ಯೋಗಿ ಆದಿತ್ಯನಾಥರ ನೋಟಿಸ್ ಗೆ ಮಣಿದ ಮಾಯಾವತಿ, ಕೊನೆಗೂ ಸರ್ಕಾರಿ ಬಂಗಲೆ ತೊರೆದ ಕುಮಾರಿ
ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಹಲವು ವರ್ಷಗಳವರೆಗೂ ಆಡಳಿತ ನಡೆಸಿದ ಬಳಿಕವೂ, ಅಧಿಕಾರದಿಂದ ಇಳಿದ ಬಳಿಕವೂ ಹಲವು ರಾಜಕಾರಣಿಗಳು ಸರ್ಕಾರಿ ಬಂಗಲೆಯಲ್ಲಿ ಆರಾಮವಾಗಿ ವಾಸಿಯಾಗಿದ್ದರು. ಆದರೆ ವ್ಯಕ್ತಿಯೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲಿಸಿದ್ದ ಸುಪ್ರೀಂ ಕೋರ್ಟ್ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ರಾಜಕಾರಣಿಗಳಿಗೆ ಸೂಚಿಸಿತ್ತು.
ಸುಪ್ರೀಂ ಕೋರ್ಟೇ ಗಂಟು ಮೂಟೆ ಕಟ್ಟುವಂತೆ ಆದೇಶ ನೀಡಿದ್ದರೂ, ಮುಲಾಯಂ ಸಿಂಗ್ ಯಾದವ್, ಮಾಯಾವತಿ ಸೇರಿ ಹಲವು ರಾಜಕಾರಣಿಗಳು ಇನ್ನೂ ಸರ್ಕಾರಿ ಬಂಗಲೆಯಲ್ಲೇ ವಾಸ ಮಾಡಿದ್ದರು. ಆದರೆ ಯೋಗಿ ಆದಿತ್ಯನಾಥರು ಸುಮ್ಮನಿರಬೇಕಲ್ಲ, ಯಾರು ಅಧಿಕಾರವಿಲ್ಲದಿದ್ದರೂ ಸರ್ಕಾರಿ ಬಂಗಲೆಯಲ್ಲಿದ್ದಾರೋ, ಅವರೆಲ್ಲ ಕೂಡಲೇ ಗಂಟು ಮೂಟೆ ಕಟ್ಟಬೇಕು ಎಂದು ನೋಟಿಸ್ ಕಳುಹಿಸಿದ್ದರು.
ಹೀಗೆ ಯೋಗಿ ಆದಿತ್ಯನಾಥರು ಕಳುಹಿಸಿದ ನೋಟಿಸ್ ನಂತೆ ಅನಿವಾರ್ಯವಾಗಿ ಮುಲಾಯಂ ಸಿಂಗ್ ಸೇರಿ ಹಲವು ರಾಜಕಾರಣಿಗಳು ಸರ್ಕಾರಿ ಬಂಗಲೆ ಖಾಲಿ ಮಾಡಿದ್ದರು. ಆದರೂ ಮಾಯಾವತಿಯವರು ಮಾತ್ರ ಬಂಗಲೆ ಖಾಲಿ ಮಾಡಿರಲಿಲ್ಲ.
ಅದೂ ಅಲ್ಲದೆ, ಸರ್ಕಾರಿ ಬಂಗಲೆಯಲ್ಲೇ ಉಳಿಯುವ ದೃಷ್ಟಿಯಿಂದ ಉಪಾಯ ಮಾಡಿದ್ದ ಮಾಯಾವತಿ, ತಾವು ವಾಸಿಸಿದ್ದ ಸರ್ಕಾರಿ ಬಂಗಲೆಯ ಹೆಸರನ್ನು ಬಿಎಸ್ಪಿ ಸಂಸ್ಥಾಪಕರಾದ ಕಾನ್ಶಿರಾಮ್ ಹೆಸರಲ್ಲಿ, ಕಾನ್ಶಿರಾಂ ಯಾದ್ಗಾರ್ ವಿಶ್ರಾಮ್ ಸ್ಥಳ ಎಂದು ಹೆಸರಿಟ್ಟಿದ್ದಲ್ಲದೆ, ಅದೊಂದು ಸ್ಮಾರಕ ಎಂದು ಕರೆದಿದ್ದರು.
ಆದರೆ ಕೊನೆಗೂ ಸುಪ್ರೀಂ ಕೋರ್ಟ್ ಆದೇಶ ಹಾಗೂ ಉತ್ತರ ಪ್ರದೇಶ ಸರ್ಕಾರದ ನೋಟಿಸ್ ಗೆ ಮಣಿದಿರುವ ಮಾಜಿ ಮುಖ್ಯಮಂತ್ರಿ ಮಾಯಾವತಿಯವರು ತಾವು ತಂಗಿದ್ದ 13 ಎ ಮಾಲ್ ಅವೆನ್ಯೂ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಪ್ರಸ್ತುತ ತಮ್ಮ ವಸತಿಯನ್ನು ಮಾಯಾವತಿಯವರು 9 ಮಾಲ್ ಅವೆನ್ಯೂಗೆ ಸ್ಥಳಾಂತರಿಸಿದ್ದಾರೆ. ಅಂತೂ ಸುಪ್ರೀಂ ಕೋರ್ಟ್ ಆದೇಶ ಹಾಗೂ ಉತ್ತರ ಪ್ರದೇಶ ಸರ್ಕಾರದ ಕ್ರಮದಂತೆ, ಅವಧಿ ಮುಗಿದರೂ ಸರ್ಕಾರಿ ಬಂಗಲೆಯಲ್ಲಿ ತಿಂದುಂಡು ವಾಸವಾಗಿದ್ದ ರಾಜಕಾರಣಿಗಳು ಕಾಲ್ಕೀಳುವಂತಾಗಿದೆ.
Leave A Reply