ಮ್ಯಾನ್ ಹೋಲ್ ಬಾಯಿಗೆ ಕೈ ಹಾಕಿ ಮೊಸರು ತಿನ್ನುವ ಗುತ್ತಿಗೆದಾರರು!!
ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ಸ್, ಕಾಂಟ್ರಾಕ್ಟರ್ಸ್ ಮತ್ತು ಇಂಜಿನಿಯರ್ಸ್ ಹೇಗೆ ನಮ್ಮ ತೆರಿಗೆಯ ಹಣವನ್ನು ನುಂಗಿ ನೀರು ಕುಡಿದು ಇವರು ಸುಖವಾಗಿ ಬದುಕುತ್ತಿದ್ದಾರೆ ಎನ್ನುವ ಮತ್ತೊಂದು ಉದಾಹರಣೆಯನ್ನು ಕೊಡುತ್ತಿದ್ದೇನೆ.
ಇವತ್ತು ನಾನು ಪೋಸ್ಟ್ ಮಾಡಿರುವ ಈ ಫೋಟೋಗಳನ್ನು ನೋಡಿದರೆ ವಿಷಯ ನಿಮಗೆ ಒಂದಿಷ್ಟು ಗೊತ್ತಾಗಬಹುದು. ಸಂಪೂರ್ಣ ವಿಷಯವನ್ನು ವಿವರಿಸುತ್ತೇನೆ. ಮಂಗಳೂರು ನಗರದಲ್ಲಿ ಅಸಂಖ್ಯಾತ ಮ್ಯಾನ್ ಹೋಲ್ ಗಳಿವೆ. ಮ್ಯಾನ್ ಹೋಲ್ ಗಳನ್ನು ನೀವು ಹತ್ತಿರದಿಂದ ನೋಡಿದರೆ ಅದಕ್ಕೆ ಒಂದು ರಿಂಗ್ ಮತ್ತು ಮುಚ್ಚಳ ಇರುತ್ತದೆ. ಈ ರಿಂಗ್ ಮತ್ತು ಮುಚ್ಚಳವನ್ನು ಮಂಗಳೂರು ಮಹಾನಗರ ಪಾಲಿಕೆ ದೊಡ್ಡಬಳ್ಳಾಪುರದಿಂದ ನಮ್ಮ ನಗರಕ್ಕೆ ಆಮದು ಮಾಡಿಕೊಳ್ಳುತ್ತದೆ. ಅಲ್ಲಿಂದ ಯಾಕೆ ತರಿಸುವುದು ಎಂದರೆ ಒಳ್ಳೆಯ ಕ್ವಾಲಿಟಿಯ ರಿಂಗ್ ಮತ್ತು ಮುಚ್ಚಳ ಸಿಗುತ್ತದೆ ಎನ್ನುವ ಕಾರಣಕ್ಕೆ.
ಕಳಪೆ ಗುಣಮಟ್ಟದ ಬಾಯಿ ನಮ್ಮ ರಸ್ತೆಗಳಿಗೆ…
ನಮ್ಮ ಪಾಲಿಕೆಯಲ್ಲಿ ಗುತ್ತಿಗೆ ತೆಗೆದುಕೊಳ್ಳುವ ವ್ಯಕ್ತಿಗಳು ಪಾಲಿಕೆಯ ಮಾತ್ರವಲ್ಲ ಹೊರಗಿನ ವ್ಯಕ್ತಿಗಳ ಕೆಲಸಗಳ ಆರ್ಡರ್ ಗಳನ್ನು ಕೂಡ ತೆಗೆದುಕೊಂಡಿರುತ್ತಾರೆ. ಅದರಲ್ಲಿ ಖಾಸಗಿ ಜಾಗದಲ್ಲಿ ಮ್ಯಾನ್ ಹೋಲ್ ಗಳ ನಿರ್ಮಾಣ ಕೂಡ ಇರುತ್ತದೆ. ಈ ಗುತ್ತಿಗೆದಾರರು ಏನು ಮಾಡುತ್ತಾರೆ ಎಂದರೆ ದೊಡ್ಡಬಳ್ಳಾಪುರದಿಂದ ಬಂದ ಉತ್ತಮ ದರ್ಜೆಯ ರಿಂಗ್ ಮತ್ತು ಮುಚ್ಚಳವನ್ನು ತಮ್ಮ ಖಾಸಗಿ ಕೆಲಸಗಳನ್ನು ಪಡೆದುಕೊಂಡ ಸ್ಥಳಕ್ಕೆ ವರ್ಗಾಯಿಸುತ್ತಾರೆ. ಖಾಸಗಿಯವರ ಮ್ಯಾನ್ ಹೋಲ್ ಗಳಿಗೆ ಉತ್ತಮ ದರ್ಜೆಯ ರಿಂಗ್ ಮತ್ತು ಮುಚ್ಚಳ ಅಳವಡಿಸುತ್ತಾರೆ. ಅದೇ ಮಂಗಳೂರಿನಲ್ಲಿ ಸ್ಥಳೀಯವಾಗಿ ಸಿಗುವ ಕಳಪೆ ಗುಣಮಟ್ಟದ ರಿಂಗ್ ಮತ್ತು ಮುಚ್ಚಳವನ್ನು ಪಾಲಿಕೆಯ ಮ್ಯಾನ್ ಹೋಲ್ ಗಳಿಗೆ ಶಿಫ್ಟ್ ಮಾಡಿ ಅಲ್ಲಿ ಅಳವಡಿಸುತ್ತಾರೆ. ಇದರಿಂದ ಏನಾಗುತ್ತೆ ಎಂದರೆ ಕಳಪೆ ದರ್ಜೆಯ ಮ್ಯಾನ್ ಹೋಲ್ ಬಾಯಿಗಳ ಮೇಲೆ ಭಾರಿ ಗಾತ್ರದ ಲಾರಿಗಳು ಸಂಚರಿಸಿದಾಗ ಅವು ಹಪ್ಪಳದಂತೆ ಪುಡಿಯಾಗುತ್ತದೆ. ಅದೇ ಈ ಗುತ್ತಿಗೆದಾರರು ಖಾಸಗಿಯವರ ಮ್ಯಾನ್ ಹೋಲ್ ಗಳಿಗೆ ಹಾಕಿದ ರಿಂಗ್ ಮತ್ತು ಮುಚ್ಚಳ ಯಾವ ವಾಹನ ಹೋದರೂ ಏನೂ ಆಗುವುದಿಲ್ಲ.
ಲೇಡಿಹಿಲ್ ನಿಂದ ಬಂದರ್ ಪ್ರದೇಶಗಳಿಗೆ 25-30 ಟನ್ ಭಾರ ಹೊತ್ತು ಚಲಿಸುವ ಲಾರಿಗಳು ಈ ಮ್ಯಾನ್ ಹೋಲ್ ಮೇಲೆ ಚಲಿಸಿದಾಗ ಹಪ್ಪಳದಂತೆ ಅವು ಪುಡಿಯಾಗಿವೆ. ದೊಡ್ಡಬಳ್ಳಾಪುರದಿಂದ ಬರುವ ರಿಂಗ್ ಮತ್ತು ಮುಚ್ಚಳದ ಮೇಲೆ ಎಚ್ ಡಿ ಎಂದು ಬರೆದಿರುತ್ತಾರೆ. ಅದರ್ಥ ಒಳ್ಳೆಯ ಕ್ವಾಲಿಟಿದ್ದು ಎನ್ನುವುದು. ಆದರೆ ಪಾಲಿಕೆಯ ಗುತ್ತಿಗೆದಾರರು ದೊಡ್ಡಬಳ್ಳಾಪುರದಿಂದ ಬರುವ ಮ್ಯಾನ್ ಹೋಲ್ ಬಾಯಿಗಳನ್ನು ಸ್ಥಳೀಯ ರಿಂಗ್ ಮತ್ತು ಮುಚ್ಚಳಗಳೊಂದಿಗೆ ಅದಲು ಬದಲು ಮಾಡುವುದರಿಂದ ಕಳಪೆ ಗುಣಮಟ್ಟದ್ದು ಸರಕಾರಿ ಮ್ಯಾನ್ ಹೋಲ್ ಗಳಿಗೆ ಉತ್ತಮ ಗುಣಮಟ್ಟದ್ದು ಖಾಸಗಿಯವರಿಗೆ ಹೋಗಿರುತ್ತದೆ. ಆದರೆ ಅಂತಹ ಎಷ್ಟು ರಿಂಗ್ ಮತ್ತು ಮುಚ್ಚಳ ಪಾಲಿಕೆಯ ಮ್ಯಾನ್ ಹೋಲ್ ಗಳಿಗೆ ಉಪಯೋಗಿಸಿದ್ದಾರೆ ಎನ್ನುವುದು ಪತ್ತೆ ಹಚ್ಚಬೇಕು.
