ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಮೃಧುತ್ವ ಹೊಂದಿದೆ ಎಂದು ಅಮೇರಿಕಾ ಅಭಿಪ್ರಾಯ ಪಟ್ಟಿದೆ.
ಅಮೇರಿಕಾಕ್ಕೆ ಇನ್ನೊಂದು ಕೋಪ ಬಂದಿರುವುದು ಹಖಾನಿ ಅಥವಾ ಅಫಘಾನ್ ತಾಲಿಬಾನ್ ಎನ್ನುವ ಸಂಘಟನೆ ಅಪಘಾನಿಸ್ತಾನದಲ್ಲಿ ಅಮೇರಿಕಾದ ಎಚ್ಚರಿಕೆ ಅಥವಾ ಒತ್ತಾಸೆಗೆ ವಿರೋಧವಾಗಿ ನಾಗರಿಕರನ್ನು ಅಪಹರಣ ಮಾಡುವ ಮೂಲಕ ವಿಶ್ವದಲ್ಲಿ ಉಗ್ರತ್ವವೇ ಅಂತಿಮ ಎಂದು ಸಾರಿರುವುದು ಅಪಘಾನಿಸ್ತಾನದಲ್ಲಿ ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿಯನ್ನು ವಹಿಸಿಕೊಂಡಿರುವ ಅಮೇರಿಕಾ ರಕ್ಷಣಾ ಸಂಸ್ಥೆಗೆ ಕಿರಿಕಿರಿ ಉಂಟು ಮಾಡಿದೆ. ತನ್ನ ವರದಿಯಲ್ಲಿ ಕಾಶ್ಮೀರ ಗಡಿಯಲ್ಲಿ ಉಂಟಾಗುವ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಉಲ್ಲೇಖಿಸಿರುವ ಅಮೇರಿಕಾ, ಕದನ ವಿರಾಮವನ್ನು ಪದೇ ಪದೇ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಇನ್ನೊಂದು ಅರ್ಥದಲ್ಲಿ ತಾನು ನಿಯಮವನ್ನು ಪಾಲಿಸುತ್ತಿದ್ದೇನೆ, ಆದರೆ ಅದನ್ನು ಮಾಡುತ್ತಿರುವುದು ಉಗ್ರಗಾಮಿಗಳು ಎಂದು ಹೇಳಿರುವುದು ಪ್ರತ್ಯಕ್ಷವಾಗಿ ಪಾಕಿಸ್ತಾನಕ್ಕೆ ಉಗ್ರಗಾಮಿಗಳ ಮೇಲೆ ನಿಯಂತ್ರಣ ಇಲ್ಲ ಎಂದು ಕೂಡ ಗೊತ್ತಾಗುತ್ತಿದೆ ಎಂದು ಅಮೇರಿಕಾ ಕಿಡಿಕಾರಿದೆ.
ಅಮೇರಿಕಾದ ಈ ವರದಿ ಪಾಕಿಸ್ತಾನವನ್ನು ವಿಶ್ವದ ಬೇರೆ ರಾಷ್ಟ್ರಗಳ ಎದುರು ನಗ್ನನನ್ನಾಗಿಸಿದೆ ಎಂದರೆ ಒಂದು ಚೂರು ತಪ್ಪಾಗಲಿಕ್ಕಿಲ್ಲ. ಇಲ್ಲಿಯ ತನಕ ನಾವು ಅಮಾಯಕರು, ನಮ್ಮನ್ನು ಸುಮ್ಮನೆ ಗುರಿ ಮಾಡಲಾಗುತ್ತದೆ ಎಂದು ಹೇಳಿಕೊಂಡು ಬರುತ್ತಿದ್ದ ಪಾಕಿಸ್ತಾನ, ಅಮೇರಿಕಾದಂತಹ ದೊಡ್ಡಣ್ಣ ಹೇಳಿದ ಮೇಲೆ ಬಾಲ ಮುದುಡಿದ ಬೆಕ್ಕಿನಂತೆ ಆಗಿದೆ. ನರೇಂದ್ರ ಮೋದಿಯವರು ವಿದೇಶಿ ಪ್ರವಾಸ ಯಾಕೆ ಮಾಡುತ್ತಾರೆ ಎಂದು ಟೀಕಿಸುತ್ತಿದ್ದ ವಿಪಕ್ಷಗಳಿಗೆ ಈಗ ಉತ್ತರ ಸಿಕ್ಕಿರಬಹುದು. ಒಂದಂತೂ ನಿಜ, ಅಮೇರಿಕಾದಂತಹ ಅಮೇರಿಕಾದ ರಾಷ್ಟ್ರಾಧ್ಯಕ್ಷರ ಬಾಯಿಯಿಂದ ಒಂದು ರಾಷ್ಟ್ರ “ಭಯೋತ್ಪಾದಕರಿಗೆ ಸ್ಪರ್ಗ” ಎಂದು ಹೇಳಿಸುವುದು ಕೂಡ ಸುಲಭದ ಮಾತಲ್ಲ. ಇನ್ನು ಭಾರತ ಪಾಕ್ ಮೇಲೆ ಯುದ್ಧ ಸಾರಿದರೂ ಪ್ರಪಂಚದ ಯಾವುದೇ ರಾಷ್ಟ್ರ ಪಾಕಿಸ್ತಾನದ ಬೆಂಬಲಕ್ಕೆ ಬರುವುದಿಲ್ಲ.
Leave A Reply