ಷಾ ಸೇರಿ ಬಿಜೆಪಿ ಸಾಮಾನ್ಯ ಕಾರ್ಯಕರ್ತನ ಜೊತೆ ಚೀಟಿ ಇಲ್ಲದೇ ಸಂವಾದ ನಡೆಸಿ: ರಾಗಾಗೆ ಇರಾನಿ ಸವಾಲು

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ಕೇಂದ್ರ ಜವಳಿ ಇಲಾಖೆ ಖಾತೆ ಸಚಿವೆ ಸ್ಮೃತಿ ಇರಾನಿ ಸರಳ ಸವಾಲು ಹಾಕಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಅಣಕವಾಡಿದ್ದಾರೆ. ರಾಹುಲ್ ಗಾಂಧಿ ಅವರಿಗೆ ತಾಕತ್ತಿದ್ದರೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸೇರಿ ದೇಶದ ಯಾವುದೇ ಭಾಗದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನೊಂದಿಗೆ ಯಾವುದೇ ಚೀಟಿ, ದಾಖಲೆಯಿಲ್ಲದೇ ಸಂವಾದ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ದೇಶ, ವಿದೇಶದ ಯಾವುದೇ ವಿಷಯದ ಕುರಿತು, ಬಿಜೆಪಿಯ ಸದಸ್ಯರಾದ ಯಾರನ್ನೇ ಆಯ್ಕೆ ಮಾಡಿಕೊಂಡರು ಬಿಜೆಪಿಯವರು ಸಂವಾದಕ್ಕೆ ಸದಾ ಸಿದ್ಧ ಎಂದು ಹೇಳಿದ್ದಾರೆ. ಸಂಸತ್ತಿನಲ್ಲಿ ವಾದ ಮಾಡಲು ಆಗದೇ ಇದ್ದರೇ, ಟಿವಿ ಮಾಧ್ಯಮದಲ್ಲಿ ನೇರ ಸಂವಾದ ನಡೆಸಲಿ. ನಾವು ಸಂವಾದಕ್ಕೆ ಸಿದ್ಧರಿದ್ದೇವೆ. ಆದರೆ ಸಂವಾದದಲ್ಲಿ ಯಾವುದೇ ಚೀಟಿ, ಕಾಗದಗಳು ಇರಕೂಡದು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆ ಮತ್ತು ಪೆಟ್ರೋಲ್ ಬೆಲೆ ಏರಿಕೆ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಸ್ಮೃತಿ ಇರಾನಿ ‘ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ ಕಂಡಿದೆ. ಇಡೀ ವಿಶ್ವ ಇದರಿಂದ ಪ್ರಭಾವಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ಚುನಾವಣೆ ವೇಳೆಯಲ್ಲಿ ರಾಹುಲ್ ಗಾಂಧಿ ಚೀಟಿ ಇಲ್ಲದೇ 15 ನಿಮಿಷ ನಿರರ್ಗಳವಾಗಿ ಮಾತನಾಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ದರು.
Leave A Reply