ಪಾಲಿಕೆ ರಿಂಗ್ ಮತ್ತು ಮುಚ್ಚಳದ ಮೇಲೆ ಎಂಸಿಸಿ ಎಂದು ಬರೆಯಿರಿ…
ನಾನು ಪಾಲಿಕೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದು ಸಲಹೆ ಕೊಟ್ಟಿದ್ದೇನೆ. ಅದೇನೆಂದರೆ ದೊಡ್ಡಬಳ್ಳಾಪುರದಿಂದ ಮಂಗಳೂರಿಗೆ ರಿಂಗ್ ಮತ್ತು ಮುಚ್ಚಳ ಬರುವಾಗ ಅಲ್ಲಿಯೇ ಅದರ ಮೇಲೆ ಎಂಸಿಸಿ ಎಂದು ದಪ್ಪ ಅಕ್ಷರದಲ್ಲಿ ಬರೆಯಬೇಕು. ಇದರಿಂದ ಏನಾಗುತ್ತೆ ಎಂದರೆ ಪಾಲಿಕೆಗೆಂದು ಬಂದು ಮ್ಯಾನ್ ಹೋಲ್ ಬಾಯಿಗಳು ಪಾಲಿಕೆಯ ಮ್ಯಾನ್ ಹೋಲ್ ಗಳಿಗೆ ಬಿಟ್ಟು ಬೇರೆ ಕಡೆ ಗುತ್ತಿಗೆದಾರರು ಉಪಯೋಗಿಸಿದರೆ ಅದು ತಕ್ಷಣ ಗೊತ್ತಾಗಿಬಿಡುತ್ತದೆ. ಇದರಿಂದ ಯಾರು ಪಾಲಿಕೆಯ ಮ್ಯಾನ್ ಹೋಲ್ ಬಾಯಿಗಳನ್ನು ಖಾಸಗಿಯವರಿಗೆ ಸಾಗಿಸಿದ್ದಾರೆ ಎನ್ನುವುದು ಕೂಡ ತಿಳಿಯುತ್ತದೆ. ನೀವು ಗ್ಯಾಸ್ ಸಿಲಿಂಡರ್ ಗಳನ್ನು ಗಮನಿಸಿರಬಹುದು. ಸಬ್ಸಿಡಿ ಇರುವ ಗ್ಯಾಸ್ ಸಿಲಿಂಡರ್ ಗಳಾದರೆ ಅದರ ಮೇಲೆ ಇರುವ ಬಣ್ಣ ಬೇರೆ. ಅದೇ ಸಬ್ಸಿಡಿ ಇಲ್ಲದ ಖಾಸಗಿ ಸಿಲಿಂಡರ್ ಗಳಾದರೆ ಅದರ ಮೇಲೆ ಇರುವ ಬಣ್ಣ ಬೇರೆ. ಇದರಿಂದ ಏನಾಗುತ್ತದೆ ಎಂದರೆ ಹೋಟೇಲ್ ಗಳು, ಈ ರಸ್ತೆ ಬದಿಯಲ್ಲಿ ಕ್ಯಾಂಟೀನ್, ಕಮರ್ಶಿಯಲ್ ಜಾಗಗಳಲ್ಲಿ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬಳಸಿದರೆ ಅಲ್ಲಿ ದಾಳಿ ಮಾಡಿ ಅಕ್ರಮ ಮಾಡುತ್ತಿರುವವರನ್ನು ಬಂಧಿಸಬಹುದು. ಹಾಗೆ ಇಲ್ಲಿ ಕೂಡ ಮಾಡಿದರೆ ನಮ್ಮ ಮ್ಯಾನ್ ಹೋಲ್ ಗಳಿಗೆ ಉತ್ತಮ ಗುಣಮಟ್ಟದ ರಿಂಗ್ ಮತ್ತು ಮುಚ್ಚಳ ಸಿಗುತ್ತದೆ, ಇಲ್ಲದಿದ್ದರೆ!!
Leave A Reply