ಬೆಳ್ಳಂಬೆಳಗ್ಗೆ ಜಮ್ಮು-ಕಾಶ್ಮೀರದಲ್ಲಿ ಸೈನಿಕರ ಶೌರ್ಯ, ನಾಲ್ವರು ಉಗ್ರರ ಉಡೀಸ್

ಶ್ರೀನಗರ: ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಜಾಸ್ತಿಯಾಗುತ್ತಿದ್ದು, ಇದಕ್ಕೆ ಭಾರತವೂ ಸರಿಯಾಗಿಯೇ ಪ್ರತ್ಯುತ್ತರ ನೀಡುತ್ತಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ದಯಮಾಡಿ ಪಾಕಿಸ್ತಾನಿ ಸೈನಿಕರ ವಿರುದ್ಧ ಪ್ರತಿದಾಳಿ ಮಾಡಬೇಡಿ ಎಂದು ಅಂಗಲಾಚಿತ್ತು.
ಇಷ್ಟಾದರೂ ಕಾಶ್ಮೀರದಲ್ಲಿ ಪಾಕಿಸ್ತಾನ ಉಪಟಳ ನಿಂತಿಲ್ಲ, ಹಾಗೂ ನಮ್ಮ ಹೆಮ್ಮೆಯ ಸೈನಿಕರು ಸುಮ್ಮನೆ ಕೂತಿಲ್ಲ. ಇದಕ್ಕೆ ಸಾಕ್ಷಿಯಾಗಿ ಶನಿವಾರವೂ ಉಗ್ರರು ಕಾಶ್ಮೀರ ಗಡಿಯಲ್ಲಿ ಒಳನುಸುಳಲು ಯತ್ನಿಸಿದ್ದು, ಅದನ್ನು ವಿಫಲಗೊಳಿಸಿದ ಭಾರತೀಯ ಸೈನಿಕರು ಬರೋಬ್ಬರಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಜಮ್ಮು-ಕಾಶ್ಮೀರದ ತಂಗ್ಧಾರ್ ವಲಯದ ಗಡಿ ನಿಯಂತ್ರಣ ರೇಖೆ ದಾಟಿ ಒಳನುಸುಳಲು ಯತ್ನಿಸುತ್ತಿರುವ ಕುರಿತು ಮಾಹಿತಿ ತಿಳಿದ 20ನೇ ಝಾಟ್ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರ ಒಳನುಸುಳುವಿಕೆ ಯತ್ನ ವಿಫಲವಾಗಿದ್ದು, ನಾಲ್ವರು ಉಗ್ರರು ಹತ್ಯೆಯಾಗಿದ್ದಾರೆ.
ಎಷ್ಟು ಉಗ್ರರು ಒಳನುಸುಳಲು ಯತ್ನಿಸಿದ್ದಾರೆ ಎಂಬ ಕುರಿತು ಇದುವರೆಗೆ ಮಾಹಿತಿ ಸಿಕ್ಕಿಲ್ಲ. ಹಾಗಾಗಿ ಗಡಿಯಲ್ಲಿ ಮತ್ತಷ್ಟು ಸೈನಿಕರು ಸುತ್ತುವರಿದಿದ್ದು, ಉಗ್ರರನ್ನು ಹಡೆಮುರಿಕಟ್ಟಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಪಾಕಿಸ್ತಾನಿ ಸೈನಿಕರು ಹಾಗೂ ಶತ್ರುರಾಷ್ಟ್ರ ಕೃಪಾಪೋಷಿತ ಉಗ್ರರ ದಾಳಿ ಜಾಸ್ತಿಯಾಗಿರುವುದರಿಂದ ಗಡಿಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
Leave A Reply