ಬಂಟ್ವಾಳದ ಈ ಶಾಲೆಯಂತೆಯೇ ಎಲ್ಲ ಶಾಲೆಗಳೂ ಪ್ರಾರಂಭೋತ್ಸವ ಆಚರಿಸಿದರೆ ಎಷ್ಟು ಚೆಂದ ಅಲ್ಲವೇ?
ಸರ್ಕಾರಿ ಶಾಲೆ ಎಂದರೆ ಹಳೆ ಕಟ್ಟಡ, ಮುರಿದ ಬೆಂಚುಗಳು, ಉತ್ತಮ ಬೋಧಕ ಸಿಬ್ಬಂದಿ ಇಲ್ಲದ, ಶಾಲೆ ಪಲಿತಾಂಶದ ಬಗ್ಗೆ ತಲೆಕೆಡೆಸಿಕೊಳ್ಳದ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯೇ ಇಲ್ಲದ ಸಂಸ್ಥೆಗಳು ಎಂಬ ಮೂಢನಂಬಿಕೆ ತುಂಬ ಜನರಲ್ಲಿದೆ. ಸಿದ್ದರಾಮಯ್ಯರಂತಹ ಮುಖ್ಯಮಂತ್ರಿ ನೇತೃತ್ವದ ಸರ್ಕಾರಗಳೂ ಈ ಮಾತಿಗೆ ಪೂರಕವಾಗಿ ಸರ್ಕಾರಿ ಶಾಲೆ ಮುಚ್ಚಲು ಮುಂದಾಗುತ್ತಾರೆ ಎಂಬುದು ಸಹ ಘೋರ ದುರಂತವೇ ಆಗಿದೆ.
ಆದರೆ ದಕ್ಷಿಣ ಜಿಲ್ಲೆ ಬಂಟ್ವಾಳ ತಾಲೂಕಿನ ಕೆದ್ದಳಿಕೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಹೀಗೆ ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವವರಿಗೆ ಛಾಟಿಯೇಟಿನಂತಹ ಕಾರ್ಯ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು, ಈ ಶಾಲೆಯ ಮುಖ್ಯೋಪಾಧ್ಯಾಯರು, ಗ್ರಾಮಸ್ಥರು ಎಲ್ಲರೂ ಸೇರಿ ಶಾಲೆಯ ಪ್ರಾರಂಭೋತ್ಸವವನ್ನು ಹಬ್ಬದಂತೆ ಆಚರಿಸಿದ್ದು ಎಲ್ಲ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ.
ಶನಿವಾರ ಶಾಲೆಯ ಪ್ರಾರಂಭೋತ್ಸವ ಆಚರಿಸಿದ್ದು, ಗ್ರಾಮದ ಅಂಗನವಾಡಿಯಿಂದ ಶಾಲೆಯವರೆಗೆ ಮಕ್ಕಳನ್ನು ಮೆರವಣಿಗೆ ಮೂಲಕ ಕರೆತರಲಾಗಿದೆ. ಅಲ್ಲದೆ ಅಂಗನವಾಡಿಯಲ್ಲಿ ನೂತನವಾಗಿ ಶಾಲೆಗೆ ಸೇರಿದ ಮಕ್ಕಳನ್ನು ತೊಟ್ಟಿಲಿನಲ್ಲಿ ಮಲಗಿಸಿ, ಅವರಿಗೆ ಅಕ್ಕಿಯಲ್ಲಿ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಅಕ್ಷರ ಬೀಜ ಬಿತ್ತಿದ್ದಾರೆ.
ಶಾಲೆ ಹಾಗೂ ಗ್ರಾಮಸ್ಥರ ವತಿಯಿಂದ ಪ್ರತಿ ವರ್ಷವೂ ಹೀಗೆ ಅದ್ಧೂರಿಯಾಗಿ ಶಾಲೆಯ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಪ್ರತಿ ವರ್ಷವೂ ವಿಭಿನ್ನತೆ ಮೆರೆಯಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಶಾಲೆ ಮುಖ್ಯೋಪಾಧ್ಯಾಯರು, ಎಸ್ಡಿಎಂಸಿ ಅಧ್ಯಕ್ಷರು, ಗ್ರಾಮದ ಹಿರಿಯರು, ಪೋಷಕರು ಆಗಮಿಸಿ, ಮಕ್ಕಳನ್ನು ಓದಿನತ್ತ ಒರೆಗೆ ಹಚ್ಚುತ್ತಿದ್ದಾರೆ. ಇಂತಹ ಶಾಲೆಗಳ ಸಂಖ್ಯೆ ಸಾವಿರವಾಗಲಿ ಎಂಬುದೇ ನಮ್ಮ ಆಶಯ.
Leave A Reply